ADVERTISEMENT

ಶೀಘ್ರ 14 ವಾರ್ಡ್‌ಗಳಲ್ಲಿ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 8:50 IST
Last Updated 19 ನವೆಂಬರ್ 2012, 8:50 IST

ಹುಬ್ಬಳ್ಳಿ: ಅವಳಿ ನಗರದಲ್ಲಿ ರೂ 111 ಕೋಟಿ ವೆಚ್ಚದಲ್ಲಿ ಹೊಸದಾಗಿ 14 ವಾರ್ಡ್ ಗಳಲ್ಲಿ 24x7 ನೀರಿನ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.ಇಲ್ಲಿನ ಸರ್ಕಿಟ್‌ಹೌಸ್‌ನಲ್ಲಿ ಭಾನುವಾರ ಪಾಲಿಕೆ ಮೇಯರ್ ಡಾ.ಪಾಂಡುರಂಗ ಪಾಟೀಲ ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಮಗಾರಿ ಕೈಗೆತ್ತಿಕೊಳ್ಳಲು ಶನಿವಾರ ಟೆಂಡರ್ ಕರೆಯಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಜನವರಿ ಮೊದಲ ವಾರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಎಂಟು ವಾರ್ಡ್‌ಗಳಲ್ಲಿ 24x7 ವ್ಯವಸ್ಥೆಯಡಿ ನೀರಿನ ಪೂರೈಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಈ ಕಾಮಗಾರಿ ಪೂರ್ಣಗೊಂಡಲ್ಲಿ ಶೇ 34ರಷ್ಟು ಪ್ರದೇಶದಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು. ಈ ಯೋಜನೆಗೆ ಪಾಲಿಕೆಯಲ್ಲಿ ಉಳಿತಾಯ ಮಾಡಲಾಗಿದ್ದ ರೂ 40 ಕೋಟಿ ಹಾಗೂ ತಮ್ಮ ಅವಧಿಯಲ್ಲಿ ಬಿಡುಗಡೆ ಮಾಡಿದ 71 ಕೋಟಿ ರೂಪಾಯಿ ಸೇರಿಸಿ ಯೋಜನೆ ರೂಪಿಸಲಾಗಿದೆ ಎಂದರು.

ಮೂರನೇ ಹಂತದಲ್ಲಿ ಅವಳಿ ನಗರದ ರಸ್ತೆ ನಿಧಿಯಲ್ಲಿ ಉಳಿದಿರುವ ರೂ 15 ಕೋಟಿ ಹಾಗೂ ಪಾಲಿಕೆಯಿಂದ 10 ಕೋಟಿ ಸೇರಿಸಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನಷ್ಟು ವಾರ್ಡ್‌ಗಳಲ್ಲಿ ದಿನದ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ನಾಲ್ಕನೇ ಹಂತದಲ್ಲಿ ಅವಳಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ನವಲಗುಂದ, ಕುಂದಗೋಳ ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಸಲು ಅವಳಿ ನಗರದ ಪೈಪ್‌ಲೈನ್ ಜಾಲದಿಂದ ಪ್ರತ್ಯೇಕ ಪೂರೈಕೆ ವ್ಯವಸ್ಥೆ ಮಾಡಲಾಗುವುದು ಎಂದರು.ಸಭೆಯಲ್ಲಿ ಶಾಸಕರಾದ ಎಸ್.ಐ.ಚಿಕ್ಕನಗೌಡ್ರ, ಸೀಮಾ ಮಸೂತಿ, ಸಂಸದ ಪ್ರಹ್ಲಾದ ಜೋಶಿ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಪಾಲಿಕೆ ಆಯುಕ್ತ ವೈ.ಎಸ್.ಪಾಟೀಲ, ಜಲಮಂಡಳಿ ಎಂಜಿನಿಯರ್ ಜಯರಾಮ್ ಮತ್ತಿತರರು ಪಾಲ್ಗೊಂಡಿದ್ದರು. 
 
 ಹೊಸದಾಗಿ ಯೋಜನೆ ವ್ಯಾಪ್ತಿಗೊಳಪಡುವ ವಾರ್ಡ್‌ಗಳು
ಹುಬ್ಬಳ್ಳಿಯ ವಾರ್ಡ್ ಸಂಖ್ಯೆ 31,34,48, 51,52,54,55,56,66 ಹಾಗೂ ಧಾರವಾಡದ 4,14,15,16ಮತ್ತು 19 ಈ ಯೋಜನೆಯ ವ್ಯಾಪ್ತಿಗೆ ಬರಲಿವೆ. ಜನವರಿಯಿಂದ ಕಾಮಗಾರಿ ಆರಂಭವಾದರೆ 2013ರ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣ ಗೊಳ್ಳಲಿದೆ ಎಂದು ಮೇಯರ್ ಡಾ.ಪಾಂಡುರಂಗ ಪಾಟೀಲ ಪತ್ರಿಕೆಗೆ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.