ADVERTISEMENT

ಸಂಕ್ರಾಂತಿ ಭೋಜನದ ಸವಿ!

ಪ್ರಸನ್ನಕುಮಾರ ಹಿರೇಮಠ
Published 16 ಜನವರಿ 2012, 5:50 IST
Last Updated 16 ಜನವರಿ 2012, 5:50 IST

ಹುಬ್ಬಳ್ಳಿ: ಮಧ್ಯಾಹ್ನವಾದರೂ ಭಾನುವಾರ ಅವಳಿನಗರದಲ್ಲಿ ಚುಮುಚುಮು ಚಳಿ. ಚಳಿಗೆ ಕೈಜೋಡಿಸಿ ಯುಗಳ ಗೀತೆ ಹಾಡಿದ ಸಂಕ್ರಾಂತಿ ಭೋಜನದ ಸವಿ!

ಸಂಕ್ರಮಣದ ದಿನ ಮನೆಯಿಂದ ಹೊರಗೆ ಹೋಗಿ ಊಟ ಮಾಡುವುದು ಇಲ್ಲಿನ ಸಂಪ್ರದಾಯ. ಹೀಗಾಗಿ ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಮಹಾತ್ಮ ಗಾಂಧಿ ಉದ್ಯಾನ, ಧಾರವಾಡದ ಆಝಾದ್ ಪಾರ್ಕ್, ಶಾಲ್ಮಲಾ ಉಗಮ ಸ್ಥಾನ... ಮೊದಲಾದೆಡೆ ಜನಜಾತ್ರೆಯೇ ಸೇರಿತ್ತು.

ಖಡಕ್ ಸಜ್ಜಿ ರೊಟ್ಟಿ, ಚಪಾತಿ ಪಲ್ಯ, ಮುಳಗಾಯಿ ಎಣಗಾಯಿ, ಶೇಂಗಾ ಚಟ್ನಿ, ಮೇಲೊಂದಿಷ್ಟು ಕೆನೆ ಮೊಸರು... ಆಹಾ...! ಬಾಯಲ್ಲಿ ನೀರೂರಿತೆ ? ಸ್ವಲ್ಪ ತಾಳಿ. ಇನ್ನೂ ಮುಗಿದಿಲ್ಲ.. ಸಬ್ಬೆ ಸೊಪ್ಪು- ಹೆಸರು ಕಾಳು ಪಲ್ಯ, ಶೇಂಗಾ ಹೋಳಿಗೆ, ಹುಳಿ ಬುತ್ತಿ, ಮೊಸರನ್ನ, ಮಾದ್ಲಿ... ಹೀಗೆ ಹಲವು ಬಗೆಯ ತಿನಿಸುಗಳು ಹಬ್ಬದ ಊಟಕ್ಕೆ ಕಳೆಗಟ್ಟಿಸಿದ್ದವು.

ಹೊಟ್ಟೆ ತುಂಬಿ ಬಿರಿದರೂ ಹಬ್ಬಕ್ಕಾಗಿ ಸಿದ್ಧಪಡಿಸಲಾಗಿದ್ದ ಎಲ್ಲ ತಿನಿಸುಗಳನ್ನೂ ತಿನ್ನಲೇಬೇಕು ಎನ್ನುವ ಪ್ರೀತಿಯ ಕಟ್ಟಪ್ಪಣೆ ಮುದ ನೀಡುವಂತಿತ್ತು.

ಭೋಜನದ ನಂತರ ಬಾಳೆಹಣ್ಣು, ಪಾನ್ ತಿನ್ನಲೂ ಹೊಟ್ಟೆಯಲ್ಲಿ ಜಾಗವಿರಲಿಲ್ಲ ಎನ್ನಿ.
ಇವೆಲ್ಲ ಸಂಕ್ರಾಂತಿ ಭೋಜನದ ವಿಶೇಷತೆಗಳು. ಹಬ್ಬ ಅಂದ್ರೆನೆ ಊಟ. ಅದರಲ್ಲೂ ಸಂಕ್ರಾಂತಿ ಊಟದ ಸವಿ ಉಳಿದೆಲ್ಲದಕ್ಕಿಂತ ಭಿನ್ನ. ಮಾತಿನ ನಡುವೆ ಊಟ ಖಾಲಿಯಾಗಿದ್ದೇ ಗೊತ್ತಾಗುತ್ತಿರಲಿಲ್ಲ.

ಊಟ ಮುಗಿಸಿ ಮೇಲೇಳುವ ಹೊತ್ತಿಗೆ ನಿದ್ದೆಯೂ ಶುರು. ವಿಶ್ರಾಂತಿಗಾಗಿ ಉದ್ಯಾನದಲ್ಲಿಯೇ ಮೈಯೊಡ್ಡಿ ಒಂದಿಷ್ಟು ನಿದ್ದೆ. ಆಮೇಲೆ ಮಕ್ಕಳು, ಮನೆಯವರೊಂದಿಗೆ ಮಾತು, ಹರಟೆ. ಮಕ್ಕಳ ಆಟ.

ಸಂಜೆಗತ್ತಲು ಸೋಮವಾರಕ್ಕೆ ಮುನ್ನುಡಿ ಬರೆಯುತ್ತಿದ್ದಂತೇ ಮನೆಯತ್ತ ಹೆಜ್ಜೆ. ನಂತರ ಎಳ್ಳು-ಬೆಲ್ಲ ವಿನಿಮಯದ ಸಂಭ್ರಮ.

ಪ್ರವೇಶ ನಿಷೇಧ: ಹುಬ್ಬಳ್ಳಿಯ ಉಣಕಲ್ಲ ಉದ್ಯಾನದಲ್ಲಿ ಸಂಕ್ರಾಂತಿ ಭೋಜನ ಮಾಡಬೇಕು ಎಂಬ ಅಪೇಕ್ಷೆಗೆ ಈ ಬಾರಿ ಅವಕಾಶ ಇರಲಿಲ್ಲ. ಉಣಕಲ್ಲ ಉದ್ಯಾನ ನವೀಕರಣಗೊಳ್ಳುತ್ತಿರುವುದರಿಂದ ಜಿಲ್ಲಾಡಳಿತ ಪ್ರವೇಶಕ್ಕೆ ನಿರ್ಬಂಧವನ್ನು ಹೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.