ADVERTISEMENT

ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ

ಆರ್.ಜಿತೇಂದ್ರ
Published 25 ಫೆಬ್ರುವರಿ 2012, 10:00 IST
Last Updated 25 ಫೆಬ್ರುವರಿ 2012, 10:00 IST

ಹುಬ್ಬಳ್ಳಿ: ತಲೆಗೊಂದು ಕೊಡದ ಲೆಕ್ಕದಲ್ಲಿ ಕುಡಿಯುವ ನೀರು ಪೂರೈಕೆ, ಒಬ್ಬ ವ್ಯಕ್ತಿಗೆ ದಿನಕ್ಕೆ ಒಂದು ಕೊಡ ನೀರು.... ಇದು ಹುಬ್ಬಳ್ಳಿ ತಾಲ್ಲೂಕಿನ ನಾಗರಹಳ್ಳಿಯ ಜನರ ಕುಡಿಯುವ ನೀರಿನ ಬವಣೆಯ ಕಥೆ. ಇದೊಂದೇ ಅಲ್ಲ, ಜಿಲ್ಲೆಯ ಇನ್ನೂ ಕೆಲವು ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ ತಲೆದೋರಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಿ ಜನರ ದಾಹ ನೀಗಿಸಲು ಜಿಲ್ಲಾಡಳಿತ ಪ್ರಯತ್ನ ನಡೆಸಿದೆ.

ನಾಗರಹಳ್ಳಿಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಇಲ್ಲಿ ಕುಡಿಯಲು ಟ್ಯಾಂಕರ್ ನೀರು ಬಿಟ್ಟರೆ ಬೇರೆ ಗತಿಯಿಲ್ಲ. ಊರಿನ ಜನರ ಕುಡಿಯುವ ನೀರಿನ ಏಕೈಕ ಮೂಲವಾದ ಇಲ್ಲಿನ ಕೆರೆ ಈ ಬಾರಿ ಬೇಸಿಗೆಗೆ ಮುನ್ನವೇ ಬತ್ತಿ ಹೋಗಿದ್ದು, ಇಲ್ಲಿನ ರಾಡಿ ನೀರು ಕುಡಿದು ಜನ ವಾಂತಿ ಮಾಡಿಕೊಂಡ ಮೇಲೆ ಎಚ್ಚೆತ್ತ ಅಧಿಕಾರಿಗಳು ಕಳೆದ ಡಿಸೆಂಬರ್ 23ರಿಂದ ಇಲ್ಲಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.
 
ಸುಮಾರು 1200 ಜನರಿರುವ ಈ ಗ್ರಾಮಕ್ಕೆ ದಿನಕ್ಕೆ ಮೂರು ಟ್ಯಾಂಕರ್ ನೀರು ನೀಡಲಾಗುತ್ತಿದೆ. ಹೆಚ್ಚಿಗೆ ನೀರು ಸರಬರಾಜು ಮಾಡುವಂತೆ ಜನರು ಮನವಿ ಮಾಡಿದ್ದಾರೆ. ಈ ಗ್ರಾಮದಲ್ಲಿ ಕೊಳವೆಬಾವಿ ಮೂಲಕ ಸರಬರಾಜು ಮಾಡಲಾಗುವ, ಉಪ್ಪಿನಂಶ ಹೆಚ್ಚಿರುವ ನೀರನ್ನೇ ಇನ್ನಿತರ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಕುಡಿಯವ ನೀರಿನ ಕೊರತೆ ಎದುರಿಸುತ್ತಿರುವ ಗ್ರಾಮೀಣ ಭಾಗದ ಹಳ್ಳಿಗಳಿಗೆ ನೀರು ಪೂರೈಸಲು ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಳೆ ಕೊರತೆ ಕಾರಣ ಬತ್ತಿರುವ ಕೆರೆಗಳಿಗೆ ಕಾಲುವೆ ಮೂಲಕ ನೀರು ಪೂರೈಸುವ ಪ್ರಯತ್ನಗಳು ನಡೆದಿವೆ. ಆದರೆ ಕಾಲುವೆ ಸಂಪರ್ಕಗಳಿಲ್ಲದ ಊರುಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ಈ ಪ್ರದೇಶಗಳಿಗೆ ಟ್ಯಾಂಕರ್ ನೀರು ಪೂರೈಕೆ ಅನಿವಾರ್ಯವಾಗಿದೆ.

ಸದ್ಯ ಜಿಲ್ಲೆಯಲ್ಲಿ ಸುಮಾರು 10 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಹುಬ್ಬಳ್ಳಿ ತಾಲ್ಲೂಕಿನ ನಾಗರಹಳ್ಳಿ, ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ, ನಾರಾಯಣಪುರ, ಮುಳ್ಳೊಳ್ಳಿ ಮೊದಲಾದ ಪ್ರದೇಶಗಳಿಗೆ ಟ್ಯಾಂಕರ್ ನೀರು ಸರಬರಾಜಾಗುತ್ತಿದೆ. ಬೇಸಿಗೆ ಮುಂದುವರಿದಂತೆ ಇನ್ನಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿ ಜನರ ಜೊತೆಗೆ ಜಾನುವಾರುಗಳಿಗೂ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಜಿಲ್ಲಾಡಳಿತ ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ.

ಅವಳಿನಗರಕ್ಕೆ ಕೊರತೆಯಿಲ್ಲ
`ಬೇಸಿಗೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ಸಹಜ. ಆದರೆ ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ನೀರಿನ ಕೊರತೆ ಉಂಟಾಗುವುದಿಲ್ಲ. ಅಗತ್ಯವಾದ ಪ್ರಮಾಣದಲ್ಲಿ ನೀರು ಲಭ್ಯವಿದ್ದು, ಸೂಕ್ತ ರೀತಿಯಲ್ಲಿ ಪೂರೈಕೆಯಾಗುತ್ತದೆ~ ಎಂದು ಭರವಸೆ ವ್ಯಕ್ತಪಡಿಸುತ್ತಾರೆ  ಜಲ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಜಯರಾಮ್.

ಅವಳಿನಗರಕ್ಕೆ ಮುಖ್ಯವಾಗಿ ಮಲಪ್ರಭಾ ನದಿಯಿಂದ ಹಾಗೂ ನೀರಸಾಗರ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದೆ. ಮಲಪ್ರಭಾ ನದಿಯಿಂದ 120 ದಶಲಕ್ಷ ಲೀಟರ್ ಹಾಗೂ ನೀರಸಾಗರದಿಂದ 30 ದಶಲಕ್ಷ ಲೀಟರ್‌ನಷ್ಟು ನೀರನ್ನು ನಿತ್ಯ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಸರಾಸರಿ ಮೂರು ದಿನಕೊಮ್ಮೆ  ನೀರು ಪೂರೈಕೆಯಾಗುತ್ತಿದೆ. ಪಾಲಿಕೆಯ ಒಟ್ಟು 65 ವಾರ್ಡುಗಳ ಪೈಕಿ 8 ವಾರ್ಡುಗಳಲ್ಲಿ 24/7 ನೀರು ಪೂರೈಕೆ ಜಾರಿಯಲ್ಲಿದೆ. ಹೀಗಾಗಿ ನೀರಿಗೆ ಕೊರತೆ ಉಂಟಾದಲ್ಲಿ ಯೋಜನೆ ತಲೆಕೆಳಗಾಗುವ ಸಾಧ್ಯತೆಯೂ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.