ADVERTISEMENT

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿಲ್ಲ ಭದ್ರತೆ

ಆರ್.ಜಿತೇಂದ್ರ
Published 28 ಸೆಪ್ಟೆಂಬರ್ 2011, 6:40 IST
Last Updated 28 ಸೆಪ್ಟೆಂಬರ್ 2011, 6:40 IST
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿಲ್ಲ ಭದ್ರತೆ
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿಲ್ಲ ಭದ್ರತೆ   

ಹುಬ್ಬಳ್ಳಿ: ಉಗ್ರರ ದಾಳಿಯ ಭೀತಿ ಹಿನ್ನೆಲೆಯಲ್ಲಿ, ನಗರದ ವಿಮಾನ ನಿಲ್ದಾಣದಲ್ಲಿ ಕಮಾಂಡೋಗಳ ಸರ್ಪಗಾವಲು. ಮತ್ತೊಂದೆಡೆ, ಉತ್ತರ ಕರ್ನಾಟಕದ ಪ್ರಮುಖ ಪ್ರಯಾಣಿಕರ ಕೇಂದ್ರವೂ ಆದ ರೈಲು ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ ಕುರಿತು ಕೇಳುವವರೇ ಇಲ್ಲ. ಪ್ರವೇಶ ದ್ವಾರದಲ್ಲಿ ಇದ್ದ ಒಂದು ಲೋಹಶೋಧಕ ಯಂತ್ರವೂ ಸದ್ಯಕ್ಕೆ ನಾಪತ್ತೆಯಾಗಿದೆ.

ನೈರುತ್ಯ ರೈಲ್ವೆಯ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿದೆ. ವಾಣಿಜ್ಯ ಕೇಂದ್ರವೂ ಆದ ಹುಬ್ಬಳ್ಳಿಗೆ ಬಂದು-ಹೋಗಲು ಸಹಸ್ರಾರು ಮಂದಿ ರೈಲುಗಳನ್ನೇ ಅವಲಂಬಿಸಿದ್ದಾರೆ. ಈ ನಿಲ್ದಾಣಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ಇಲ್ಲಿ ಪ್ರಯಾಣಿಕರ ಸಂಖ್ಯೆ ನೂರಾರು ಪಟ್ಟು ಜಾಸ್ತಿ ಇದೆ. ಆದರೆ ಅದಕ್ಕೆ ತಕ್ಕ ಸುರಕ್ಷತಾ ಕ್ರಮಗಳನ್ನು ರೈಲ್ವೆ ಅಧಿಕಾರಿಗಳು ಕೈಗೊಂಡಿಲ್ಲ.

ಮಂಗಳವಾರ ನಗರದ ನಿಲ್ದಾಣಕ್ಕೆ `ಪ್ರಜಾವಾಣಿ~ ಭೇಟಿ ನೀಡಿದ ವೇಳೆ, ಪ್ರವೇಶದ್ವಾರದಲ್ಲಿ ಯಾವುದೇ ಶೋಧ ಕಾರ್ಯ ಕೈಗೊಳ್ಳದೇ ನೇರ ನಿಲ್ದಾಣದೊಳಕ್ಕೆ ಪ್ರಯಾಣಿಕರಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದು ಕಂಡು ಬಂತು. ಲಗೇಜುಗಳನ್ನು ಹೊತ್ತ ಪ್ರಯಾಣಿಕರು ಯಾವುದೇ ತಪಾಸಣೆ ಇಲ್ಲದೇ ನೇರವಾಗಿ ಫ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಪಡೆಯುತ್ತಿದ್ದರು. ಭದ್ರತೆಯ ಉಸ್ತುವಾರಿ ಹೊತ್ತ ಪೊಲೀಸರು ಬೆರಳೆಣಿಕೆಯ ಸಂಖ್ಯೆಯಲ್ಲಿ ಅಲ್ಲಲ್ಲಿ  ಗೋಚರಿಸಿದರು.

ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ಈ ಮೊದಲು ಲೋಹ ಶೋಧಕ ಯಂತ್ರವೊಂದನ್ನು ಇರಿಸಲಾಗಿತ್ತು. ಇದರ ಮೂಲಕವೇ ಪ್ರಯಾಣಿಕರು ಹಾದು ಹೋಗಬೇಕಿತ್ತು. ಕೆಲವು ತಿಂಗಳುಗಳಿಂದ ಈ ಯಂತ್ರ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದರೆ ಕೆಲವು ದಿನಗಳಿಂದ ಈ ಯಂತ್ರವನ್ನು ಪ್ರವೇಶದ್ವಾರದಿಂದಲೇ ತೆಗೆದುಹಾಕಲಾಗಿದೆ.

ಇನ್ನೂ, ರೈಲ್ವೆ ನಿಲ್ದಾಣದ ಮುಖ್ಯ ಪ್ರವೇಶದ್ವಾರದ ಜೊತೆಗೆ ಕಾಲು ದಾರಿಗಳ ಮೂಲಕವೂ ನಿಲ್ದಾಣ
ಪ್ರವೇಶಿಸಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
 
`ರೈಲು ನಿಲ್ದಾಣ ಪ್ರವೇಶಕ್ಕೆ ಜನರು ಮುಖ್ಯದ್ವಾರದ ಜೊತೆಗೆ ಈ ಕಾಲುದಾರಿಗಳನ್ನೂ ಹೆಚ್ಚಾಗಿ ಬಳಸುತ್ತಾರೆ. ಭದ್ರತೆ ದೃಷ್ಟಿಯಿಂದ ಈ ಕುರಿತು ಗಮನ ನೀಡುವುದು ಅಗತ್ಯ~ ಎಂದು ರೈಲ್ವೆ ನಿಲ್ದಾಣದಲ್ಲಿದ್ದ ಹುಬ್ಬಳ್ಳಿಯ ಶ್ರೀನಿಧಿ ಅಭಿಪ್ರಾಯಪಟ್ಟರು.

`ರೈಲುಗಳ ಮೂಲಕ ಸಾಗಣೆಯಾಗುವ ಸರಕುಗಳ ಮೇಲೂ ಕಣ್ಣಿರಿಸಬೇಕು. ನಿಲ್ದಾಣದ ಹೊರಗಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಭದ್ರತೆಗೆ ಅನುಕೂಲವಾಗುತ್ತದೆ~ ಎಂದು ಅವರು ತಿಳಿಸಿದರು.

`ರೈಲ್ವೆ ನಿಲ್ದಾಣಗಳಲ್ಲಿನ ಚಟುವಟಿಕೆಗಳ ಮೇಲೆ ಕಣ್ಣಿರಿಸಲು ಇಲಾಖೆಯು ದೇಶದಾದ್ಯಂತ `ವಿಡಿಯೊ ಸರ್ವೈವಲೆನ್ಸ್ ಸಿಸ್ಟಂ~ ಅನ್ನು ಜಾರಿಗೊಳಿಸಿದೆ. ಈ ನೆಟ್‌ವರ್ಕ್ ಮೂಲಕ ದೇಶದ ವಿವಿಧ ರೈಲು ನಿಲ್ದಾಣಗಳಲ್ಲಿನ ಚಲನವಲನಗಳನ್ನು ರೈಲ್ವೆ ಪೊಲೀಸರು ಗಮನಿಸುತ್ತಿರುತ್ತಾರೆ. ಜೊತೆಗೆ ಆಗಾಗ್ಗೆ ಗಸ್ತು ತಿರುಗುತ್ತಿರುತ್ತಾರೆ~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.