ADVERTISEMENT

ಸಮಸ್ಯೆಗಳಿವೆಯೇ; 10ರಂದು ಬನ್ನಿ!

​ಪ್ರಜಾವಾಣಿ ವಾರ್ತೆ
Published 8 ಮೇ 2012, 9:45 IST
Last Updated 8 ಮೇ 2012, 9:45 IST
ಸಮಸ್ಯೆಗಳಿವೆಯೇ; 10ರಂದು ಬನ್ನಿ!
ಸಮಸ್ಯೆಗಳಿವೆಯೇ; 10ರಂದು ಬನ್ನಿ!   

ಹುಬ್ಬಳ್ಳಿ: `ಹೊಸ ಬಡಾವಣೆಗಳು, ಸಮಸ್ಯೆಗಳು ನೂರೆಂಟು. ಪಾಲಿಕೆಗೆ ದೂರು ನೀಡಿ, ನೀಡಿ ಸಾಕಾಗಿದೆ. ಏನು ಮಾಡುವುದು ತಿಳಿಯದಾಗಿದೆ~ ಎಂಬ ಚಿಂತೆಯಲ್ಲಿ ನೀವಿದ್ದೀರಾ? `ಪ್ರಜಾವಾಣಿ~ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹ ನಿಮ್ಮ ನೋವಿಗೆ ಸ್ಪಂದಿಸಲು ಧಾವಿಸಿದ್ದು, ಆಡಳಿತವನ್ನೇ ಸಮುದಾಯದ ಬಾಗಿಲಿಗೆ ಕರೆತರುತ್ತಿದೆ.

ಜನಸಾಮಾನ್ಯರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅನುವಾಗುವಂತೆ `ಪ್ರಜಾವಾಣಿ~ ಬಳಗ ಇದೇ 10ರಂದು ಸಂಜೆ 4.30ಕ್ಕೆ ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಿದೆ. ವಾರ್ಡ್ ನಂ. 23 ಮತ್ತು 24ರ ವ್ಯಾಪ್ತಿಯ ಸಾರ್ವಜನಿಕರು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಹವಾಲು ಸಲ್ಲಿಸಬಹುದು.

ಮಹಾನಗರ ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ತಮ್ಮ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ), ಹೆಸ್ಕಾಂ, ಪೊಲೀಸ್, ಸಾರಿಗೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗವಹಿಸಿ, ಸಾರ್ವಜನಿಕರ ದೂರು-ದುಮ್ಮಾನ ಗಳಿಗೆ ಸ್ಥಳದಲ್ಲೇ ಸ್ಪಂದಿಸಲಿದ್ದಾರೆ.

ಮೇಯರ್ ಡಾ. ಪಾಂಡುರಂಗ ಪಾಟೀಲ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಈ ಭಾಗದ ಪಾಲಿಕೆ ಸದಸ್ಯರಾದ ಶಾಂತಪ್ಪ ದೇವಕ್ಕಿ ಹಾಗೂ ಚಂದ್ರಶೇಖರ ಮನಗುಂಡಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಹದಗೆಟ್ಟ ರಸ್ತೆ, ಇಲ್ಲದ ಚರಂಡಿ, ಬೆಳಕು ಕಾಣದ ಬೀದಿ, ಕಲ್ಮಶವಾದ ಕುಡಿಯುವ ನೀರು ಸೇರಿದಂತೆ ನಿಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ಹಂಚಿಕೊಂಡು ಸ್ಥಳದಲ್ಲೇ ಪರಿಹಾರ ಪಡೆಯಬಹುದು.
ಎರಡೂ ವಾರ್ಡ್‌ಗಳ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಂಘಟನೆಗಳು ತಮ್ಮ ಭಾಗದ ಸಮಸ್ಯೆಗಳ ಮಾಹಿತಿಯನ್ನು ಕ್ರೋಢಿಕರಿಸಿಕೊಂಡು ತರಬಹುದು. ವೈಯಕ್ತಿಕವಾಗಿಯೂ ಜನ ತಮ್ಮ ದುಮ್ಮಾನು ಹೇಳಿಕೊಳ್ಳಬಹುದು.
 
ರಸ್ತೆ, ಚರಂಡಿ, ಉದ್ಯಾನ, ಕೆರೆ, ಮೈದಾನ, ಬೀದಿದೀಪ, ನೀರು, ಸಾರಿಗೆ ಸೌಲಭ್ಯ ಸೇರಿದಂತೆ ಈ ಪ್ರದೇಶಗಳ ಎಲ್ಲ ಪ್ರಮುಖ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು, ಬಗೆಹರಿಸಿಕೊಳ್ಳಬಹುದು. ಸಾರ್ವ ಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು ಎಂದು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.