ಹುಬ್ಬಳ್ಳಿ: ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಹಮ್ಮಿಕೊಂಡಿರುವ ಹಮಾಲಿ ಕಾರ್ಮಿಕರ ರಾಜ್ಯ ಮಟ್ಟದ ಸಮಾವೇಶ ಮಾರ್ಚ್ 4 ಮತ್ತು 5ರಂದು ನಗರದಲ್ಲಿ ನಡೆಯಲಿದೆ.
‘4ರಂದು ಬೆಳಿಗ್ಗೆ 11 ಗಂಟೆಗೆ ರೈಲು ನಿಲ್ದಾಣ ಸಮೀಪದ ಅಂಬೇಡ್ಕರ್ ವೃತ್ತದಿಂದ ಇಂದಿರಾ ಗಾಜಿನ ಮನೆ ವರೆಗೆ ಮೆರವಣಿಗೆ ನಡೆಯಲಿದ್ದು ಅಲ್ಲಿ ಉದ್ಘಾಟನಾ ಸಮಾರಂಭದ ನಂತರ ಸಂಜೆ 4 ಗಂಟೆಗೆ ಎಪಿಎಂಸಿ ಆವರಣದ ವ್ಯಾಪಾರಸ್ಥರ ಸಂಘದಲ್ಲಿ ಪ್ರತಿನಿಧಿ ಸಮ್ಮೇಳನ ಇರುತ್ತದೆ. 5ರಂದು ಸಂಜೆ 4 ಗಂಟೆಗೆ ವ್ಯಾಪಾರಸ್ಥರ ಸಂಘದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ’ ಎಂದು ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಪತ್ತಾರ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಮಾವೇಶದ ಉದ್ಘಾಟನಾ ಸಮಾರಂಭ ಆರ್,ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಕೂಡಲಸಂಗಮ ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸುವರು. ಹಮಾಲಿ ಕಾರ್ಮಿಕರ ಫೆಡರೇಷನ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಪ್ರಾಸ್ತಾವಿಕವಾಗಿ ಮಾತನಾಡುವರು’ ಎಂದು ಅವರು ತಿಳಿಸಿದರು.
‘ರಾಜ್ಯದ 146 ಮುಖ್ಯ ಮಾರುಕಟ್ಟೆ ಹಾಗೂ 383 ಉಪಮಾರುಕಟ್ಟೆಗಳಲ್ಲಿ ಮಹಿಳೆಯರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹಮಾಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಗಿರಣಿಗಳು, ಗೋಡೌನ್‌ಗಳು, ಗ್ರಾಮೀಣ ಮಾರುಕಟ್ಟೆಗಳಲ್ಲಿ ಕೆಲಸ ಮಾಡುವವರನ್ನು ಸೇರಿಸಿದರೆ ಈ ಸಂಖ್ಯೆ ಐದು ಲಕ್ಷ ಮೀರುತ್ತದೆ. ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಮಂಡಳಿಯನ್ನು ಸ್ಥಾಪಿಸಿದ್ದರೂ ಸರ್ಕಾರ ಈ ವರೆಗೆ ಹಣ ಬಿಡುಗಡೆ ಮಾಡಲಿಲ್ಲ. ಈ ಬಾರಿ ಎಪಿಎಂಸಿ ಹಮಾಲಿ ಕಾರ್ಮಿಕರಿಗಾಗಿ ಬಜೆಟ್‌ನಲ್ಲಿ ‘ಕಾಯಕ ನಿಧಿ’ ಯೋಜನೆಯನ್ನು ಘೋಷಿಸಿದರೂ ಕೇವಲ ₨1ಕೋಟಿ ಬಿಡುಗಡೆ ಮಾಡಲಾಗಿದೆ. ಇದು ಅಲ್ಪ ಮೊತ್ತ. ಆದರೂ ಇಷ್ಟು ಮಾಡಿದ್ದು ಅಭಿನಂದನೀಯ’ ಎಂದು ಪತ್ತಾರ ಹೇಳಿದರು.
‘ಈ ವರೆಗೆ ಫೆಡರೇಷನ್‌ನಲ್ಲಿ 40 ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.
ಎಪಿಎಂಸಿ ಹಮಾಲಿ ಕಾರ್ಮಿಕರ ಸಮನ್ವಯ ಸಮಿತಿ ಕಾರ್ಯಾಧ್ಯಕ್ಷ ದುರಗಪ್ಪ ಚಿಕ್ಕತುಂಬಳ, ಗುರುಸಿದ್ದಪ್ಪ ಅಂಬಿಗೇರ, ಹನಮಂತ ಜಾಲಗಾರ ಹಾಗೂ ಬಸವಣ್ಣೆಪ್ಪ ನೀರಲಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.