ADVERTISEMENT

ಸಾಹಿತ್ಯ ಸಂಭ್ರಮವನ್ನು ಮುನ್ನಡೆಸಿದ ದೃಷ್ಟಾರ..

ರಾಷ್ಟ್ರಮಟ್ಟದಲ್ಲಿ ವಿಮರ್ಶಕರಾಗಿ ಗುರುತಿಸಿಕೊಂಡಿದ್ದ ಗಿರಡ್ಡಿ ಗೋವಿಂದರಾಜ

ಮನೋಜ ಕುಮಾರ್ ಗುದ್ದಿ
Published 12 ಮೇ 2018, 6:13 IST
Last Updated 12 ಮೇ 2018, 6:13 IST

ಹುಬ್ಬಳ್ಳಿ: ಗಿರಡ್ಡಿ ಗೋವಿಂದರಾಜ ಹಾಗೂ ಧಾರವಾಡ ಕರ್ನಾಟಕ ಸಾಹಿತ್ಯ ಸಂಭ್ರಮಕ್ಕೂ ಬಿಡಿಸಲಾಗದ ನಂಟು. ಇವೆರಡೂ ಹೆಸರುಗಳು ಒಂದಕ್ಕೊಂದು ಬೆಸೆದುಕೊಂಡಿದ್ದವು ಎನ್ನುವುದೇ ಸರಿಯಾದೀತು.

ವಿಮರ್ಶಕರಾಗಿ ಹೆಸರು ಮಾಡಿದ್ದ ಗಿರಡ್ಡಿ ಅವರು ತಾವು ಓದಿ ಬೆಳೆದ ಧಾರವಾಡಕ್ಕೆ ಸಾಹಿತ್ಯಿಕವಾಗಿ ಇನ್ನಷ್ಟು ಪ್ರಸಿದ್ಧಿ ಕೊಡಿಸಬೇಕು ಎಂದು ಬಯಸಿದ್ದರು. ಅದರ ಫಲವಾಗಿಯೇ ಜೈಪುರ ಸಾಹಿತ್ಯ ಮೇಳದ ಮಾದರಿಯಲ್ಲೇ ‘ಧಾರವಾಡ ಸಾಹಿತ್ಯ ಸಂಭ್ರಮ’ವನ್ನು ಸಂಘಟಿಸಿದರಲ್ಲದೇ, ಅದರ ಅಧ್ಯಕ್ಷರಾಗಿಯೂ ಕಳೆದ ಆರು ವರ್ಷಗಳಿಂದ ನೇತೃತ್ವ ಕೊಟ್ಟಿದ್ದರು.

ಸದಾ ಗಂಭೀರ ವದನರಾಗಿರುತ್ತಿದ್ದ ಗಿರಡ್ಡಿ ಅವರು ಸಾವಿರಾರು ಜನ ಭಾಗವಹಿಸುವ ಸಂಭ್ರಮವನ್ನು ಅದು ಹೇಗೆ ಸಂಘಟಿಸಿಯಾರು ಎಂಬ ಪ್ರಶ್ನೆ ಅವರನ್ನು ಹತ್ತಿರದಿಂದ ಬಲ್ಲವರಲ್ಲಿ ಮೂಡಿತ್ತು. ಅದಕ್ಕೆ ಪ್ರತಿಯಾಗಿ ಸಂಭ್ರಮವನ್ನು ಯಥಾವತ್‌ ಜೈಪುರ ಸಾಹಿತ್ಯೋತ್ಸವದಂತೆ ಆಯೋಜಿಸಲು ಹೊರಟ ಸಂದರ್ಭದಲ್ಲಿ ಕೆಲ ಅಪಸವ್ಯಗಳು ನಡೆದವು.

ADVERTISEMENT

ಅವು ಸಂಭ್ರಮದ ಮೊದಲ ಆವೃತ್ತಿಯ ದಿನಗಳು. ಸಂಭ್ರಮದ ಗೋಷ್ಠಿಗಳಲ್ಲಿ ಭಾಗವಹಿಸುವವರು ಚಾಕು, ಚೂರಿ ಮತ್ತಿತರ ವಸ್ತುಗಳನ್ನು ಒಳಗೆ ತರಬಾರದು ಎಂಬ ಒಂದು ಸಾಲು ಸೇರಿ ಹೋಗಿತ್ತು. ಇದಕ್ಕೆ ಸಾಕಷ್ಟು ಅಪಸ್ವರ ವ್ಯಕ್ತವಾದ ಬಳಿಕ ಪತ್ರಿಕಾಗೋಷ್ಠಿ ಕರೆದ ಗಿರಡ್ಡಿ ಅವರು, ‘ಆಕಸ್ಮಾತ್‌ ಈ ಸಾಲು ಸೇರಿ ಹೋಗಿದ್ದಕ್ಕೆ ನಮಗೂ ವಿಷಾದವಿದೆ. ಈ ಸಂಭ್ರಮದಲ್ಲಿ ನಾವು ಕಲಿಯುವುದು ಸಾಕಷ್ಟಿದೆ’ ಎನ್ನುತ್ತಲೇ ಆದ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆದಿದ್ದು ಅವರ ಸರಳತೆ ಹಾಗೂ ತಪ್ಪನ್ನು ಒಪ್ಪಿಕೊಳ್ಳುವ ಸರಳತನಕ್ಕೆ ಮಾದರಿಯಾಗಿತ್ತು.

ವಿಮರ್ಶಕರಾಗಿ ದೊಡ್ಡ ಹೆಸರು ಮಾಡಿದ ಗಿರಡ್ಡಿ ಅವರಿಗೆ ‘ಸಂಭ್ರಮ’ದ ಆಯೋಜನೆಗಾಗಿ ಸಂಪನ್ಮೂಲ ಕ್ರೋಡೀಕರಿಸುವ ಮಹತ್ವದ ಜವಾಬ್ದಾರಿಯೂ ಇತ್ತು. ಸಾಹಿತ್ಯ ಸಂಭ್ರಮದ ನಾಲ್ಕನೇ ಆವೃತ್ತಿಗೆ ₹ 15 ಲಕ್ಷ ನೀಡಿದ್ದ ರಾಜ್ಯ ಸರ್ಕಾರ ಐದನೇ ಆವೃತ್ತಿಗೆ ₹ 10 ಲಕ್ಷ ಮಾತ್ರ ಬಿಡುಗಡೆ ಮಾಡುವ ಮೂಲಕ ₹ 5 ಲಕ್ಷ ಖೋತಾ ಮಾಡಿತ್ತು. ಇದು ಗಿರಡ್ಡಿ ಅವರಲ್ಲಿ ತೀವ್ರ ಬೇಸರವನ್ನೂ ಮೂಡಿಸಿತ್ತು. ಅದನ್ನು ತುಂಬಿದ ಸಭೆಯಲ್ಲಿಯೂ ವ್ಯಕ್ತಪಡಿಸಲು ಅವರು ಹಿಂಜರಿಯದ ನೇರ ನಿಷ್ಠುರವಾದಿಯಾಗಿದ್ದರು.

ಎಂಥದೇ ಸವಾಲಿನ ಪರಿಸ್ಥಿತಿ ಎದುರಾದರೂ ತಾಳ್ಮೆ ಕಳೆದುಕೊಳ್ಳದ ಸ್ನೇಹಮಯಿ ವ್ಯಕ್ತಿತ್ವ ಅವರದಾಗಿತ್ತು. ಸಂಭ್ರಮದ ಗೋಷ್ಠಿಗಳ ಮಧ್ಯೆ ಅವರ ಬಹುಕಾಲದ ಸ್ನೇಹಿತ ಚಂಪಾ ಗಿರಡ್ಡಿಯವರನ್ನು ಕೇಂದ್ರವಾಗಿಸಿಕೊಂಡು ಕಾಲೆಳೆಯುತ್ತಿದ್ದರೂ, ಅಷ್ಟೇ ಸೂಕ್ಷ್ಮವಾಗಿ ಕಾಲು ಬಿಡಿಸಿಕೊಳ್ಳುವ ಚಾಕಚಕ್ಯತೆಯನ್ನೂ ಮೈಗೂಡಿಸಿಕೊಂಡಿದ್ದರು. ಸಂಭ್ರಮಕ್ಕೆ ಬಲುದೊಡ್ಡ ಆಸರೆಯಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದಾಗ ಮನೆಯ ಹಿರಿಯ ಸದಸ್ಯ ಕಳೆದುಕೊಂಡಷ್ಟು ದುಃಖಿಸಿದ್ದ ಗಿರಡ್ಡಿ ಅವರು ಕಲಬುರ್ಗಿ ಅವರ ನೆನಪಲ್ಲೇ ನಂತರ ಸಂಭ್ರಮವನ್ನು ಸಂಘಟಿಸಿದ್ದರು.

‘ಮಾತು ಕಡಿಮೆ ಕೆಲಸ ಹೆಚ್ಚು’ ಎಂಬ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಗೋವಿಂದರಾಜರು, ಸದ್ದಿಲ್ಲದೇ ತಮ್ಮ ಕೆಲಸಗಳನ್ನು ಪೂರೈಸಿ ಗೋಷ್ಠಿಗಳು ಸುಗಮವಾಗಿ ನಡೆಯುವಂತೆ ತೆರೆಮರೆಯಲ್ಲಿದ್ದೇ ನೋಡಿಕೊಳ್ಳುತ್ತಿದ್ದರು.

ವೈಚಾರಿಕ ಎದುರಾಳಿಗಳಾದ ಡಾ.ಯು.ಆರ್‌. ಅನಂತಮೂರ್ತಿ ಹಾಗೂ ಡಾ.ಎಸ್‌.ಎಲ್‌. ಭೈರಪ್ಪ ಅವರನ್ನು ಸಂಭ್ರಮದಲ್ಲಿ ಒಗ್ಗೂಡಿಸಿದ್ದರಲ್ಲಿ ಗಿರಡ್ಡಿ ಅವರ ಶ್ರಮ ದೊಡ್ಡದು. ಪ್ರತಿ ವರ್ಷವೂ ಸಂಭ್ರಮ ಕಳೆಗಟ್ಟುವಂತೆ, ವಿಭಿನ್ನ ಗೋಷ್ಠಿಗಳನ್ನು ಆಯೋಜಿಸಲು ಸಂಭ್ರಮದ ಸಂಘಟಕರಾದ ಗೆಳೆಯ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ರಮಾಕಾಂತ ಜೋಶಿ, ಲೋಹಿತ್‌ ನಾಯ್ಕರ್, ಸಮೀರ ಜೋಶಿ, ಡಾ.ಹ.ವೆಂ. ಕಾಖಂಡಿಕಿ ಅವರೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದರು.

ಹಿರಿಯ ವಿಮರ್ಶಕರಾಗಿ, ಇಂಗ್ಲಿಷ್‌ ಪ್ರಾಧ್ಯಾಪಕರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ರಾಷ್ಟ್ರಮಟ್ಟದ ಸಾಹಿತ್ಯ ದಿಗ್ಗಜರೊಂದಿಗೆ ಹೊಂದಿದ ಒಡನಾಟವನ್ನು ಸಮರ್ಥವಾಗಿ ಬಳಸಿಕೊಂಡ ಗಿರಡ್ಡಿ ಅವರು ದೇವದತ್ತ ಪಟ್ಟನಾಯಕ್‌, ರಾಮಚಂದ್ರ ಗುಹಾರಂತಹ ಇತಿಹಾಸಕರರನ್ನು ಧಾರವಾಡದ ನೆಲಕ್ಕೆ ಕರೆಸಿದರು. ಜೊತೆಗೆ ತಮ್ಮದೇ ಒಡನಾಡಿಗಳಾದ ಗಿರೀಶ ಕಾರ್ನಾಡ, ಚಂಪಾ, ಎನ್‌.ಎಸ್‌.ಲಕ್ಷ್ಮಿನಾರಾಯಣ ಭಟ್ಟ, ಗಣೇಶ್‌ ಎನ್‌.ದೇವಿ ಸೇರಿದಂತೆ ನಾಡು ಕಂಡ ದಿಗ್ಗಜರನ್ನು ಕರೆಸಿಕೊಂಡು ‘ಸಂಭ್ರಮ’ದ ಮೆರುಗು ಹೆಚ್ಚಿಸಿದರು. ಧಾರವಾಡ ಸಾಹಿತ್ಯ ಲೋಕ ಕಲಬುರ್ಗಿ ಬಳಿಕ ಗಿರಡ್ಡಿ ಅವರನ್ನು ಕಳೆದುಕೊಂಡು ಊಹಿಸಿಲಾಗದಷ್ಟು ಕರಗಿದೆ, ಸೊರಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.