ADVERTISEMENT

`ಸೀಮೆ ಎಣ್ಣೆ ಸುರಿದು ಬೆಂಕಿ ಕಡ್ಡಿ ಗೀರಿದ'

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 10:09 IST
Last Updated 14 ಡಿಸೆಂಬರ್ 2012, 10:09 IST

ಹುಬ್ಬಳ್ಳಿ: ವರದಕ್ಷಿಣೆಗಾಗಿ ಪತಿಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಕಿಮ್ಸಗೆ ದಾಖಲಾಗಿದ್ದ ಗೃಹಿಣಿ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವಿಗೀಡಾಗಿದ್ದಾಳೆ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಮುತ್ತಳ್ಳಿ ಗ್ರಾಮದ ದೀಪಾ ಬಸಯ್ಯ ಪೂಜಾರ (23) ಮೃತ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿ ದೀಪಾಳ ಪತಿ ಬಸಯ್ಯ, ತಾಯಿ ಗುರುಸಿದ್ಧವ್ವ, ಮೈದುನ ಸಿದ್ಧಯ್ಯ, ನಾದಿನಿ ನಿಂಗವ್ವ, ಸಿದ್ಧಯ್ಯನ ಪತ್ನಿ ಶಿವಲಿಂಗವ್ವ ಎಂಬವರನ್ನು ತಡಸ ಪೊಲೀಸರು ಬಂಧಿಸಿದ್ದಾರೆ.

ಡಿ. 7ರಂದು ರಾತ್ರಿ ಈ ಘಟನೆ ನಡೆದಿದ್ದು, ಕಿಮ್ಸನಲ್ಲಿ ಚಿಕಿತ್ಸೆಯಲ್ಲಿದ್ದ ಸಂದರ್ಭದಲ್ಲಿ ಘಟನೆಗೆ ಕಾರಣವಾದ ಬಗ್ಗೆ ದೀಪಾ, ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ದೀಪಾ ನೀಡಿದ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು ಅದರ ಸಾರ ಇಲ್ಲಿದೆ.

`ನಾಲ್ಕು ವರ್ಷಗಳ ಹಿಂದೆ (ಏ. 19, 2008) ಮುತ್ತಳ್ಳಿ ಗ್ರಾಮದ ಬಸಯ್ಯ ಜೊತೆ ಹೆತ್ತವರು ನನ್ನ ಮದುವೆ ಮಾಡಿಸಿದ್ದರು. ಆ ಸಂದರ್ಭದಲ್ಲಿ ಒಂದು ತೊಲೆ ಬಂಗಾರ, 15,000 ನಗದು, ಅರಿವೆ, ಬಾಂಡೆ ಮತ್ತಿತರ ವರೋಪಚಾರ ಕೊಟ್ಟಿದ್ದರು. ಮದುವೆಯ ನಂತರ ಒಂದು ವರ್ಷ ಗಂಡ ಚೆನ್ನಾಗಿ ನೋಡಿಕೊಂಡಿದ್ದ. ನಂತರದ ದಿನಗಳಲ್ಲಿ ಗಂಡ, ಅತ್ತೆ, ಮೈದುನ, ನಾದಿನಿ, ಮೈದುನನ ಪತ್ನಿ ಕಿರಿಕಿರಿ ನೀಡಲು ಆರಂಭಿಸಿದರು. ಮದುವೆ ಸಂದರ್ಭದಲ್ಲಿ ಅವ್ವ ಕೊಟ್ಟಿದ್ದ ಒಂದು ತೊಲೆ ಬಂಗಾರವನ್ನು ನಾನು ತವರು ಮನೆಯಲ್ಲಿ ಇಟ್ಟಿದ್ದೆ. ಅದನ್ನು ತರುವಂತೆ ಗಂಡ ಆಗಾಗ ಪೀಡಿಸುತ್ತಿದ್ದ. ಇದನ್ನು ತಿಳಿದು ನನ್ನ ಮನೆಯವರು ನಮ್ಮ ಮನೆಗೆ ಬಂದು ಮಾತುಕತೆ ನಡೆಸಿ ಹೋಗಿದ್ದರು. ಬಳಿಕವೂ ಮಾನಸಿಕ ಮತ್ತು ದೈಹಿಕ ಕಿರುಕುಳ ಮುಂದುವರೆದಿತ್ತು'

`ಎರಡು ವರ್ಷದ ಹಿಂದೆ ನಮಗೆ ಗಂಡು ಮಗು ಹುಟ್ಟಿತು. ಇನಾಮಕೊಪ್ಪದಲ್ಲಿರುವ ಎರಡು ಎಕರೆ ಜಮೀನನ್ನು ನನ್ನ ತಂದೆ -ತಾಯಿ ಗಂಡನ ಹೆಸರಿನಲ್ಲಿ ಲಾವಣಿ ಮಾಡಿಕೊಟ್ಟಿದ್ದರು. ಹೀಗಾಗಿ ನಾವಿಬ್ಬರೂ ಅಲ್ಲಿಗೆ ಹೋಗಿ ಬರುತ್ತಿದ್ದೆವು. ಡಿ. 6ರಂದು ನಮ್ಮ ಮನೆಗೆ ಬಂದಿದ್ದ ಅವ್ವ, ಮರುದಿನ ಸಂಜೆ ಊರಿಗೆ ಹೋದಳು. ನಾನು ಮನೆ ಕಟ್ಟೋಕೆ ಅಂತ ಅವ್ವನ ಕಡೆಯಿಂದ ರೂ 20 ಸಾವಿರ ಮತ್ತು ಹುಬ್ಬಳ್ಳಿಯಲ್ಲಿರುವ ದೊಡ್ಡಮ್ಮನ ಕಡೆಯಿಂದ ದೀಪಾವಳಿ ಸಂದರ್ಭದಲ್ಲಿ 40 ಸಾವಿರ ಇಸ್ಕೊಂಡು ಬಂದಿದ್ದೆ. ತವರು ಮನೆಯಲ್ಲಿಟ್ಟಿದ್ದ ಬಂಗಾರ ತಂದುಕೊಟ್ಟಿಲ್ಲ ಎಂದು ಅಂದು ರಾತ್ರಿ ಎಲ್ಲರೂ ಸೇರಿ ನನ್ನನ್ನು ಹೊಡೆದರು. ಮನೆಯ ಬಾಗಿಲು ಹಾಕಿ ಕೊಸರಾಡದಂತೆ ಎಲ್ಲರೂ ಹಿಡಿದುಕೊಂಡರು. ಗಂಡ ಸೀಮೆ ಎಣ್ಣೆ ಸುರಿದು ಕಡ್ಡಿಗೀರಿ ಬೆಂಕಿ ಹಚ್ಚಿದ. ನಾನು ಚೀರಿಕೊಂಡಾಗ ನಾದಿನಿಯ ಗಂಡ ಮತ್ತು ಓಣಿಯ ಜನರು ಬಂದು ಬೆಂಕಿ ಆರಿಸಿ ನನ್ನನ್ನು ಇಲ್ಲಿಗೆ (ಕಿಮ್ಸ) ತಂದರು' ಎಂದು ದೀಪಾ ಹೇಳಿಕೆ ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ತಡಸ ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.