ADVERTISEMENT

ಸ್ವಸ್ಥ ಜೀವನಕ್ಕೆ ನಿತ್ಯವೂ ಯೋಗ ಅಗತ್ಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 4:30 IST
Last Updated 13 ಫೆಬ್ರುವರಿ 2012, 4:30 IST

ಧಾರವಾಡ: `ಯೋಗ ಮತ್ತು ಆಹಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮತೋಲನ ಆಹಾರ ಸೇವಿಸಿದರೆ ಮಾತ್ರ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ~ ಎಂದು ಡಾ. ರೇಖಾ ವಿಜಯಕುಮರ ಹೇಳಿದರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಯುವಜನ ಮಂಟಪ ಇತ್ತೀಚೆಗೆ ಆಯೋಜಿಸಿದ್ದ ಸ್ವಸ್ಥ ಜೀವನಕ್ಕಾಗಿ ನಿತ್ಯ ಯೋಗ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಆಧುನಿಕ ಹಾಗೂ ಯಾಂತ್ರಿಕ ಒತ್ತಡದ ಜೀವನದಲ್ಲಿ ನಮ್ಮ ಎಲ್ಲ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಯೋಗ ಒಂದು ಸಿದ್ಧ ಔಷಧವಾಗಿದೆ. ಯೋಗ ಮನಸ್ಸನ್ನು ಸದಾ ಶಾಂತಿ ಮತ್ತು ನೆಮ್ಮದಿಯಿಂದ ಇಡುವ ಒಂದು ಶ್ರೇಷ್ಠ ಸಾಧನವಾಗಿದೆ. ಯೋಗಶಾಸ್ತ್ರವೆಂಬುದು ಭಾರತವು ಜಗತ್ತಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಇತ್ತೀಚಿನ ಆಧುನಿಕ ಜೀವನಶೈಲಿಯಲ್ಲಿ ಯೋಗಾಭ್ಯಾಸ ಬಹಳ ಜನಪ್ರಿಯವಾಗುತ್ತಿದೆ ಎಂದರು.

ಯೋಗ ತರಬೇತಿದಾರರಾದ ಶೋಭಾ ಹೂಲಿಕಟ್ಟಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ವೇದ ಹಾಗೂ ಉಪನಿಷತ್ ಕಾಲದಿಂದಲೂ ಯೋಗ ಬಂದಿದೆ. ಜೀವನದಲ್ಲಿ ನಿತ್ಯ ಯೋಗ ಅಳವಡಿಸಿ ಕೊಂಡರೆ ಉತ್ತಮ ಸದೃಢ ದೈಹಿಕ ಹಾಗೂ ಮಾನಸಿಕ ಆರೋಗ್ಯ  ಹೊಂದಲು ಸಾಧ್ಯ ಎಂದು ಹೇಳಿದರು.

ಸ್ತ್ರೀ ರೋಗ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಮಾತನಾಡಿ, ವೈದ್ಯ ವಿಜ್ಞಾನಕ್ಕೂ ಮತ್ತು ಆಧ್ಯಾತ್ಮಿಕ ಯೋಗಕ್ಕೂ ಅನ್ಯೋನ್ಯ ಸಂಬಂಧವಿದೆ. ಯೋಗದಿಂದ ಜ್ಞಾನಬಲ ಹೆಚ್ಚುವುದಲ್ಲದೇ, ಮನಸ್ಸು ಪ್ರಫುಲ್ಲವಾಗಿ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಶಕ್ತಿ ನಮ್ಮ ಕೈಯಲ್ಲಿದೆ ಎಂದರು. ಪಂಚಾಕ್ಷರಿ ಹಿರೇಮಠ, ಡಾ. ಕಮಲಾ ಪುರ, ಡಾ. ಶಿವಾನಂದ ಗಾಳಿ, ಕೃಷ್ಣಕುಮಾರ, ನಿಂಗಣ್ಣ ಕುಂಟಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೇಯಾ ಪ್ರಾರ್ಥಿಸಿದರು. ಕೃಷ್ಣ ಜೋಶಿ ಸ್ವಾಗತಿಸಿದರು. ಸುರೇಶ ನಾಯಕ ಪರಿಚಯಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.