ADVERTISEMENT

‘ಸಂಗೀತಕ್ಕೆ ಪುಟ್ಟರಾಜರ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 5:15 IST
Last Updated 17 ಸೆಪ್ಟೆಂಬರ್ 2013, 5:15 IST

ಧಾರವಾಡ: ‘ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ಮರೆ­ಯಲಾರದಂಥ ಕೊಡುಗೆ ನೀಡಿದ್ದಾರೆ’ ಎಂದು ಹಿರಿಯ ವಾಯಲಿನ್‌ ವಾದಕಿ ಡಾ.ಎನ್‌.ರಾಜಮ್‌ ಅಭಿ­ಪ್ರಾಯ­ಪಟ್ಟರು.

ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಡಾ.ಪುಟ್ಟರಾಜ ಗವಾಯಿಗಳ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಹಮ್ಮಿ­ಕೊಂಡಿದ್ದ ಸಂಗೀತಾಂಜಲಿ ಕಾರ್ಯ­ಕ್ರಮ­ದಲ್ಲಿ ಅವರು ಮಾತನಾಡಿದರು.

‘ಸಮಾಜದ ಸುಧಾರಣೆಗೆ ಹಾಗೂ ಮನುಕುಲದ ಉದ್ಧಾರಕ್ಕಾಗಿ ಭೂಮಿಯ ಮೇಲೆ ಪುಟ್ಟರಾಜ ಗವಾಯಿಗಳಂತಹ ಶ್ರೇಷ್ಠ ವ್ಯಕ್ತಿಗಳು ಹುಟ್ಟಿ ಬಂದಿರುತ್ತಾರೆ. ಪಂಡಿತ ಪುಟ್ಟರಾಜ ಗವಾಯಿಗಳು ಮುಟ್ಟದೇ ಇರುವ ವಾದ್ಯಗಳಿಲ್ಲ. ಸುಮಾರು 10 ವಾದ್ಯಗಳನ್ನು ಗವಾಯಿಗಳು ನಿರರ್ಗಳವಾಗಿ ನುಡಿಸುತ್ತಿದ್ದರು. ಅಂಧ ವ್ಯಕ್ತಿಗಳಲ್ಲಿ ಇಂಥ ಸಾಧನೆ ಮಾಡುವವರು ಲಕ್ಷಕ್ಕೊಬ್ಬರು ಹುಟ್ಟುತ್ತಾರೆ. ಅಂಥವರ ಆಶೀರ್ವಾದವೇ ನಮಗೆ ಶ್ರೀರಕ್ಷೆ ಇದ್ದಂತೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಸದಾನಂದ ಕನವಳ್ಳಿ, ‘ಒಬ್ಬ ಮಹಾನ್‌ ವ್ಯಕ್ತಿ ಇಲ್ಲದ ಕಾಲಕ್ಕೂ ಅವರು ಅಜರಾಮರರಾಗಿ ಜನರ ಮನಸ್ಸಿನಲ್ಲಿ ಉಳಿದಿರುತ್ತಾರೆ ಎಂಬುದಕ್ಕೆ ಪುಟ್ಟರಾಜ ಗವಾಯಿಗಳೇ ಉದಾಹರಣೆ. ಗವಾಯಿಗಳು ಎಂದಿಗೂ ಸ್ವಾರ್ಥ ಮನೋಭಾವವನ್ನು ಹೊಂದಿದವರಾಗಿರಲಿಲ್ಲ. ಸಮರ್ಪಣಾ ಮನೋಭಾವದಿಂದ ಸಮಾಜಕ್ಕೆ ಅವರು ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಅಪಾರ ಶಿಷ್ಯ ಬಳಗವನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ’ ಎಂದರು.

ನಂತರ ಖ್ಯಾತ ಗಾಯಕ ಪಂ.ಜಯತೀರ್ಥ ಮೇವುಂಡಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮೇವುಂಡಿ ಅವರಿಗೆ ಕೇಶವ ಜೋಶಿ ತಬಲಾ ಹಾಗೂ ಗುರುಪ್ರಸಾದ ಹೆಗಡೆ ಅವರು ಸಂವಾದಿನಿ ಸಾಥ್‌ ನೀಡಿದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಅನಿಲ ದೇಸಾಯಿ ನಿರೂಪಿಸಿದರು. ಪ್ರೊ.ಮಾಯಣ್ಣವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.