ADVERTISEMENT

ಹುಡುಗ ಅಪ್ರಾಪ್ತ: ವಿವಾಹಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 8:18 IST
Last Updated 21 ಏಪ್ರಿಲ್ 2013, 8:18 IST

ಧಾರವಾಡ: ಮದುವೆ ವಯಸ್ಸಿಗೆ ಬಾರದ ಯುವಕನಿಗೆ 21 ವರ್ಷ ವಯಸ್ಸು ತುಂಬಿದ ಹುಡುಗಿಯನ್ನು ವಿವಾಹ ಮಾಡಲು ಹೊರಟಿದ್ದ ಪಾಲಕರನ್ನು ಕಿಡ್ಸ್ ಸಂಸ್ಥೆಯವರು ತಡೆದ  ಘಟನೆ ತಾಲ್ಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದದಲ್ಲಿ ಶನಿವಾರ ನಡೆದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. ಇದರಲ್ಲಿ ಒಟ್ಟು 18 ಜೋಡಿ  ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, ಧಾರವಾಡದ ತೇಜಸ್ವೀನಗರದ ಮೀನಾಕ್ಷಿ ಬ್ಯಾಹಟ್ಟಿ (21) ಹಾಗೂ ಕಡಬಗಟ್ಟಿ ಗ್ರಾಮದ ಅಜ್ಜಪ್ಪ ವಕ್ಕುಂದ (19) ಎಂಬ ಜೋಡಿಯ ವಯಸ್ಸು ಕ್ರಮಬದ್ಧವಾಗಿಲ್ಲದ ಕಾರಣ ಕಿಡ್ಸ್ ಸಂಸ್ಥೆ ಕಾರ್ಯಕರ್ತರು ಮಧ್ಯ ಪ್ರವೇಶಿಸಿ ವಿವಾಹ ನಿಲ್ಲಿಸಿದ್ದಾರೆ. ಈ ಕುರಿತು ಅವರ ಪಾಲಕರೊಂದಿಗೆ ಚರ್ಚಿಸಿದ ಕಾರ್ಯಕರ್ತರು, ಕಾನೂನು ಪ್ರಕಾರ ಹುಡುಗನಿಗೆ 21 ವರ್ಷ ವಯಸ್ಸಾಗಿರಬೇಕು ಹಾಗೂ ಹುಡುಗಿಗೆ 18 ವರ್ಷ ವಯಸ್ಸಾಗಿರಬೇಕು ಆದ್ದರಿಂದ ಇದು ಕಾನೂನುಬದ್ಧ ವಿವಾಹ ಅಲ್ಲ ಎಂದು ಪಾಲಕರಿಗೆ ಮನವರಿಕೆ ಮಾಡಿಕೊಟ್ಟರು. ಆದರೆ ಹುಡುಗನ ಪೋಷಕರು ಮಗನಿಗೆ 21 ವರ್ಷ ತುಂಬಿದ ಮೇಲೆಯೇ ಸೊಸೆಯನ್ನು ಮನೆಗೆ ಕರೆದೊಯ್ಯುವುದಾಗಿ ತಿಳಿಸಿದ್ದಾರೆ. ಅದಕ್ಕೆ ಒಪ್ಪದ ಕಿಡ್ಸ್ ಸಂಸ್ಥೆ ಸಿಬ್ಬಂದಿ ವಿವಾಹ ಮಾಡಿದರೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ ಸಂಘಟಕರು ಮದುವೆ ನಿಲ್ಲಿಸಿದ್ದಾರೆ. ಕೊನೆಗೆ ಎರಡೂ ಕಡೆಯವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿಕೊಟ್ಟಿದ್ದಾರೆ.

ಕಿಡ್ಸ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಬಸವರಾಜ ಮುನವಳ್ಳಿ, ಪೊಲೀಸ್ ಅಧಿಕಾರಿಗಳಾದ ಬಿ.ಎಚ್.ಗೊಂದಕರ ಹಾಗೂ ಪಿ.ಡಿ.ಗುತ್ತಲ ಹಾಗೂ ಗುಬ್ಬಚ್ಚಿ ಮಕ್ಕಳ ಮಹಾಸಂಘದ ಜಂಟಿ ಪ್ರಯತ್ನದಿಂದ ವಿವಾಹ ನಿಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.