ADVERTISEMENT

‘ಅಚ್ಚಳಿಯದ ಛಾಪು ಮೂಡಿಸಿದ ಉತ್ತಂಗಿ’

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 5:40 IST
Last Updated 11 ಜನವರಿ 2014, 5:40 IST

ಧಾರವಾಡ: ಇತ್ತೀಚೆಗೆ ನಿಧನ ಹೊಂದಿದ ನಗರದ ಪ್ರಾಣಿ-ಪಕ್ಷಿ ಶಾಸ್ತ್ರಜ್ಞ ಡಾ.ಜೇಮ್ಸ್‌ ಸಿ.ಉತ್ತಂಗಿ ಅವರ ಸ್ಮರಣಾರ್ಥ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ಶ್ರದ್ಧಾಂಜಲಿ ಸಭೆ ಜರುಗಿತು.

ಸಭೆಯಲ್ಲಿ ಮಾತನಾಡಿದ ಜೆ.ಎಸ್.ಎಸ್. ಕಾಲೇಜಿನ ಪ್ರಾಧ್ಯಾಪಕಿ ಡಾ.ಆರ್,ಪರಿಮಳ, ‘ಡಾ.­ಜೆ.ಸಿ.­ಉತ್ತಂಗಿ ಅವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿ ಹಾಗೂ ಪರೋಪಕಾರಿ ವ್ಯಕ್ತಿಯಾಗಿ, ಪ್ರಾಣಿ-ಪಕ್ಷಿಯ ಶಾಸ್ತ್ರಜ್ಞರಾಗಿ ಪರಿಸರ ಪ್ರೇಮಿಯಾಗಿ ತಮ್ಮ ಸಂಶೋಧನೆಗಳ ಮೂಲಕ ವೈಜ್ಞಾನಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.  ಪರಿಸರ ಹಾಗೂ ಪಕ್ಷಿಪ್ರೇಮಿಗಳ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರಾದ ಇವರ ಅಗಲುವಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಮತ್ತು ಮುಂದಿನ ಪೀಳಿಗೆಗೆ ಇವರು ಮಾಡಿದ ಸಾಧನೆ ಸ್ಫೂರ್ತಿದಾಯಕ’ ಎಂದರು.

ಡಾ.ಎಸ್.ಆರ್.ಗುಂಜಾಳ, ‘ಈಗಾಗಲೇ ಜೇಮ್ಸ್‌ ಉತ್ತಂಗಿ ಅವರ ತಂದೆಯವರಾದ ದಿ.ಚೆನ್ನಪ್ಪ ಉತ್ತಂಗಿ ಅವರ ಸ್ಮರಣೆಗಾಗಿ ಸಂಘದಲ್ಲಿ ದತ್ತಿ ಇರಿಸಲಾಗಿದೆ. ಅದೇ ರೀತಿ ಉತ್ತಂಗಿ ಅವರ ಹೆಸರಿನಲ್ಲಿಯೂ ದತ್ತಿ ಸ್ಥಾಪಿಸಿ ಪ್ರಾಣಿ-ಪಕ್ಷಿ ಸಂಕುಲ ಹಾಗೂ ಪರಿಸರ ಕುರಿತಾಗಿ ಸಂಘದಲ್ಲಿ ಕಾರ್ಯಕ್ರಮ ಜರುಗುವಂತೆ ಮಾಡಬೇಕಾಗಿದೆ’ ಎಂದರು.

ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಎಸ್.ಸಾಲೀಮಠ ಮತ್ತು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಮೋಹನ ಮೋರೆ, ಉತ್ತರ ಕರ್ನಾಟಕದ ಪಕ್ಷಿ ವೀಕ್ಷಕರ ಸಂಘದ ಬಸವರಾಜ ಪಾಟೀಲ, ಹು-–ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಪಂಡಿತ್ ಮುಂಜಿ, ಆರ್.ಜಿ.ತಿಮ್ಮಾಪೂರ, ಗುರುರಾಜ ಖನ್ನಾಳ, ಪ್ರಕಾಶ ಗೌಡರ, ಎಸ್.ಎಂ.ಪಾಟೀಲ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಕಾರ್ಯಾಧ್ಯಕ್ಷ,  ಪ್ರೊ.ಬಿ.ವಿ.ಗುಂಜೆಟ್ಟಿ ವಹಿಸಿದ್ದರು. ಸಹ ಕಾರ್ಯದರ್ಶಿ ಶಿವಾನಂದ ಭಾವಿಕಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.