ADVERTISEMENT

ಸಂಸದರ ಸಭೆಯಲ್ಲಿ ಗ್ಯಾಸ್ ಏಜೆನ್ಸಿಗಳ ವಿರುದ್ಧ ಗ್ರಾಹಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 5:20 IST
Last Updated 16 ಫೆಬ್ರುವರಿ 2012, 5:20 IST

ಹುಬ್ಬಳ್ಳಿ: `ಗ್ಯಾಸ್ ಏಜೆನ್ಸಿಗಳಲ್ಲಿ ಐಎಎಸ್,ಐಪಿಎಸ್ ಅಧಿಕಾರಿಗಳು ಕೆಲಸಕ್ಕಿದ್ದಾರೆ ನಮ್ಮ ಫೋನ್ ಎತ್ತಲು ಅವರಿಗೆ ಸಮಯವಿಲ್ಲ...~ `ಕಮರ್ಷಿಯಲ್ ಸಿಲೆಂಡರ್‌ಗಳ ಪೂರೈಕೆಗೆ ಆಗದ ಅಭಾವ ಗೃಹಬಳಕೆ ಸಿಲಿಂಡರ್‌ಗೆ ಏಕೆ?~ `ಹಿಂದಿನ ಪಾಲಿಕೆ ಆಯುಕ್ತ ಮಣಿವಣ್ಣನ್, ಈಗಿನ ಜಿಲ್ಲಾಧಿಕಾರಿ ದರ್ಪಣ್ ಜೈನ್ ಕನ್ನಡ ಕಲಿತಿದ್ದಾರೆ. ನೀವ್ಯಾಕೆ ಕನ್ನಡ ಕಲಿತಿಲ್ಲ?~ `ಮೈಗೆ ಸುರಿದುಕೊಂಡು ಸಾಯುತ್ತೇವೆ ಎಂದು ಕೇಳಿದರೂ ಚಿಮಣಿ ಎಣ್ಣೆ ಸಿಗುವುದಿಲ್ಲ. ಕಟ್ಟಿಗೆ ದುಬಾರಿ, ಸಿಲಿಂಡರ್ ಕೊಡದಿದ್ದರೆ ನಾವೇನು ಮಾಡೋದು?~....

ಇವು ಬುಧವಾರ ಸಂಸದ ಪ್ರಹ್ಲಾದ್ ಜೋಶಿ ಅವರ ಕಚೇರಿಯಲ್ಲಿ ಸಿಲಿಂಡರ್ ಪೂರೈಕೆ ಅಭಾವ ಕುರಿತು ಗ್ಯಾಸ್ ಏಜೆನ್ಸಿ ಮಾಲೀಕರು, ತೈಲ ಕಂಪೆನಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಗ್ರಾಹಕರಿಂದ ಕೇಳಿಬಂದ ಆಕ್ರೋಶ ಹಾಗೂ ವ್ಯಂಗ್ಯಭರಿತ ಪ್ರಶ್ನೆಗಳು.

ಸಂಸದ ಪ್ರಹ್ಲಾದ ಜೋಶಿ, ಮೇಯರ್ ಪೂರ್ಣಾ ಪಾಟೀಲ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ನೂರ್ ಮನ್ಸೂರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಗ್ಯಾಸ್ ಏಜೆನ್ಸಿಗಳಿಂದ ತಾವು ಅನುಭವಿಸುತ್ತಿರುವ ತೊಂದರೆ, ತೈಲ ಕಂಪೆನಿಗಳ ನಿಷ್ಕ್ರೀಯತೆ, ನಗರದಲ್ಲಿ ಅಕ್ರಮ ಸಿಲಿಂಡರ್ ಅವ್ಯಾಹತ ಮಾರಾಟ ಹಾಗೂ ಅದನ್ನು ನಿಯಂತ್ರಿಸಬೇಕಾದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳ ವೈಫಲ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಹಕರ ಗದ್ದಲ ನಿಯಂತ್ರಿಸಲು ಸಭೆಯ ಒಂದು ಹಂತದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಬೇಕಾಯಿತು.
 
ಸಭೆಗೆ ಆರಂಭದಲ್ಲಿ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಕಲ್ಲನಗೌಡರ್, ಧಾರವಾಡ-ಹುಬ್ಬಳ್ಳಿ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಎಚ್‌ಪಿಸಿಎಲ್,ಬಿಪಿಸಿಎಲ್ ಹಾಗೂ ಐಒಸಿಎಲ್ ಕಂಪೆನಿಗಳು ಏಜೆನ್ಸಿಗಳ ಮೂಲಕ ಗ್ರಾಹಕರಿಗೆ ಅನಿಲ ಸಿಲಿಂಡರ್ ಪೂರೈಸುತ್ತಿವೆ. 2,73,026 ಗ್ರಾಹಕರು ಇದ್ದು, ಕಳೆದ ನವೆಂಬರ್‌ನಲ್ಲಿ 1,76,026, ಡಿಸೆಂಬರ್‌ನಲ್ಲಿ 1,70,580 ಹಾಗೂ ಜನವರಿಯಲ್ಲಿ 1,51,775 ಸಿಲಿಂಡರ್, ಫೆಬ್ರುವರಿ 14ರವರೆಗೆ 77,664 ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಪೂರೈಸಲಾಗಿದೆ.
 
73 ಸಾವಿರ ಗ್ರಾಹಕರು ಕಾಯ್ದಿರಿಸುವ ಪಟ್ಟಿಯಲ್ಲಿದ್ದು, 38 ಸಾವಿರ ಗ್ರಾಹಕರಿಗೆ ಮುಂದಿನ 10ರಿಂದ 25 ದಿನಗಳಲ್ಲಿ ಸಿಲಿಂಡರ್ ಪೂರೈಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಭೆಗೆ ವಿವರಣೆ ನೀಡಿದ ಎಚ್‌ಪಿಸಿಎಲ್ ಕಂಪೆನಿ ಅಧಿಕಾರಿ ರಾಜೀವ ಹಾಗರಗಿ, ಜನವರಿ 13ರಿಂದ 20ರವರೆಗೆ ಅನಿಲ ಸಾಗಣೆ ಲಾರಿ ಮಾಲೀಕರು ಮುಷ್ಕರ ನಡೆಸಿದ್ದರಿಂದ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.
 
ಇದೀಗ ಮಂಗಳೂರಿನ ಎನ್‌ಎಂಪಿಟಿ ಬಂದರಿನ ಕಚ್ಛಾ ಅನಿಲ ಪೂರೈಕೆ ವ್ಯವಸ್ಥೆಯ ಆಧುನೀಕರಣ ಕಾಮಗಾರಿ ನಡೆದಿದ್ದು, ಅನಿಲ ಪೂರೈಕೆಗೆ ಅಡಚಣೆಯಾಗಿದೆ. ಇದರಿಂದ ಗ್ರಾಹಕರಿಗೆ ಪೂರೈಕೆಯಲ್ಲಿ ತೊಂದರೆಯಾಗಿದೆ. ಫೆಬ್ರುವರಿ ಕೊನೆಯ ವೇಳೆಗೆ ಸಮಸ್ಯೆ ಬಗೆಹರಿಯಲಿದೆ. ನಂತರ ಎಂದಿನಂತೆ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದರು.

ಬುಕ್ಕಿಂಗ್ ಮಾಡಿ 48ರಿಂದ 50 ದಿನ ಕಳೆದರೂ ಸಿಲಿಂಡರ್ ಕೊಡು ವುದಿಲ್ಲ. ಫೋನ್ ಮಾಡಿದರೆ ಎತ್ತು ವುದಿಲ್ಲ. ಏಜೆನ್ಸಿಗೆ ವಿಚಾರಿಸಲು ತೆರಳಿದರೆ ನಮ್ಮನ್ನು ನಾಯಿಗಳ ರೀತಿ ಕಾಣುತ್ತಾರೆ. ಪುಕ್ಕಟೆ ಸಿಲಿಂಡರ್ ಪೂರೈಸುವವರಂತೆ ದರ್ಪದಿಂದ ಮಾತನಾಡುತ್ತಾರೆ. ಅಲ್ಲಿಯ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಾರೆ.

ಪ್ರತಿಭಟನೆ ಮಾಡಿದಾಗ ನಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾರೆ. ಹೊಸ ಗ್ಯಾಸ್ ಸಂಪರ್ಕ ಕೇಳಿದರೆ ಜೊತೆಗೆ ಬೇರೆ ಬೇರೆ ವಸ್ತುಗಳನ್ನು ಕೊಳ್ಳುವಂತೆ ಒತ್ತಾಯ ಹೇರುತ್ತಾರೆ. ಯಾವುದೇ ನಿಯಮಾವಳಿ ಇಲ್ಲದಿದ್ದರೂ 21 ದಿನಗಳ ಒಳಗೆ ಸಿಲಿಂಡರ್ ನೀಡುವುದಿಲ್ಲ ಎನ್ನುತ್ತಾರೆ ಎಂದು ಗ್ರಾಹಕರು ದೂರುಗಳ ಸುರಿ ಮಳೆಯನ್ನು ಹರಿಸಿದರು.

ನಗರದ ಪ್ರಕಾಶ ಗ್ಯಾಸ್ ಏಜೆನ್ಸಿ, ರೇಣುಕಾ ಗ್ಯಾಸ್ ಏಜೆನ್ಸಿ, ಸಿದ್ಧಲಿಂಗೇಶ್ವರ ಏಜೆನ್ಸಿ, ದೇಸಾಯಿ ಗ್ಯಾಸ್ ಏಜೆನ್ಸಿ, ರೇವಣ ಕರ್ ಏಜೆನ್ಸಿ  ಸೇರಿದಂತೆ ವಿವಿಧ ಗ್ಯಾಸ್ ಏಜೆನ್ಸಿಗಳ ಬಗ್ಗೆ ದೂರು ಹೇಳಿದರು. ಗ್ರಾಹಕರನ್ನು ಸಮಾಧಾನ ಪಡಿಸಿದ ಸಂಸದರು ಫೆಬ್ರುವರಿ ಅಂತ್ಯದ ನಂತರ ಗ್ರಾಹಕರು ಕೇಳಿದ ಮೂರು ದಿನಗಳ ಒಳಗೆ ಸಿಲಿಂಡರ್ ಪೂರೈಸುವಂತೆ ಜೋಶಿ ಸೂಚನೆ ನೀಡಿದರು.
 
ಹಳೇ ಹುಬ್ಬಳ್ಳಿಯಲ್ಲಿ ಆಟೋ ಗಳಿಗೆ ನಿತ್ಯ ರಾಜಾರೋಷವಾಗಿ 150ರಿಂದ 200 ಸಿಲಿಂಡರ್ ರೀ ಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಗ್ರಾಹಕ ರೊಬ್ಬರು ಸಭೆಯ ಗಮನ ಸೆಳೆದಾಗ, ಆ ಬಗ್ಗೆ ಪೊಲೀಸ್ ಆಯುಕ್ತರೊಂದಿಗೆ ತಾವು ಮಾತನಾಡುವುದಾಗಿ ಹೇಳಿದ ಜೋಶಿ, ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.