ADVERTISEMENT

ಸಾಕಪ್ಪಾ ಸಾಕು ದೂಳಿನ ಮಜ್ಜನ...!

ಮನೋಜ ಕುಮಾರ್ ಗುದ್ದಿ
Published 4 ಸೆಪ್ಟೆಂಬರ್ 2013, 6:23 IST
Last Updated 4 ಸೆಪ್ಟೆಂಬರ್ 2013, 6:23 IST

ಧಾರವಾಡ: ತಿಂಗಳ ಹಿಂದೆ ಸತತ ಮಳೆ ಸುರಿದ ಬಳಿಕ ನಗರದ ಹಲವೆಡೆ ಹೊಸದೊಂದು ಸಮಸ್ಯೆ ಸೃಷ್ಟಿಯಾಗಿದ್ದು, ಡಾಂಬರ್ ರಸ್ತೆ ಕೆಟ್ಟು ಹೋಗಿ ಇಡೀ ರಸ್ತೆಗಳೆಲ್ಲ ದೂಳುಮಯವಾಗಿವೆ. ದೂಳಿನಿಂದಾಗಿ ಬೈಕ್ ಸವಾರರು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ನಿತ್ಯವೂ ಸಾವಿರಾರು ಬೈಕ್ ಸವಾರರು ನಗರದ ಜುಬಿಲಿ ಸರ್ಕಲ್ ಮೂಲಕ ವಿವಿಧೆಡೆ ತೆರಳುತ್ತಾರೆ. ಅಲ್ಲಿ ವಿಪರೀತ ದೂಳು ಆವರಿಸಿದೆ. ಇತ್ತೀಚೆಗೆ ಜಿಲ್ಲಾಡಳಿತ 48 ಲಕ್ಷ ರೂಪಾಯಿಗಳಲ್ಲಿ ಅವಳಿ ನಗರದಲ್ಲಿ ರಸ್ತೆಗಳ ರಿಪೇರಿ ಕಾರ್ಯವನ್ನು ಕೈಗೊಂಡಿತು. ಅದರಲ್ಲಿ ಜುಬಿಲಿ ಸರ್ಕಲ್‌ನ ರಸ್ತೆಗೂ ತೇಪೆ ಬಳಿಯಲಾಗಿತ್ತು, ಆದರೆ ಆ ರಿಪೇರಿ ಬಹಳ ದಿನ ನಿಲ್ಲಲಿಲ್ಲ. ಇದೀಗ ವೃತ್ತದ ರಸ್ತೆ ಮೊದಲಿನ ಸ್ಥಿತಿಗೇ ಬಂದಿದ್ದು, ವಾಹನ ಸವಾರರು ಮೂಗು-ಬಾಯಿಗೆ ಕರವಸ್ತ್ರ ಕಟ್ಟಿಕೊಂಡು ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಆಟೊ ಸವಾರರು, ಸೈಕಲ್ ಮೇಲೆ ಶಾಲೆಗಳಿಗೆ ಹೋಗುವ ಮಕ್ಕಳು, ಸರ್ಕಲ್ ಪಕ್ಕದಲ್ಲಿ ಎಳೆನೀರು, ಬೇಕರಿ ಅಂಗಡಿ, ಚಹಾದ ಅಂಗಡಿ ನಡೆಸುವ ವ್ಯಾಪಾರಿಗಳಿಗೂ ದೂಳು ಸಾಕಾಗಿದೆ. ಬೆಳಿಗ್ಗೆ ಇಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗುವ ಸಂಚಾರ ವಿಭಾಗದ ಪೊಲೀಸರ ಬಿಳಿ ಸಮವಸ್ತ್ರ ಮಧ್ಯಾಹ್ನದ ವೇಳೆಗೆ ಕೆಂಪು ಬಣ್ಣಕ್ಕೆ ತಿರುಗುತ್ತಿದೆ!

ಸಿಗ್ನಲ್ ಬಿದ್ದ ಬಳಿಕ ಭರ್ರನೆ ಓಡುವ ಬಸ್ಸುಗಳ ಹಿಂದೆ ಇರುವ ಬೈಕ್ ಸವಾರರಿಗೇ ಬಸ್ಸು ಎಬ್ಬಿಸಿ ಹೋದ ದೂಳು ಆರೋಗ್ಯ ಸಮಸ್ಯೆಕ್ಕೂ ಕಾರಣವಾಗುತ್ತದೆ ಎಂದು ವೈದ್ಯರು ಆತಂಕದಿಂದ ಹೇಳುತ್ತಾರೆ.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ನಗರದ ವೈದ್ಯ ಡಾ.ಇಕ್ಬಾಲ್ ಶೇಖ್, `ಜುಬಿಲಿ ಸರ್ಕಲ್ ಸೇರಿದಂತೆ ನಗರದ ವಿವಿಧೆಡೆ ವಾಹನ ಸಂಚಾರದ ಸಮಯದಲ್ಲಿ ಏಳುವ ದೂಳು ಬಹಳ ಅಪಾಯಕಾರಿಯಾಗಿದೆ. ಸಿಮೆಂಟ್, ಟಾರ್, ಮಣ್ಣು ಹಾಗೂ ಮಳೆ ಬಂದಾಗ ಚರಂಡಿಯಿಂದ ಬಂದು ನಿಂತ ಕೊಳಚೆ ವಸ್ತುಗಳು ದೂಳಿನ ಮೂಲಕ ಜನರ ದೇಹವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶ ಸಂಬಂಧಿ ಗಂಭೀರ ಕಾಯಿಲೆಗಳು ಬರುತ್ತವೆ. ಮೂಗಿನಿಂದ ನೀರು ಸೇರುವುದು, ಮುಖದಲ್ಲಿ ಗುಳ್ಳೆಗಳಾಗುವುದು ಸಾಮಾನ್ಯ ಲಕ್ಷಣಗಳು' ಎಂದು ಎಚ್ಚರಿಸಿದರು.

`ವಾಹನ ಸವಾರರಿಂದ ರಸ್ತೆ ಶುಲ್ಕವನ್ನು ವಸೂಲಿ ಮಾಡುವ ಸರ್ಕಾರಗಳು ಸರಿಯಾದ ರಸ್ತೆಯನ್ನೂ ನಿರ್ವಹಣೆ ಮಾಡಬೇಕು. ನಗರದಲ್ಲಿ ರಸ್ತೆಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕಾದ ಹೊಣೆ ಹೊತ್ತ ಮಹಾನಗರ ಪಾಲಿಕೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ರಸ್ತೆ ಬಳಕೆ ಮಾಡುವ ವಾಹನ ಸವಾರರು ಗ್ರಾಹಕರಾಗುತ್ತಾರೆ. ಆದ್ದರಿಂದ ಪಾಲಿಕೆ ವಿರುದ್ಧ ಗ್ರಾಹಕ ಆಯೋಗದಲ್ಲಿ ದೂರನ್ನೂ ದಾಖಲು ಮಾಡಬಹುದು' ಎನ್ನುತ್ತಾರೆ ಶೇಖ್.

ಜುಬಿಲಿ ಸರ್ಕಲ್‌ನಲ್ಲಿ ಸಂಚಾರ ನಿರ್ವಹಣೆ ಮಾಡುವ ಪೊಲೀಸ್ ಕಾನ್‌ಸ್ಟೇಬಲ್‌ಗಳು ಕಥೆಯೂ ತಮಾಷೆಯಾಗಿದೆ. `ಡ್ಯೂಟಿಯಿಂದ ನಿತ್ಯವೂ ಸಂಜೆ ಮನೆಗೆ ಹೋದ ಮೇಲೆ ಹೆಂಡತಿಯ ಕಡೆ ಬೈಸಿಕೊಳ್ಳಬೇಕು. ನಿಮ್ಮ ಅಂಗಿ ಎಷ್ಟಂತ ತೊಳೆಯಬೇಕ್ರಿ ಎಂದು ಹೆಂಡತಿ ಸಿಡಿಮಿಡಿಗೊಳ್ಳುತ್ತಾಳೆ' ಎಂದು ಅಲವತ್ತುಕೊಳ್ಳುತ್ತಾರೆ' ಪೊಲೀಸರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.