ಧಾರವಾಡ: 58ನೇ ಕರ್ನಾಟಕ ರಾಜ್ಯೋತ್ಸವದ ಮಾಸಾಚರಣೆಯ ಅಂಗವಾಗಿ ಇಲ್ಲಿನ ವಿದ್ಯಾವರ್ಧಕ ಸಂಘವು ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹಮ್ಮಿಕೊಂಡಿರುವ 15 ದಿನಗಳ ನಾಟಕೋತ್ಸವದಲ್ಲಿ ಬುಧವಾರ ಪಂ.ಪಂಚಾಕ್ಷರಿ ಮತ್ತಿಗಟ್ಟಿ ಇವರ ಸ್ಮರಣಾರ್ಥ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ, ಮಾಲತಿ ಎಸ್. ನಿರ್ದೇಶನದ, ‘ಶರಣಸತಿ ಲಿಂಗಪತಿ‘ ಎಂಬ ನಾಟಕವನ್ನು ಶಿವಸಂಚಾರ ಸಾಣೇಹಳ್ಳಿ ಕಲಾ ತಂಡದವರು ಪ್ರಸ್ತುತಪಡಿಸಿದರು.
ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಪಿ.ಎಂ.ಮುದಿಗೌಡರ ಮಾತನಾಡಿ, ‘ಸಂಘವು ಅಖಂಡ ಕರ್ನಾಟಕದ ನಾಡು, ನುಡಿ, ನೆಲ-, ಜಲಕ್ಕೆ ಧಕ್ಕೆ ಹಾಗೂ ಅನ್ಯಾಯವಾದಾಗ ಸಿಂಹ ಗರ್ಜನೆಯೊಂದಿಗೆ ಹೋರಾಟ ಮಾಡುತ್ತಲೇ ಬಂದಿದ್ದು, ಜೊತೆಗೆ ಸಾಹಿತ್ಯಿಕ ಸಾಂಸ್ಕೃತಿಕ ಸಂವರ್ಧನೆಗಾಗಿ ಶ್ರಮಿಸುತ್ತಿರುವುದು ಸಮಸ್ತ ಕನ್ನಡಿಗರಾದ ನಾವೆಲ್ಲ ಹೆಮ್ಮೆ ಹಾಗೂ ಅಭಿಮಾನಪಡುವ ಸಂಗತಿ’ ಎಂದು ಅವರು ಹೇಳಿದರು.
ರಂಗಕಲಾವಿದ ದೊಡವಾಡದ ಅಡಿವಯ್ಯಸ್ವಾಮಿ ಕುಲಕರ್ಣಿ ಹಾಗೂ ಮುಮ್ಮಿಗಟ್ಟಿಯ ಚಂದ್ರಶೇಖರ ಸರ್‌ನಾಯಕ ಅವರಿಗೆ ಸಂಘದಿಂದ ರಂಗಕಲಾ ಸನ್ಮಾನ ಮಾಡಿ ಗೌರವಿಸಲಾಯಿತು. ರಂಗಕರ್ಮಿ ಪುರುಷೋತ್ತಮ ತಲವಾಟ, ನಾಟಕದ ಸಂಚಾಲಕರಾದ ಶರಣು ಹಾಗೂ ಸಂಘದ ಸಹ ಕಾರ್ಯದರ್ಶಿ ಶಿವಾನಂದ ಭಾವಿಕಟ್ಟಿ ಇದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ವಿಶ್ವೇಶ್ವರಿ ಹಿರೇಮಠ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.