ADVERTISEMENT

ಹೊಸ ಮಾರ್ಗ: 208 ಕಿಮೀ ಶೀಘ್ರ ಪೂರ್ಣ

ನೈರುತ್ಯ ರೈಲ್ವೆ ಕೇಂದ್ರ ಕಚೇರಿ: ವಿವಿಧ ವಿಭಾಗಗಳಿಂದ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 9:18 IST
Last Updated 16 ಆಗಸ್ಟ್ 2016, 9:18 IST
ನೈರುತ್ಯ ರೈಲ್ವೆ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಲಯ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ ಗುಪ್ತಾ ಪರೇಡ್ ವೀಕ್ಷಣೆ ಮಾಡಿದರು. ಮುಖ್ಯ ಭದ್ರತಾ ಆಯುಕ್ತ ಎಸ್‌.ಸಿ.ಸಾಹು ಇದ್ದಾರೆ
ನೈರುತ್ಯ ರೈಲ್ವೆ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಲಯ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ ಗುಪ್ತಾ ಪರೇಡ್ ವೀಕ್ಷಣೆ ಮಾಡಿದರು. ಮುಖ್ಯ ಭದ್ರತಾ ಆಯುಕ್ತ ಎಸ್‌.ಸಿ.ಸಾಹು ಇದ್ದಾರೆ   

ಹುಬ್ಬಳ್ಳಿ: ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಹೊಸ ಮಾರ್ಗಗಳ ಪೈಕಿ 208 ಕಿಮೀ ಕಾಮಗಾರಿಯನ್ನು 2016–17ನೇ ಆರ್ಥಿಕ ವರ್ಷದಲ್ಲಿ ಪೂರ್ತಿಗೊಳಿಸುವ ಗುರಿ ಇದೆ ಎಂದು ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ ಗುಪ್ತಾ ತಿಳಿಸಿದರು.

ನಗರದ ಗದಗ ರಸ್ತೆಯಲ್ಲಿರುವ ನೈರುತ್ವ ರೈಲ್ವೆ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಭದ್ರತಾ ಸಿಬ್ಬಂದಿಯಿಂದ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ವಲಯದಲ್ಲಿ ಏಳು ಪಾದಚಾರಿ ಮೇಲ್ಸೇತುವೆ (ಎಫ್‌ಓಬಿ) ಮತ್ತು ಮೈಸೂರು–ಬೆಂಗಳೂರು ನಡುವಿನ ಹಳಿ ಪರಿವರ್ತನೆಯಲ್ಲಿ ಬಾಕಿ ಉಳಿದಿರುವ 1.5 ಕಿ.ಮೀ ದೂರದ ಕಾಮಗಾರಿ ಈ ವರ್ಷ ಮುಗಿಸುವ ಯೋಜನೆ ಇದೆ’ ಎಂದು ಹೇಳಿದ ಅವರು ‘ವಲಯ ವ್ಯಾಪ್ತಿಯಲ್ಲಿ ಕಳೆದ ವರ್ಷ 72 ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕಲಾಗಿತ್ತು. ಈ ವರ್ಷ ಇಂಥ 66 ಕಾಮಗಾರಿಗಳು ನಡೆಯಲಿವೆ’ ಎಂದರು.

‘ಯಶವಂತಪುರ ನಿಲ್ದಾಣದಲ್ಲಿ ಎರಡು ಎಸ್ಕಲೇಟರ್‌ಗಳನ್ನು ಅಳವಡಿಸಲಾಗಿದ್ದು ಬೆಂಗಳೂರು, ಯಶವಂತಪುರ, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಒಟ್ಟು ಎಂಟು ಎಸ್ಕಲೇಟರ್‌ಗಳನ್ನು ಅಳವಡಿಸಲು ಯೋಜನೆ ಸಿದ್ಧವಾಗಿದೆ. ಸೌರವಿದ್ಯುತ್‌ ಉಪಕರಣಗಳನ್ನು ಚಿಕ್ಕಜಾಜೂರು ನಿಲ್ದಾಣದಲ್ಲಿ ಅಳವಡಿಸಲಾಗಿದೆ’ ಎಂದು ಗುಪ್ತಾ ವಿವರಿಸಿದರು. 

‘ಪ್ರಯಾಣಿಕರ ದಟ್ಟಣೆ ಹೆಚ್ಚಾದ ಸಂದರ್ಭದಲ್ಲಿ 3039 ವಿಶೇಷ ಓಡಾಟವನ್ನು ನಡೆಸಲಾಗಿದ್ದು 6363 ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿತ್ತು. ನೈರುತ್ಯ ರೈಲ್ವೆ ಸಮಯಪಾಲನೆಯಲ್ಲಿ ಶೇ 96.5 ಗುರಿ ಸಾಧಿಸಿದೆ. ಭಾರತೀಯ ರೈಲ್ವೆಯಲ್ಲಿ ನೈರುತ್ಯ ವಲಯ ಎರಡನೇ ಅತಿ ಸ್ವಚ್ಛ ವಲಯ ಎಂದು ಹೆಸರು ಮಾಡಿದ್ದು ವಾಸ್ಕೊ ನಿಲ್ದಾಣವು ಮೂರನೇ ಅತಿಸ್ವಚ್ಛ ನಿಲ್ದಾಣ ಎಂಬ ಖ್ಯಾತಿ ಗಳಿಸಿದೆ’ ಎಂದು ಅವರು ನುಡಿದರು.

ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗದ ರೈಲ್ವೆ ಭದ್ರತಾ ದಳದ ಸಿಬ್ಬಂದಿ ಪಥ ಸಂಚಲನ ನಡೆಸಿದರು. ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಬ್ಯಾಂಡ್‌ ವಾದ್ಯ ನುಡಿಸಿದರು. ಶ್ವಾನ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಎಸ್‌.ಎಸ್.ಸೊಯಿನ್‌, ಮುಖ್ಯ ಭದ್ರತಾ ಆಯುಕ್ತ ಎಸ್‌.ಸಿ.ಸಾಹು, ಸಿಬ್ಬಂದಿ ವಿಭಾಗದ ಮುಖ್ಯ ಅಧಿಕಾರಿ ಪ್ರೇಮಚಂದ್‌, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರುಣ ಕುಮಾರ ಜೈನ್‌, ನೈರುತ್ಯ ರೈಲ್ವೆ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ದೀಪಾಲಿ ಗುಪ್ತಾ ಮತ್ತಿತರರು ಇದ್ದರು.

ಸರಕು ಸಾಗಣೆಯಲ್ಲಿ ಶೇ 8 ಪ್ರಗತಿ 
ಹುಬ್ಬಳ್ಳಿ:
ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ಸರಕು ಸಾಗಣೆಯಲ್ಲಿ ಕಳೆದ ಒಂದು ವರ್ಷದಲ್ಲಿ ಶೇ 8.28 ಪ್ರಗತಿ ಸಾಧಿಸಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರುಣ ಕುಮಾರ ಜೈನ್ ತಿಳಿಸಿದರು.

ನಗರದ ಕೇಶ್ವಾಪುರ ರಸ್ತೆಯಲ್ಲಿರುವ ವಿಭಾಗೀಯ ಕಚೇರಿ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘2006–07ನೇ ಆರ್ಥಿಕ ವರ್ಷದ ಜುಲೈ ತಿಂಗಳ ವರೆಗೆ ಹುಬ್ಬಳ್ಳಿ ವಿಭಾಗ 1.238 ಕೋಟಿ ಟನ್‌ ಸರಕು ಸಾಗಣೆ ಮಾಡಿದ್ದು  ₹ 1070 ಕೋಟಿ ಆದಾಯ ಗಳಿಸಿದೆ. ಈ ಅವಧಿಯಲ್ಲಿ 130.12 ಲಕ್ಷ ಪ್ರಯಾಣಿಕರು ಹುಬ್ಬಳ್ಳಿ ವಿಭಾಗದಲ್ಲಿ ಪ್ರಯಾಣ ಮಾಡಿದ್ದು ₹ 112.17 ಆದಾಯ ಬಂದಿದೆ’ ಎಂದರು. 

‘ಬ್ರಾಡ್‌ಗೇಜ್‌ ಮಾರ್ಗ ದ್ವಿಗುಣಗೊಳಿಸುವ ಕಾರ್ಯದಲ್ಲಿ ಭಾರಿ ಪ್ರಗತಿಯಾಗಿದ್ದು ಜುಲೈ ವರೆಗೆ 12 ಕಿ.ಮೀ ದ್ವಿಗುಣಗೊಂಡಿದೆ. ಬಹುನಿರೀಕ್ಷಿತ ಹೊಸಪೇಟೆ–ಹರಿಹರ ವಿಭಾಗದಲ್ಲಿ ಸರಕು ಸಾಗಣೆ ಆರಂಭಗೊಂಡಿದೆ. ಈ ವಿಭಾಗದಲ್ಲಿ ಪ್ರಯಾಣಿಕ ರೈಲುಗಳ ಓಡಾಟವನ್ನು ಶೀಘ್ರ ಆರಂಭಿಸಲು ಪ್ರಯತ್ನ ನಡೆದಿದೆ’ ಎಂದು ಅವರು ತಿಳಿಸಿದರು.

‘ಹುಬ್ಬಳ್ಳಿ ವಿಭಾಗದಲ್ಲಿ ಸಮಯಕ್ಕೆ ಸರಿಯಾಗಿ ರೈಲುಗಳ ಓಡಾಟ ನಡೆಸಲು ಗಮನ ನೀಡಲಾಗುತ್ತಿದ್ದು ಇದರ ಪರಿಣಾಮ ಸಮಯಪಾಲನೆ ಶೇ 97ರಷ್ಟಾಗಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದ ಸಂದರ್ಭದಲ್ಲಿ ಒಟ್ಟು ಒಟ್ಟು 181 ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗಿದ್ದು 287 ವಿಶೇಷ ಓಡಾಟ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಸಚಿವಾಲಯ ಹಮ್ಮಿಕೊಂಡಿರುವ ವಿವಿಧ ಯೋಜನೆಗಳಿಂದಾಗಿ ಜನರಲ್ಲಿ ರೈಲ್ವೆಯ ಕುರಿತು ಉತ್ತಮ ಭಾವನೆ ಮೂಡಿದೆ’ ಎಂದು ಅವರು ವಿವರಿಸಿದರು. 

ಧ್ವಜಾರೋಹಣದ ನಂತರ ಅವರು ಪರೇಡ್‌ ವೀಕ್ಷಣೆ ಮಾಡಿದರು. ರೈಲ್ವೆ ಭದ್ರತಾ ದಳ, ಭಾರತ ಸ್ಕೌಟ್ಸ್‌ ಅಂಡ್ ಗೈಡ್ಸ್‌ ಮತ್ತು ಭದ್ರತಾ ಸಿಬ್ಬಂದಿ ಪರೇಡ್ ನಡೆಸಿಕೊಟ್ಟರು. ರೈಲ್ವೆ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ದೇಶಭಕ್ತಿ ಬಿಂಬಿಸುವ ನೃತ್ಯ ನಡೆಸಿಕೊಟ್ಟರು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್‌.ಸಿ.ಪುನೇತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.