ADVERTISEMENT

ಹಂಪಣ್ಣವರ ಮನೆ, ವಾಣಿಜ್ಯ ಸಂಕೀರ್ಣ ಮೌಲ್ಯಮಾಪನ

ಎಪಿಎಂಸಿ ದಲಾಲ ವರ್ತಕರ ಸಂಘದ ಅಧ್ಯಕ್ಷರ ಮನೆ ಆದಾಯ ತೆರಿಗೆ ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 9:46 IST
Last Updated 7 ಡಿಸೆಂಬರ್ 2017, 9:46 IST

ಧಾರವಾಡ: ಇಲ್ಲಿನ ಎಪಿಎಂಸಿ ದಲಾಲ್ ವರ್ತಕರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಶಿವಶಂಕರ ಹಂಪಣ್ಣವರ ಅವರ ಮನೆ ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೌಲ್ಯಮಾಪನ ನಡೆಸಿದರು.

ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಕಿಶೋರ ಕುಮಾರ್ ಅವರ ನೇತೃತ್ವದಲ್ಲಿ ಚರಂತಿಮಠ ಗಾರ್ಡನ್‌ ಬಳಿ ಇರುವ ಹಂಪಣ್ಣವರ ಮನೆ ಹಾಗೂ ಮರಾಠಾ ಕಾಲೊನಿಯಲ್ಲಿರುವ ವಾಣಿಜ್ಯ ಸಂಕೀರ್ಣಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ಶಿವಶಂಕರ ಅವರ ಮನೆ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಆದಾಯಕ್ಕಿಂಥ ಹೆಚ್ಚು ಆಸ್ತಿ ಹೊಂದಿರುವ ಕುರಿತು ಪರಿಶೀಲನೆ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಮನೆ ಅಂದಾಜು ₹10ಕೋಟಿ ಮೊತ್ತ ಬೆಲೆ ಬಾಳುತ್ತದೆ ಎಂದು ನೋಟಿಸ್ ಜಾರಿ ಮಾಡಿದ್ದರು.

ADVERTISEMENT

ಇದಕ್ಕೆ ಉತ್ತರಿಸಿದ್ದ ಹಂಪಣ್ಣವರ, ಮನೆ ₹5ಕೋಟಿ ಮೊತ್ತದ್ದು ಏಕೆ ಆಗಿರಬಾರದು ಎಂದು ಇಲಾಖೆ ಅಧಿಕಾರಿಗಳನ್ನೇ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಭೇಟಿ ನೀಡಿರುವ ಅಧಿಕಾರಿಗಳು ಮನೆಯ ಮೌಲ್ಯಮಾಪನ ನಡೆಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹಂಪಣ್ಣವರ, ‘ಮನೆ ಹಾಗೂ ವಾಣಿಜ್ಯ ಸಂಕೀರ್ಣ ಮೌಲ್ಯಮಾಪನ ನಡೆಸಿದ್ದಾರೆ. ನನ್ನ ಲೆಕ್ಕಕ್ಕೂ ಅವರ ಮೌಲ್ಯಮಾಪನಕ್ಕೂ ವ್ಯತ್ಯಾಸವಿದ್ದರೆ ನೋಟಿಸ್‌ ನೀಡುತ್ತಾರೆ. ಅದನ್ನು ಒಪ್ಪಲೂ ಬಹುದು, ಒಪ್ಪದೆಯೇ ಇರಬಹುದು. ಸರಿ ಅನ್ನಿಸದಿದ್ದರೆ ಮೇಲ್ಮನವಿ ಸಲ್ಲಿಸುತ್ತೇನೆ’ ಎಂದರು.

ಸಚಿವ ವಿನಯ ಕುಲಕರ್ಣಿ ಆಪ್ತರಾಗಿರುವ ಕಾರಣ ದಾಳಿ ನಡೆದಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ದಾಳಿಯ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದೇನೆ. ಶಕುನಿ ಬುದ್ಧಿ ಇರುವವರು ಕೈವಾಡ ಇರಬಹುದು. ಆದರೆ, ಲಿಂಗಾಯತ ಧರ್ಮ ಮತ್ತು ಐಟಿ ದಾಳಿಗೂ ತಳಕು ಹಾಕುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.