ಹುಬ್ಬಳ್ಳಿ: ಹಸಿಮಳೆ ಹಾಗೂ ಹುಸಿಮಳೆ ಈ ಬಾರಿ ಜಿಲ್ಲೆಯಲ್ಲಿ ರೈತರನ್ನು ಅತಂತ್ರರನ್ನಾಗಿಸಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ವಾಡಿಕೆಗಿಂತ ಸುಮಾರು ಶೇ 55 ಕಡಿಮೆ ಮಳೆ ಆಗಿದೆ. ಈ ಪೈಕಿ ಬಹುತೇಕ ಪ್ರದೇಶದಲ್ಲಿ ಬಿದ್ದಿರುವುದು ಹಸಿ ಮಳೆ. ಉಳಿದ ಪ್ರದೇಶದಲ್ಲಿ ಮಳೆ ಬೀಳುವ ಭರವಸೆಯೇ ಹುಸಿಯಾಗಿದೆ. ಹೀಗಾಗಿ ರೈತರು ನಿರಾಸೆಗೊಂಡಿದ್ದಾರೆ. ನೀರು ನಿಲ್ಲುವಂಥ ಮಳೆ ಇನ್ನೂ ಸುರಿಯದ ಕಾರಣ ಭತ್ತದ ಬೆಳೆಗೆ ಕೈಹಾಕುವ ಸಾಹಸಕ್ಕೆ ಅವರು ಇನ್ನೂ ಕೈ ಹಾಕಲಿಲ್ಲ.
ಭತ್ತದ ಬಿತ್ತನೆಗೆ ಹಸಿಮಳೆ ಅನುಕೂಲಕರವಲ್ಲ. ಭತ್ತ ಬೆಳೆಯಬೇಕಾದರೆ ಗದ್ದೆಯಲ್ಲಿ ನೀರು ನ್ಲ್ಲಿಲಿಸುವ `ನೀರು ಮಳೆ~ ಬರಬೇಕು. ಆದ್ದರಿಂದ ಹಕ್ಕಲ ಪೀಕು ಎಂದು ಕರೆಯಲಾಗುವ ಗೊಂಜಾಳ (ಮೆಕ್ಕೆ ಜೋಳ), ಸೋಯಾಬೀನ್, ಹತ್ತಿ ಇತ್ಯಾದಿ ಬೆಳೆಯಲು ರೈತರು ಮುಂದಾಗಿದ್ದಾರೆ. ಇನ್ನೂ ಸಮರ್ಪಕ ಮಳೆಯಾಗದಿದ್ದರೆ ಈ ಬೆಳೆಯೂ ಒಣಗಿ ಹೋಗುವ ಆತಂಕ ಅವರನ್ನು ಕಾಡುತ್ತಿದೆ.
`ದೇವ್ರ ಮೇಲೆ ಭಾರ ಹಾಕಿ ಬಿತ್ತಿದ್ದೇವೆ. ನೆಲ ಇನ್ನೂ ಹಸಿಯಾಗದ ಕಾರಣ ಬೆಳೆ ಬರುವ ಗ್ಯಾರಂಟಿ ಇಲ್ಲ. ಮಳೆ ಬರದಿದ್ದರೆ ಬೆಳೆ ಬಾಡಿ ಹೋಗುತ್ತದೆ~ ಎಂದು ಹುಬ್ಬಳ್ಳಿ ತಾಲ್ಲೂಕಿನ ಪಾಲಿಕೊಪ್ಪದ ಬಸಪ್ಪ ಹುಡೇದ ಹೇಳಿದರು.
ಮಳೆಯ `ಆಟ~ದಿಂದಾಗಿ ಅಕ್ಕಪಕ್ಕದ ಊರುಗಳಲ್ಲೇ ಒಂದು ಹಳ್ಳಿ ಹಸಿರು ಹೊದ್ದು ಮಲಗಿದ್ದರೆ, ಇನ್ನೊಂದು ಗ್ರಾಮ ಬಿತ್ತನೆಗೆ ಸಜ್ಜಾಗುತ್ತಿರುವ ಚಿತ್ರಣ ಹಲವೆಡೆ ಕಂಡು ಬರುತ್ತಿದೆ. ಹುಬ್ಬಳ್ಳಿ ತಾಲ್ಲೂಕಿನ ಅರಳಿಕಟ್ಟೆ ರಸ್ತೆ ಪ್ರದೇಶದಿಂದ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಗಡಿವರೆಗೆ ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿದ್ದರೆ ಅರಳಿಕಟ್ಟೆ ಗ್ರಾಮಕ್ಕೆ ತಾಗಿಕೊಂಡಿರುವ ನೂಲ್ವಿಯ ಹೊಲಗಳಲ್ಲಿ ರೈತರು ರೆಂಟೆ ಹೊಡೆದು ಕಾಯುತ್ತಿದ್ದಾರೆ.
`ಅರಳಿಕಟ್ಟೆಯಿಂದ ಕಲಘಟಗಿ ತಾಲ್ಲೂಕಿನವರೆಗೂ ಹಕ್ಕಲ ಪೀಕು ಬೆಳೆದು ನಿಂತಿದೆ. ಹುಸಿ ಮಳೆ ಮುಂದುವರಿದರೆ ಈ ಪೀಕು ಉತ್ತಮ ಇಳುವರಿ ಕೊಡುವ ನಿರೀಕ್ಷೆ ಇದೆ~ ಎಂದು ಹೇಳುತ್ತಾರೆ ಫಕ್ಕೀರೇಶ ತಿರುಮಲಕೊಪ್ಪ.
`ಪಕ್ಕದ ಹಳ್ಳಿಯಲ್ಲಿ ಸುರಿದ ಮಳೆ ನಮ್ಮತ್ತ ಕರುಣೆ ತೋರಲಿಲ್ಲ. ಹೀಗಾಗಿ ಒಬ್ಬರೂ ಬಿತ್ತನೆಗೆ ಮುಂದಾಗಲಿಲ್ಲ. ಬೀಜ ಹಾಗೂ ಗೊಬ್ಬರ ಹಾಳಾಗಿ ಹೋಗಲಿದೆ~ ಎಂಬುದು ನೂಲ್ವಿಯ ಎನ್. ಎಂ. ಮಾಯ್ಕಾರ ಅವರ ಹೇಳಿಕೆ.
`ಮಳೆ ಬಂದರೆ ಬಂಪರ್ ಬೆಳೆಯ ನಿರೀಕ್ಷೆ~
`ಹಸಿ ಹಾಗೂ ಹುಸಿ ಮಳೆ ರೈತರನ್ನು ಅತಂತ್ರರನ್ನಾಗಿ ಮಾಡಿದೆಯಾದರೂ ಇನ್ನು ಮುಂದೆ ಮಳೆಯಾದರೆ ಈ ಬಾರಿ ಬಂಪರ್ ಬೆಳೆಯಾಗಲಿದೆ~ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್. ಎಂ. ಗಡಾದ `ಪ್ರಜಾವಾಣಿ~ಗೆ ತಿಳಿಸಿದರು.
`ಮಳೆ ಚೆನ್ನಾಗಿ ಸುರಿದರೆ ಹಕ್ಕಲ ಪೀಕು ಚೆನ್ನಾಗಿ ಬರುತ್ತದೆ. ಉತ್ತಮ ಮಳೆಯಾದರೆ ಭತ್ತ ಬೆಳೆಯಲು ಇನ್ನು ಕೂಡ ಅವಕಾಶವಿದೆ. ಜಿಲ್ಲೆಯ ಒಟ್ಟು 2,06,200 ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ ಸುಮಾರು 91,000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ನವಲಗುಂದ, ಕುಂದಗೋಳ ಮುಂತಾದ ತಾಲ್ಲೂಕುಗಳ ಹೆಚ್ಚಿನ ಪ್ರದೇಶದಲ್ಲಿ ಮಳೆಯ ಅಭಾವ ಕಂಡುಬಂದಿದೆ. ಹೀಗಾಗಿ ಬಿತ್ತನೆಯಲ್ಲೂ ಹಿನ್ನಡೆ ಉಂಟಾಗಿದೆ~ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.