ADVERTISEMENT

‘ಆರ್‌.ಎಸ್‌. ಹೂಗಾರ ಹೃದಯವಂತ ಮನುಷ್ಯ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 5:14 IST
Last Updated 21 ಡಿಸೆಂಬರ್ 2013, 5:14 IST

ಅಣ್ಣಿಗೇರಿ: ಬಡತನದಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಮನುಷ್ಯ ಅಸಾಮಾನ್ಯನಾಗಬಲ್ಲ ಎನ್ನುವುದಕ್ಕೆ ಆರ್.ಎಸ್. ಹೂಗಾರರೇ ಸಾಕ್ಷಿ. ಅವರೇನೇ ಮಾತನಾಡಿದರೂ ಹೃದಯದಿಂದ ಮಾತನಾಡು­ತ್ತಿದ್ದರು. ತಾಯಿ, ತಂದೆ ಹಾಗೂ ಊರಿನ ಪ್ರೀತಿಯನ್ನು ಅವರನ್ನು ನೋಡಿ ನಾವು ಕಲಿಯಬೇಕಿದೆ ಎಂದು ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಹೇಳಿದರು.

ಸ್ಥಳೀಯ ನಿಂಗಮ್ಮ ಹೂಗಾರ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಪೊರೇಷನ್‌ ಬ್ಯಾಂಕ್ ನಿವೃತ್ತ ಅಧ್ಯಕ್ಷ ಅಣ್ಣಿಗೇರಿಯ ಆರ್.ಎಸ್.ಹೂಗಾರ ಅವರ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಮಾತನಾಡಿ ‘ಆರ್.ಎಸ್. ಹೂಗಾರರ ಪತ್ನಿ ಶೋಭನಾ ಹೂಗಾರ ಧೈರ್ಯದ ಹೆಣ್ಣು ಮಗಳು, ತಮ್ಮ ಗಂಡನ ಆದರ್ಶಗಳನ್ನು ಎತ್ತಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವರ ಪತಿ ಬದುಕಿದ್ದಾಗ ಇದ್ದ ಉತ್ಸಾಹ ಆಸಕ್ತಿ ಈಗಲೂ ಉಳಿಸಿಕೊಂಡಿದ್ದು ಅವರಿಗೆ ನನ್ನ ದನ್ಯವಾದ’ ಎಂದು ಹೇಳಿದರು.

ಕನ್ನಡದ ಆದಿಕವಿ ಪಂಪ ತಿರುಳ್ಗನ್ನಡ ಸೀಮೆ ಅಣ್ಣಿಗೇರಿಯಲ್ಲಿ ಜನಿಸಿ ಇಲ್ಲಿಯ ಪರಿಸರದಲ್ಲಿ ಬೆಳೆದವ. ಅಂತಲೇ ಅವನಿಗೆ ಕನ್ನಡದ ಎರಡು ಮಹಾಕಾವ್ಯಗಳನ್ನು ರಚಿಸಲು ಸಾಧ್ಯವಾಯಿತು. ಹೀಗಾಗಿ ಪಂಪ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ನೀಡಿರುವ ಕೊಡುಗೆ ಅಪಾರವಾದುದು ಎಂದರು.  ‘ನಾ ಕಂಡ ಆರ್.ಎಸ್.ಹೂಗಾರ’ ಕುರಿತು ಪ್ರೊ.ವಿ.ವಿ. ಹೆಬ್ಬಳ್ಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನ ಹೊರತಂದ 2014ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಬಸಲಿಂಗಯ್ಯ ಹಿರೇಮಠ ಗಾಯನ ಪ್ರಸ್ತುತ ಪಡಿಸಿದರು.

 ಪಾಟೀಲ ಪುಟ್ಟಪ್ಪ, ಡಾ.ರಾಜನ್ ದೇಶಪಾಂಡೆ, ಕಾರ್ಪೊರೇಷನ್‌ ಬ್ಯಾಂಕ್ ಡಿಜಿಎಂ ರಂಗಸ್ವಾಮಿ, ವಕೀಲ ಕೆ.ಯು.ನಾವಲಿಗಿಮಠ. ಪ್ರೊ.ಶಶಿಧರ ತೋಡಕರ ಮತ್ತಿತರರನ್ನು ಈ ಸಂದರ್ಧದಲ್ಲಿ ಸನ್ಮಾನಿಸಲಾಯಿತು.

  ಪ್ರತಿಷ್ಠಾನದ ಸಂಸ್ಥಾಪಕ ಧರ್ಮದರ್ಶಿ ಶೋಭನಾ ಹೂಗಾರ,  ನಮೃತಾ ಪಾಟೀಲ, ಸತೀಶ ಪಾಟೀಲ, ಗಾಯಕಿ ವಿಶ್ವೇಶ್ವರಿ ಹಿರೇಮಠ, ಚಂಬಣ್ಣ ಹುಬ್ಬಳ್ಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.