ಧಾರವಾಡ: ವೈವಿಧ್ಯಮಯ ಆಹಾರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ರಂಜನೆಯನ್ನು ಉದ್ದೇಶವಾಗಿಸಿಕೊಂಡು ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ಆಹಾರ ಮೇಳ’ ಎರಡನೇ ದಿನವೂ ಯಶಸ್ವಿಯಾಗಿ ನಡೆಯಿತು.
ಮೊದಲ ದಿನ ವಿವಿಧ ರಾಜ್ಯಗಳ ಕಲಾತಂಡಗಳು ಆಯಾ ರಾಜ್ಯದ ವಿಭಿನ್ನ, ವಿಶಿಷ್ಟ ಜಾನಪದ ಕಲಾಪ್ರಕಾರಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರೂ, ಮೇಳಕ್ಕೆ ಆಗಮಿಸಿದವರ ಗಮನ ಹೆಚ್ಚಾಗಿ ಆಹಾರ ಮಳಿಗೆಗಳು ಮತ್ತು ಮನರಂಜನಾ ಪಾರ್ಕ್‌ನತ್ತಲೇ ಹೆಚ್ಚು ಕೇಂದ್ರಿಕೃತಗೊಂಡಿದ್ದರಿಂದ ಕುರ್ಚಿಗಳು ಖಾಲಿ ಇದ್ದವು.
ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಸ್ಟಾಲ್ ಎರಡನೇ ದಿನವೂ ಕಿಕ್ಕಿರಿದು ತುಂಬಿತ್ತು. ಮೊದಲ ದಿನ ₹ 45ಸಾವಿರದಷ್ಟು ವಹಿವಾಟು ನಡೆಸಿದ್ದ ಮಳಿಗೆ, ಎರಡನೇ ದಿನ ಮತ್ಸ್ಯ ಪ್ರಿಯರ ಭಾರೀ ಆಸಕ್ತಿಯಿಂದ ಅದನ್ನು ₹ 50 ಸಾವಿರಕ್ಕೆ ಹೆಚ್ಚಿಸಿಕೊಂಡಿತು. ಮಳಿಗೆಯಲ್ಲಿ ಲಭ್ಯವಿರುವ ಬಾಂಗಡೆ, ಅಂಜಲ್, ಪಾಂಫ್ರೇಟ್, ಸಮುದ್ರ ಏಡಿ ಇತ್ಯಾದಿಗಳಿಂದ ಸಿದ್ಧವಾದ ಖಾದ್ಯ ಧಾರವಾಡಿಗರ ಬಾಯಲ್ಲಿ ನೀರೂರಿಸಿತು.
ಲಾಬ್ಸಟರ್ ಬೈಟ್‌ಗೆ ₹ 10, ಕ್ರಾಬ್ ಕ್ಲೋವ್ ₹ 20, ಬಾಂಗಡೆ ಫ್ರೈ ₹ 50ರಿಂದ ಹಿಡಿದು ಗರಿಷ್ಠ ₹ 130ಕ್ಕೆ ಲಭ್ಯವಿರುವ ಪಾಂಫ್ರೇಟ್‌ವರೆಗೆ ಎಲ್ಲವನ್ನೂ ಜನರು ಸವಿದರು. ಇದೇ ಪಕ್ಕದಲ್ಲಿರುವ ಪರ್ಫೆಕ್ಟ್ ಕಿಚನ್‌ನಲ್ಲಿ ಮಹಾರಾಷ್ಟ್ರ, ಕಾಂಟಿನೆಂಟಲ್ ಹಾಗೂ ಚೈನಿಸ್‌ನ ಆಹಾರ ಮಳಿಗೆಯಲ್ಲಿ ಸಿಗುವ ಕೊತ್ತಂಬರಿ ವಡಾಗೆ ಬೇಡಿಕೆ ಹೆಚ್ಚು ಇತ್ತು. ಯುವಜನತೆಯೇ ಹೆಚ್ಚು ಮುಗಿಬಿದ್ದಿದ್ದ ಈ ಮಳಿಗೆಯಲ್ಲಿ ಎಗ್ ರೋಲ್, ವೆಜ್ ರೋಲ್ ಇತ್ಯಾದಿ ಬಗೆಬಗೆಯ ರೋಲ್ ಹಾಗೂ ತಿನಿಸುಗಳು ಲಭ್ಯ.
ಇನ್ನು ಶಾಖಾಹಾರ ವಿಭಾಗದಲ್ಲಿ ದಕ್ಷಿಣ ಕನ್ನಡದ ವಿಶೇಷ ತಿನಿಸುಗಳು ಇಲ್ಲಿ ಹೆಚ್ಚು ಗಮನ ಸೆಳೆಯುವಂತಿದ್ದವು. ನೀರು ದೋಸೆ ಹಾಗೂ ಕಾಯಿ ಹಾಲು, ಕೇರಳದ ಅಪ್ಪಂ, ಬಾಳೆಎಲೆ ಹಿಟ್ಟು, ಕೊಟ್ಟೆ, ಮೂಡದ ಜತೆಗೆ ಬೆಲ್ಲ ಹಾಗೂ ಅಕ್ಕಿ ಹಿಟ್ಟಿನಲ್ಲಿ ಮಾಡಿದ ಕೆಂಡದ ಅಡ್ಡೆ ಧಾರವಾಡಕ್ಕೆ ಹೊಸತಾದ್ದರಿಂದ ಇದನ್ನು ರುಚಿ ನೋಡುವವರ ಸಂಖ್ಯೆಯೂ ಹೆಚ್ಚು ಇತ್ತು.
ಮೊದಲ ದಿನ ಹಲವು ಮಳಿಗೆಗಳು ಖಾಲಿ ಇದ್ದು, ತಿಂಡಿ ಪ್ರಿಯರಿಗೆ ಕೊಂಚ ಮಟ್ಟಿನ ನಿರಾಸೆ ಮೂಡಿಸಿತು. ಹಲವು ಮಳಿಗೆ ಮುಂದೆ ಗ್ರಾಹಕರಿದ್ದರೂ, ತಿನಿಸುಗಳು ಖಾಲಿಯಾಗಿದ್ದವು. ಎರಡನೇ ದಿನವೂ ತರಹೇವಾರಿ ತಿನಿಸುಗಳಿಗೆ ಬೇಡಿಕೆ ಹೆಚ್ಚು ಇತ್ತು. ರೊಟ್ಟಿ ಪಲ್ಯ ತಿಂದ ಮಂದಿ ಮಂಗಳೂರು, ಚೈನಿಸ್, ಕಾಂಟಿನೆಂಟಲ್ ಎಂದು ಹೊಸ ರುಚಿ ಸವಿಯುವ ದೃಶ್ಯ ಸಾಮಾನ್ಯವಾಗಿತ್ತು.
ಮೋಡಿ ಮಾಡಿದ ಫ್ಯೂಷನ್: ದೇಶದ ನಾನಾ ಮೂಲೆಯಿಂದ ಬಂದಿದ್ದ ಕಲಾತಂಡಗಳನ್ನು ಒಂದೆಡೆ ಸೇರಿಸಿ ಒಂದೇ ರಾಗಕ್ಕೆ ಹೆಜ್ಜೆ ಹಾಕುವಂತೆ ಮಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಸದಾಶಿವ ಮರ್ಜಿ ಅವರ ತಂತ್ರ ಫಲ ನೀಡಿತು. ಕನ್ನಡದ ಹಾಡುಗಳಿಗೆ ಪಂಜಾಬಿಗಳು, ಗುಜರಾತಿ, ಕಾಶ್ಮೀರಿ, ಆಂಧ್ರ, ತಮಿಳುನಾಡು ಸೇರಿದಂತೆ ರಾಜ್ಯದ ಕಲಾತಂಡಗಳೂ ಹೆಜ್ಜೆ ಹಾಕಿ ನೋಡುಗರಿಂದ ಅಪಾರ ಮೆಚ್ಚುಗೆ ಪಡೆಯಿತು.
ಆಸ್ಸಾಂ ತಂಡದ ‘ಬಿಹೂ’, ಜಮ್ಮು ಕಾಶ್ಮೀರದ ರೂಫ್, ಹರಿಯಾಣಾದ ಭಾಂಗಡಾ ಸೇರಿದಂತೆ ವಿವಿಧ ರಾಜ್ಯಗಳ ಜಾನಪದ ಕಲಾತಂಡಗಳು ಪ್ರದರ್ಶಿಸಿದ ನೃತ್ಯಗಳು ಆಸಕ್ತರ ಮನರಂಜಿಸಿದವು. ಎರಡನೇ ದಿನವೂ ಪಾಂಡಿಚೇರಿಯ ಮಾಸ್ಕರೇಡ್, ಮಂಡ್ಯದ ಪಟಕುಣಿತ, ಬಾಂಗಡಾ, ಓರಿಸ್ಸಾದ ಸಂಭಾಲಪುರಿ, ಆಂಧ್ರಪ್ರದೇಶದ ಗುರುವಯ್ಯಲು, ಗುಜರಾತ್‌ನ ಮೇಸಾವಿ ಇತ್ಯಾದಿ ಕಲಾಪ್ರಕಾರಗಳು ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸಿದವು.ಮೈ ನಡುಗಿಸುವ ಚಳಿಯ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಕಾಲೇಜು ಮೈದಾನದಲ್ಲಿ ಕಂಡು ಬಂದರು.
ಮಕ್ಕಳು ತಮ್ಮ ಪಾಲಕರೊಂದಿಗೆ ಮುಖ್ಯ ಮೈದಾನದ ಪಕ್ಕದ ವಿಜ್ಞಾನ ಕಾಲೇಜು ಮೈದಾನದ ಅಮ್ಯೂಸ್ಮೆಂಟ್ ಪಾರ್ಕ್‌ಗೆ ಲಗ್ಗೆ ಹಾಕಿದ್ದರು. ಎರಡನೆ ದಿನ ಸಂಕ್ರಾಂತಿ ಹಬ್ಬದ ರಜೆ ಇದ್ದುದರಿಂದ ಕರ್ನಾಟಕ ಕಾಲೇಜು ಮೈದಾನಕ್ಕೆ ಆಗಮಿಸಿದ್ದ ಸಾರ್ವಜನಿಕರ ಸಂಖ್ಯೆಯಲ್ಲಿ ಹೆಚ್ಚಾಗಿತ್ತು. ಸಂಜೆಯಾಗುತ್ತಿದ್ದಂತೆ ಜನ ಕರ್ನಾಟಕ ಕಾಲೇಜು ಮೈದಾನದತ್ತ ಹೆಜ್ಜೆ ಹಾಕಿದರು. ಕಾಲೇಜು ಮೈದಾನದ ಭವ್ಯ ವೇದಿಕೆಯಲ್ಲಿ ಮತ್ತೇ ವೈವಿಧ್ಯಮಯ ಜಾನಪದ ಲೋಕ ಅನಾವರಣಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.