ADVERTISEMENT

‘ಪಾರದರ್ಶಕ ವಿವೇಕಶೀಲತೆ ಬೆಳೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 5:12 IST
Last Updated 21 ಡಿಸೆಂಬರ್ 2013, 5:12 IST

ಧಾರವಾಡ: ‘ನಿಸರ್ಗದಲ್ಲಿ ಇಂದಿಗೂ ಅನೇಕ ರಹಸ್ಯ­ಗಳಿದ್ದು, ಮಕ್ಕಳಲ್ಲಿ ಸ್ಫೂರ್ತಿ ತುಂಬಿ ಅವುಗಳನ್ನು ತಿಳಿಯು­ವಂತೆ ಪ್ರೇರೇಪಿಸಬೇಕು. ಶಿಕ್ಷಕರು ಇಂತಹ ಕಾರ್ಯಾಗಾರಗಳಿಂದ ತಮ್ಮ ಅನುಭವಗಳನ್ನು ಶ್ರೀಮಂತಗೊಳಿಸಿಕೊಂಡು ವಿದ್ಯಾರ್ಥಿಗಳಲ್ಲಿ ಒಂದು ಸಣ್ಣ ಜ್ಞಾನದ ಕಿಡಿ ಹೊತ್ತಿಸುವ ಕಾರ್ಯ­ಮಾಡ­ಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಬಿ.ಕೆ.ಎಸ್‌.ವರ್ಧನ್‌ ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಖಗೋಳ ವಿಜ್ಞಾನ, ಆಕಾಶ ವೀಕ್ಷಣೆ ಹಾಗೂ ಧೂಮಕೇತು ಅಧ್ಯಯನ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಇಂದು ವಿಜ್ಞಾನ- ತಂತ್ರಜ್ಞಾನ ಎಷ್ಟೆಲ್ಲಾ ಬೆಳೆದಿದ್ದರೂ ಹಲವಾರು ಸಂದರ್ಭದಲ್ಲಿ ಕೆಲವು ಸಂಪ್ರದಾಯಗಳು ನಮ್ಮನ್ನು ಕಟ್ಟಿ ಹಾಕಿವೆ. ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇನ್ನೂ ಅನೇಕ ಬದಲಾವಣೆಗಳು ಆಗಬೇಕಿದೆ. ಪ್ರಾಥಮಿಕ ಹಾಗೂ ಪ್ರೌಢಹಂತದಲ್ಲಿ ಸಂಪೂರ್ಣ ಪ್ರಾಯೋಗಿಕ ಪಾಠ ಶಾಲೆಗಳು ತಲೆಯೆತ್ತಬೇಕಿದೆ’ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಪ್ರೊ.ಎಸ್.ವಿ.ಸಂಕನೂರ, ‘ವಿಜ್ಞಾನಿಗಳಿಗೆ ಹಾಗೂ ಸಂಶೋಧಕರಿಗೆ ಈ ಹಿಂದೆ ಕೆಲವು ದುಷ್ಟ ಶಕ್ತಿಗಳು ಅನೇಕ ತೊಂದರೆಗಳನ್ನು ಕೊಟ್ಟಿದ್ದು ಇತಿಹಾಸ. ವಿಜ್ಞಾನ ಪ್ರಾಯೋಗಿಕವಾಗಿ ಸಿದ್ಧಪಡಿಸಿದ ಸತ್ಯವನ್ನೇ ಹೇಳುತ್ತದೆ. ಹಾಗಾಗಿ ಸೃಷ್ಟಿಯಲ್ಲಿರುವ ಪ್ರತಿಯೊಂದು ವಸ್ತುವಿನಲ್ಲಿಯೂ ಅಡಗಿರುವ ಸತ್ಯವನ್ನು ಹೊರಗೆಡಬೇಕಾದರೆ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಹಾಗೂ ತಾರ್ಕಿಕವಾಗಿ ಆಲೋಚಿಸುವ ಮನೋಭಾವನೆ ಬೆಳೆಸಬೇಕು’ ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಫ್.ಸಿ.ಚೇಗರೆಡ್ಡಿ, ಸಮಿತಿ ಜಿಲ್ಲಾ ಅಧ್ಯಕ್ಷ ಗುರು ತಿಗಡಿ ಮಾತನಾಡಿದರು.
ಡಾ.ಬಿ.ಎಸ್.ಗಿರಿಯಪ್ಪನವರ, ಸಂದೀಪ ರಂಜಣಗಿ, ಎಚ್.ಎಸ್.ಬಡಿಗೇರ, ಸಂಪನ್ಮೂಲ ವ್ಯಕ್ತಿಗಳಾದ ರೇಣುಕಾರಾಧ್ಯ ಗುರುಮಠ, ಭೀರಪ್ಪ ಖಂಡೇಕಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಎಸ್.ಎಸ್.ಧನಿಗೊಂಡ ಅವರು ವಿಜ್ಞಾನ ಗೀತೆಯನ್ನು ಹೇಳಿದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಸಂಜೀವಕುಮಾರ ಭೂಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಎನ್.ಕೀರ್ತಿವತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.