ADVERTISEMENT

ಸ್ನೇಹದ ಸೇತುವೆ ಬೆಳೆಸಲು ಹಿರಿಯರ ಕ್ರಿಕೆಟ್‌!

17 ವರ್ಷಗಳಿಂದ ನಡೆಯುತ್ತಿರುವ ಪಂದ್ಯ, ಯುವಕರಿಗೆ ಸವಾಲು ಎಸೆಯುವ ಅನುಭವಿಗಳು

ಪ್ರಮೋದ ಜಿ.ಕೆ
Published 9 ಏಪ್ರಿಲ್ 2018, 8:58 IST
Last Updated 9 ಏಪ್ರಿಲ್ 2018, 8:58 IST
‌ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಗೋವಾ ಹಿರಿಯರ ತಂಡದ ಎದುರಿನ ಕ್ರಿಕೆಟ್‌ ಪಂದ್ಯದಲ್ಲಿ ಹುಬ್ಬಳ್ಳಿ ಹಿರಿಯರ ತಂಡದ ನಿತ್ಯಾನಂದ ಶೆಟ್ಟಿ ಅವರ ಬ್ಯಾಟಿಂಗ್‌ ವೈಖರಿ
‌ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಗೋವಾ ಹಿರಿಯರ ತಂಡದ ಎದುರಿನ ಕ್ರಿಕೆಟ್‌ ಪಂದ್ಯದಲ್ಲಿ ಹುಬ್ಬಳ್ಳಿ ಹಿರಿಯರ ತಂಡದ ನಿತ್ಯಾನಂದ ಶೆಟ್ಟಿ ಅವರ ಬ್ಯಾಟಿಂಗ್‌ ವೈಖರಿ   

ಹುಬ್ಬಳ್ಳಿ: ಅಲ್ಲಿದ್ದವರಲ್ಲಿ ಬಹುತೇಕರು 60 ವರ್ಷ ಮೇಲ್ಟಟ್ಟವರು. ಆದರೂ ಚುರುಕಾಗಿ ಬ್ಯಾಟಿಂಗ್‌, ಫೀಲ್ಡಿಂಗ್, ಬೌಲಿಂಗ್‌ ಮಾಡಿ ಅವರು ಯುವ ಆಟಗಾರರಿಗೆ ಸವಾಲೊಡ್ಡುವಂತಿದ್ದರು. 70 ವರ್ಷ ವಯಸ್ಸಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ನಿಮಂತ್ರಕ ಬಾಬಾ ಭೂಸದ ಕೂಡ ಕರಾರುವಾಕ್ಕಾಗಿ ಎರಡು ಓವರ್‌ ಬೌಲಿಂಗ್‌ ಮಾಡಿ ಗಮನ ಸೆಳೆದರು.

ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ರಾಜನಗರದಲ್ಲಿರುವ ಕೆ.ಎಸ್‌.ಸಿ.ಎ. ಕ್ರೀಡಾಂಗಣ. ರಾಜ್ಯ ತಂಡ, ವಿಶ್ವವಿದ್ಯಾಲಯಗಳ ತಂಡಗಳಲ್ಲಿ ಆಡಿದ್ದವರು, ರಾಜ್ಯ ರಣಜಿ ತಂಡಗಳನ್ನು ಪ್ರತಿನಿಧಿಸಿದ್ದವರು ಮತ್ತು ಬಿಸಿಸಿಐ ಆಯ್ಕೆ ಸಮಿತಿಯಲ್ಲಿದ್ದ ಸದಸ್ಯರು ‘ಸ್ನೇಹದ ಪಂದ್ಯ’ದಲ್ಲಿ ಭಾಗವಹಿಸಿದ್ದರು.

ಗೋವಾದಲ್ಲಿ ವಿವಿಧ ಡಿವಿಷನ್‌ ಮತ್ತು ರಾಜ್ಯ ತಂಡದಲ್ಲಿ ಆಡಿದ್ದ ಹುಬ್ಬಳ್ಳಿಯ ಹಲವು ಆಟಗಾರರು ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕವೂ ಆಟಗಾರರ ಜೊತೆ ಸಂಬಂಧ ಉಳಿಸಿಕೊಳ್ಳಲು ಕ್ರಿಕೆಟ್‌ ಅನ್ನು ಸ್ನೇಹದ ಸೇತುವೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಮತ್ತು ಗೋವಾದ ಹಿರಿಯ ಆಟಗಾರರು 17 ವರ್ಷಗಳಿಂದ ಪ್ರತಿ ವರ್ಷ ಟ್ವೆಂಟಿ–20 ಪಂದ್ಯವಾಡುತ್ತಿದ್ದಾರೆ.

ADVERTISEMENT

ಹುಬ್ಬಳ್ಳಿಯ ತಂಡ ಒಂದು ಸಲ ಗೋವಾಕ್ಕೆ ಹೋಗಿ ಆಡಿದರೆ, ಅಲ್ಲಿನ ತಂಡ ಇಲ್ಲಿಗೆ ಬಂದು ಆಡುತ್ತದೆ. ಈ ಪಂದ್ಯ ಭಾನುವಾರ ಇಲ್ಲಿ ನಡೆಯಿತು. 60 ವರ್ಷ ವಯಸ್ಸಾಗಿರುವ ವಿಜಯ್‌ ಕಾಮತ್‌ ಕೂಡ ಎರಡು ಓವರ್‌ ಚುರುಕಾಗಿ ಬೌಲಿಂಗ್ ಮಾಡಿದರು.

ಈ ಬಾರಿಯ ಪಂದ್ಯದಲ್ಲಿ ಬಾಬಾ ಭೂಸದ್, ಅಜಿತ್ ಜವಳಿ, ಕೈಲಾಶ ಮುನಾವರ, ನಿತ್ಯಾನಂದ ಶೆಟ್ಟಿ, ಸುರೇಶ ರಾಜು, ಶಿವಾನಂದ ಗುಂಜಾಳ, ಅಬ್ದುಲ್‌ ಸೈಯದ್‌, ಗೋವಾ ಪರ ರಣಜಿ ಆಡಿದ್ದ ಹುಬ್ಬಳ್ಳಿಯ ಪ್ರಮೋದ ಕಾಮತ್‌, ವಿಜಯ್‌ ಕಾಮತ್‌, ಎನ್‌. ವಾಸುದೇವ್‌, ರೈಲ್ವೆ ತಂಡದ ಕೋಚ್‌ ಅರ್ಮುಗಮ್‌, ಮಗ್ಸೂದ್‌ ದಿವಾನ್‌ ಅಲಿ, ಲಿಂಗರಾಜ್‌ ಬಿಳೇಕಲ್‌ ವೈ. ರವಿ ಮುಧೋಳ ಪಾಲ್ಗೊಂಡಿದ್ದರು. ಗೋವಾ ತಂಡದಲ್ಲಿ ರಣಜಿ ಆಡಿದ್ದ ಸಿ. ಅಶೋಕ ಮತ್ತು ಚಂದ್ರಾ ತೆಂಡೂಲ್ಕರ್‌ ಕೂಡ ವಾಣಿಜ್ಯನಗರಿಗೆ ಬಂದಿದ್ದರು.

‘ಸ್ನೇಹದ ಹಿಂದಿನ ನೆನಪುಗಳು ಅಮರವಾಗಿರಬೇಕು ಎನ್ನುವ ಕಾರಣಕ್ಕೆ ಪ್ರತಿ ವರ್ಷ ಹುಬ್ಬಳ್ಳಿ ಮತ್ತು ಗೋವಾ ಹಿರಿಯರ ತಂಡಗಳ ನಡುವೆ ಸೌಹಾರ್ದ ಕ್ರಿಕೆಟ್‌ ಪಂದ್ಯ ಆಯೋಜಿಸಲಾಗುತ್ತದೆ. ರಣಜಿ ಟೂರ್ನಿಯಲ್ಲಿ ಆಡಿದ್ದ ಆಟಗಾರರು ಈ ಬಾರಿಯೂ ಪಾಲ್ಗೊಂಡಿದ್ದರಿಂದ ಖುಷಿಯಾಗಿದೆ. ಯಾರು ಎಷ್ಟು ವಿಕೆಟ್‌ ಪಡೆದರು, ಎಷ್ಟು ರನ್‌ ಹೊಡೆದರು ಎನ್ನುವುದಕ್ಕಿಂತ ಪಾಲ್ಗೊಳ್ಳುವುದೇ ಹೆಮ್ಮೆಯ ವಿಷಯವಾಗಿತ್ತು’ ಎಂದು 60 ವರ್ಷದ ವಿಜಯ್‌ ಕಾಮತ್‌ ಹೇಳಿದರು.

‘ಪ್ರತಿ ವರ್ಷ ಪಂದ್ಯ ಆಡುತ್ತಿರುವುದರಿಂದ ಹಳೆಯ ನೆನಪುಗಳು ಈಗಲೂ ಹಸಿರಾಗಿವೆ. ನಾವು ಚುರುಕಾಗಿ ಆಡಿ ಗೋವಾ ತಂಡದ ಸ್ನೇಹಿತರಿಗೆ ಸವಾಲೊಡ್ಡಿದೆವು. ಮೊದಲಿದ್ದ ಉತ್ಸಾಹದಲ್ಲಿಯೇ ಎರಡು ಓವರ್‌ ಬೌಲಿಂಗ್ ಮಾಡಿದೆ’ ಎಂದು ಬಾಬಾ ಭೂಸದ ಸಂತೋಷ ಹಂಚಿಕೊಂಡರು.

ನೋವಿನ ಕಥೆ:

ನಾಲ್ಕು ವರ್ಷಗಳ ಹಿಂದೆ ಇಲ್ಲಿನ ರೈಲ್ವೆ ಮೈದಾನದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆದಾಗ ಹುಬ್ಬಳ್ಳಿಯ ಜಗದೀಶ ಹಿರೇಮಠ ಮೈದಾನದಲ್ಲಿಯೇ ಕುಸಿದು ಮೃತಪಟ್ಟಿದ್ದರು. ವಿಶ್ವವಿದ್ಯಾಲಯ ಮಟ್ಟದ ಟೂರ್ನಿಗಳಲ್ಲಿ ಆಡಿದ್ದ ಜಗದೀಶ ಅವರ ಹೆಸರಿನಲ್ಲಿ ‍ಪ್ರತಿ ವರ್ಷ ಪಂದ್ಯ ಆಯೋಜಿಸಿ ಗೆದ್ದವರಿಗೆ ಈಗ ಟ್ರೋಫಿ ನೀಡಲಾಗುತ್ತಿದೆ.

‘ಜಗದೀಶ ಅವರು ಬ್ಯಾಟಿಂಗ್‌ ಮುಗಿಸಿಕೊಂಡು ಪೆವಿಲಿಯನ್‌ಗೆ ತೆರಳಿದ ಕೆಲ ನಿಮಿಷಗಳಲ್ಲೇ ಮೃತಪಟ್ಟಿದ್ದರು. ಅವರ ಜೊತೆ ಕೊನೆಯ ಸಲ ಬ್ಯಾಟಿಂಗ್‌ ಮಾಡುವ ಅವಕಾಶ ನನ್ನದಾಗಿತ್ತು. 17 ವರ್ಷಗಳ ಅವಧಿಯಲ್ಲಿ ಅನೇಕ ಹಿರಿಯ ಆಟಗಾರರು ಬಂದು ಹೋಗಿದ್ದಾರೆ. ಗೋವಾ ತಂಡದ ಜೊತೆಗೆ ಪಂದ್ಯವಾಡುವಾಗ ಅವರ ನೆನಪುಗಳು ಕಾಡುತ್ತವೆ. ಆದ್ದರಿಂದ ಎಷ್ಟೇ ಕೆಲಸದ ಒತ್ತಡವಿದ್ದರೂ ಪಂದ್ಯ ಆಡುವುದನ್ನು ತಪ್ಪಿಸುವುದಿಲ್ಲ’ ಎಂದು ಶಿವಾನಂದ ಗುಂಜಾಳ ಹೇಳಿದರು.

‘ನೆನಪು ಹಂಚಿಕೊಳ್ಳಲು ವೇದಿಕೆ’

‘ಗೋವಾದಲ್ಲಿ ಕ್ರಿಕೆಟ್‌ ಆಡುತ್ತಿದ್ದಾಗಿನ ದಿನಗಳನ್ನು ನೆನಪಿಸಿಕೊಳ್ಳಲು ಸ್ನೇಹದ ಪಂದ್ಯ ಉತ್ತಮ ವೇದಿಕೆಯಾಗಿದೆ’ ಎಂದು ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಾಗಿದ್ದ ಗೋವಾದ ಸಿ. ಅಶೋಕ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.‘ಕ್ರಿಕೆಟ್‌ ಆಡುವ ನೆಪದಲ್ಲಿ ಗೆಳೆಯರನ್ನು ಭೇಟಿ ಮಾಡಿದಂತಾಗುತ್ತದೆ. ಎರಡೂ ತಂಡಗಳಲ್ಲಿದ್ದ 60–70 ವರ್ಷ ವಯಸ್ಸಾದವರೂ ಚುರುಕಾಗಿ ಆಡಿದರು. ಯಾವುದೇ ಕ್ರೀಡೆಯಾಗಲಿ, ವಯಸ್ಸು ಎಂಬುದು ಸಂಖ್ಯೆಯಷ್ಟೇ. ಈ ರೀತಿಯ ಕ್ರಿಕೆಟ್‌ ಪ್ರೀತಿ ಕೊನೆಯವರೆಗೂ ಉಳಿಯಬೇಕೆಂಬುದೇ ಎಲ್ಲರ ಆಸೆ’ ಎಂದು 66 ವರ್ಷದ ಅಶೋಕ ಹೇಳಿದರು. ಈ ಪಂದ್ಯದಲ್ಲಿ ಗೋವಾದ ತಂಡ ಗೆಲುವು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.