ADVERTISEMENT

‘ಬಾವಿ’ಯಲ್ಲಿ ನೀರಿಲ್ಲ: ಗಣೇಶನ ‘ತ್ರಿಶಂಕು’ ಸ್ಥಿತಿ!

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 6:37 IST
Last Updated 20 ಸೆಪ್ಟೆಂಬರ್ 2013, 6:37 IST

ಹುಬ್ಬಳ್ಳಿ: ಲಕ್ಷಾಂತರ ಹಣ ವೆಚ್ಚ ಮಾಡಿ, ಅಲಂಕೃತ ಮಂಟಪದಲ್ಲಿ ಭಕ್ತಿ–ಭವ್ಯತೆಯಿಂದ ಹತ್ತು ದಿನಗಳ ಕಾಲ ಆರಾಧನೆಗೊಂಡ ವಿಘ್ನ ನಿವಾರಕ ಗಣಪನಿಗೆ ವಿಸರ್ಜನೆಯ ಬಳಿಕ ‘ತ್ರಿಶಂಕು’ ಸ್ಥಿತಿ!

ಆರಾಧಿಸಿದವರು ‘ಗಣೇಶ ಬಪ್ಪಾ ಮೋರಯಾ...’ ಎಂದು ಬಾವಿಗೆ ತಳ್ಳಿಬಿಟ್ಟು ಮರಳಿದರೆ, ನೀರಿಲ್ಲದ ‘ಬಾವಿ’ಯಲ್ಲಿ ಮುಳು­ಗಲಾಗದೆ ಗಣೇಶ ಅಂಗಾತ ಮಲಗಿದ್ದ. ಇಂದಿರಾ ಗಾಜಿನ ಮನೆಯ ಗಣೇಶ ವಿಸರ್ಜನಾ ಬಾವಿಯಲ್ಲಿ ಗುರುವಾರ ಬೆಳಿಗ್ಗೆ ಹೀಗೆ ಕಾಣಿಸಿಕೊಂಡ ಬೃಹತ್‌ ವಿಗ್ರಹವನ್ನು ವೀಕ್ಷಿಸಿದ ಅನೇಕರ ಮುಖದಲ್ಲಿ ಹೇಳಿಕೊಳ್ಳ­ಲಾಗದ ಭಾವನೆ ವ್ಯಕ್ತವಾಗುತ್ತಿತ್ತು.

ಹುಬ್ಬಳ್ಳಿ ನಗರದಲ್ಲಿ ಹತ್ತು ದಿನ ಆರಾಧನೆ­ಗೊಂಡ ಗಣೇಶ ವಿಗ್ರಹಗಳ ವಿಸರ್ಜನೆ ಬುಧವಾರ ಆರಂಭಗೊಂಡು ಗುರುವಾರ ಬೆಳಗ್ಗಿನವರೆಗೆ ಮುಂದುವರಿಯಿತು. 250ಕ್ಕೂ ಹೆಚ್ಚು ವಿಗ್ರಹಗಳ ವಿಸರ್ಜನೆ ನಡೆದಿದ್ದು, ಗಣೇಶ ಪೇಟೆ, ಗೌಳಿ ಗಲ್ಲಿಯಲ್ಲಿ ಪೂಜಿತಗೊಂಡ ಬೃಹತ್‌ ಮೂರ್ತಿಗಳ ವಿಸರ್ಜನೆಯ ವೇಳೆಗೆ ಬೆಳಕು ಹರಿದಿತ್ತು. ಮರಾಠಾ ಗಲ್ಲಿಯಲ್ಲಿ ಆರಾಧನೆಗೊಂಡ ಗಣಪತಿ ವಿಗ್ರಹ ಕೊನೆಯದಾಗಿ ವಿಸರ್ಜನೆ­ಗೊಂಡಿತು. ಆಗ ಸಮಯ ಗುರುವಾರ ಬೆಳಗ್ಗೆ 10.30!

ನಗರದ ವಿವಿಧ ಗಲ್ಲಿಗಳಲ್ಲಿ ಆರಾಧನೆಗೊಂಡ ನೂರಾರು ಗಣೇಶ ವಿಗ್ರಹಗಳನ್ನು ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ‘ಬಾವಿ’­ಯಲ್ಲಿ ವಿಸರ್ಜಿಸಲಾಗಿದೆ. ಹೀಗಾಗಿ ವಿಗ್ರಹಗಳ ಅವಶೇಷ ಮತ್ತು ಅದನ್ನು ಕುಳ್ಳಿರಿಸಿದ ಹಲಗೆಯ ನೆಲಹಾಸು, ಅಲಂಕರಿಸಿ ವಿವಿಧ ವಸ್ತು, ಹೂಗಳಿಂದ ಈ ಬಾವಿ ಸಂಪೂರ್ಣ ತುಂಬಿ­ಕೊಂಡಿದೆ. ಗಣೇಶೋತ್ಸವದ ಮೂರನೇ, ಐದನೇ ಮತ್ತು ಏಳನೇ ದಿನಗಳಲ್ಲಿ ವಿಗ್ರಹ ವಿಸರ್ಜನೆಯಿಂದ ತುಂಬಿಕೊಂಡಿದ್ದ ಬಾವಿಯನ್ನು ಪಾಲಿಕೆ ವತಿಯಿಂದ ಸ್ವಚ್ಛಗೊಳಿಸಲಾಗಿತ್ತು. ಆದರೆ ಕೊನೆಯ ದಿನ  ‘ಹುಬ್ಬಳ್ಳಿ ಕಾ ರಾಜ’ ಸಹಿತ ಬೃಹತ್‌ ಗಾತ್ರದ ವಿಗ್ರಹಗಳ ವಿಸರ್ಜನೆಯಿಂದ ಬಾವಿ ಸಂಪೂರ್ಣ ತುಂಬಿಕೊಂಡಿದೆ. ಅಲ್ಲದೆ, ಬಾವಿ­ಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇಲ್ಲದೇ ಇದ್ದುದರಿಂದ ಕೊನೆಯದಾಗಿ ವಿಸರ್ಜನೆ­ಯಾದ ಮೂರ್ತಿಗಳು ಸಂಪೂರ್ಣ ಮುಳು­ಗಲು ಸಾಧ್ಯವಾಗಿಲ್ಲ.

ವಿಶೇಷವೆಂದರೆ, ಮೂರ್ತಿ ವಿಸರ್ಜನೆ­ಯಾಗುತ್ತಿದ್ದಂತೆ ಅದರಲ್ಲಿರುವ ‘ಅಮೂಲ್ಯ’ ವಸ್ತುಗಳನ್ನು ಕೊಂಡೊಯ್ಯಲು ಮುಗಿಬೀಳುವವರ ಸಂಖ್ಯೆ ಈ ಬಾರಿಯೂ ಕಡಿಮೆ ಇರಲಿಲ್ಲ. ಪಾಲಿಕೆ ನೌಕರರು ಈಗಾಗಲೇ ಬಾವಿಯಿಂದ ಹೊರ ಹಾಕಿದ ತ್ಯಾಜ್ಯಗಳಲ್ಲಿದ್ದ ಅವೇಶಗಳಲ್ಲಿ ಇದ್ದ ಹಲಗೆ, ಕಬ್ಬಿಣದ ರಾಡ್‌, ಪಟ್ಟಿಗಳನ್ನು ಕೊಂಡೊಯ್ಯುತ್ತಿದ್ದ ಸ್ಥಳೀಯ ಕಾಲೊನಿಯ ಮಕ್ಕಳು ಮತ್ತು ಯುವಕರು ಗುರುವಾರ ಬೆಳಗ್ಗಿನಿಂದಲೇ ಬಾವಿಯ ಸುತ್ತ ಓಡಾ­ಡುತ್ತಿದ್ದರು. ಗಣಪನ ಮೇಲೆ ಹತ್ತಿ ನಿಂತು ತಮಗೆ ಬೇಕಾದುದನ್ನು ಆರಿಸಿ ಸಾಗಿಸಲು ಅವರೆಲ್ಲ ಕಾತುರರಾಗಿದ್ದರು. ಆದರೆ ಸ್ಥಳದಲ್ಲಿ ಕಾವಲಿದ್ದ ಪೊಲೀಸ್‌ ಸಿಬ್ಬಂದಿ ಅದಕ್ಕೆ ಅವಕಾಶ ನೀಡಲಿಲ್ಲ. ಅಷ್ಟೇ ಅಲ್ಲ, ಬಾವಿಯ ಕಟ್ಟೆ ಏರಿ ಅಪಾಯ ಆಹ್ವಾನಿಸುತ್ತಿದ್ದ ಮಕ್ಕಳಿಗೆ ಬೆಂಗಾವಲಾಗಿ ಪೊಲೀಸರು ನಿಂತಿದ್ದರು.

ಗಣೇಶ ವಿಗ್ರಹಗಳನ್ನು ವಿಸರ್ಜಿಸಿದ ಬಾವಿಯನ್ನು ಇಣುಕಿ ನೋಡುವ ಕುತೂಹಲದಿಂದ ಗುರುವಾರ ಭಾರಿ ಸಂಖ್ಯೆಯಲ್ಲಿ ಜನರು ಬಂದಿದ್ದರು. ಬಾವಿಯಲ್ಲಿ ಅರ್ಧ ಮುಳುಗಿದ್ದ, ಬೃಹತ್‌ ಗಣೇಶ ವಿಗ್ರಹ ಕಂಡು ಹಲವರು ಹುಬ್ಬೇರಿಸಿದ್ದರು. ಭಕ್ತಿಯಿಂದ ಆರಾಧನೆ­ಗೊಂಡ ಗಣೇಶ ವಿಗ್ರಹಗಳಿಗೆ ವಿಸರ್ಜನೆಯ ಕಾಲಕ್ಕೆ ‘ಹೀಗಾಗಬಾರದಿತ್ತು’  ಎಂದು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.

ಬಾವಿಯಲ್ಲಿ ನೀರು ಸೋರಿಕೆ: ಗಣೇಶ ವಿಗ್ರಹ ವಿಸರ್ಜನೆ ಹಿನ್ನೆಲೆಯಲ್ಲಿ ಬಾವಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ತುಂಬಿಸಲಾಗಿದೆ. ಬಾವಿಗೆ ಎರಡು ಬೋರ್‌ವೆಲ್‌­ನಿಂದ ಬುಧವಾರ ನೀರು ಪೂರೈಸಲಾಗಿದೆ.

ಅಲ್ಲದೆ ಮೂರು ಟ್ಯಾಂಕರ್‌ ನೀರು ತಂದು ತುಂಬಿಸಲಾಗಿದೆ. ಆದರೆ ಬಾವಿಯಲ್ಲಿ ನಿಗದಿತ ಅಡಿಯವರೆಗೆ ಮಾತ್ರ ನೀರು ತುಂಬಿ ನಿಲ್ಲುತ್ತಿದೆ. ಅದಕ್ಕಿಂತ ಮೇಲೆ
ನೀರು ತುಂಬುತ್ತಿದ್ದಂತೆ ತೂತುಗಳ ಮೂಲಕ ತಗ್ಗು ಪ್ರದೇಶಕ್ಕೆ ಸೋರಿಕೆಯಾಗುತ್ತಿದೆ. ಹೀಗಾಗಿ ಬಾವಿ­ಯಲ್ಲಿ ನೀರಿನ ಕೊರತೆ ಉಂಟಾಗಿದೆ. ಜೊತೆಗೆ ಬೃಹತ್‌ ಗಾತ್ರದ ವಿಗ್ರಹಗಳಿಗೆ ಬಾವಿಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಆದರೂ ಗುರುವಾರ ಬೆಳಿಗ್ಗೆ ವಿಸರ್ಜನೆ­ಗೊಂಡು ಅರ್ಧ ಮುಳುಗಿದ ಗಣೇಶ ವಿಗ್ರಹವನ್ನು ಜಲಾವೃತಗೊಳಿಸಲು ಕ್ರಮ ತೆಗೆದುಕೊಳ್ಳಲಾ­ಗುವುದು ಎಂದು ಜಲಮಂಡಳಿಯ ಕಾರ್ಯನಿವಾಹಕ ಎಂಜನಿಯರ್‌ ಶ್ರೀನಿವಾಸ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.