ADVERTISEMENT

‘₨ 900 ಕೋಟಿ ತೆರಿಗೆ ಸಂಗ್ರಹ ಗುರಿ’

ವಾಣಿಜ್ಯೋದ್ಯಮಿಗಳ ಸಹಕಾರ ಅಗತ್ಯ: ಆಯುಕ್ತ ಗಣೇಶನ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 7:10 IST
Last Updated 24 ಡಿಸೆಂಬರ್ 2013, 7:10 IST

ಹುಬ್ಬಳ್ಳಿ: ‘2013–14ನೇ ಸಾಲಿನ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ, ಗುಲ್ಬರ್ಗ, ದಾವಣಗೆರೆ ವಿಭಾಗಳನ್ನೊಳಗೊಂಡ ಹುಬ್ಬಳ್ಳಿ ವಲಯದಿಂದ ₨ 900 ಕೋಟಿ ಆದಾಯ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ’ ಎಂದು ಹುಬ್ಬಳ್ಳಿಯ ಆದಾಯ ತೆರಿಗೆ ಇಲಾಖೆಯ ಆಯುಕ್ತ ಕೆ. ಗಣೇಶನ್‌ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ನಗರದ ಕೆಸಿಸಿಐ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ವಾಣಿಜ್ಯೋದ್ಯಮಿ ಹಾಗೂ ಆದಾಯ ತೆರಿಗೆ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತ­ನಾಡಿದರು.

‘ಹುಬ್ಬಳ್ಳಿ ವಿಭಾಗವೊಂದರಿಂದ ₨ 495 ಕೋಟಿ ಸಂಗ್ರಹಿಸುವ ಗುರಿ ಇದೆ. ವಾಣಿಜ್ಯೋದ್ಯಮಿಗಳು ಸಹಕಾರದಿಂದ ಈ ಗುರಿಯನ್ನು ಮೀರಿ ಸಾಧನೆ ಮಾಡುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸರ್ಕಾರಕ್ಕೆ ಆದಾಯ ತೆರಿಗೆ ಪಾವತಿಸುವುದು ಸಾಮಾಜಿಕ ಹೊಣೆ. ಈ ನಿಟ್ಟಿನಲ್ಲಿ ಕರ್ನಾಟಕ ವಾಣಿಜ್ಯದ್ಯಮ ಸಂಸ್ಥೆಯೂ ಕೈ ಜೋಡಿಸಬೇಕಿದೆ. ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಉದ್ಯಮಿಗಳ ಮಧ್ಯೆ ಜಾಗೃತಿ, ಪ್ರಚಾರ ಮಾಡುವ ಮಹತ್ವದ ಜವಾಬ್ದಾರಿಯನ್ನೂ ಔದ್ಯಮಿಕ ಸಂಸ್ಥೆಗಳು ನಿಭಾಯಿಸಬೇಕು’ ಎಂದು ಸಲಹೆ ನೀಡಿದರು.

‘ಆದಾಯ ತೆರಿಗೆ ವಂಚನೆಯಲ್ಲಿ ಭಾಗಿಯಾದವರ ಮಾಹಿತಿ ಇಲಾಖೆಯ ಬಳಿ ಲಭ್ಯವಿದೆ. ಅಂಥವರ ಸಂಖ್ಯೆ ಈ ಭಾಗದಲ್ಲಿ ಕಡಿಮೆ ಇದ್ದು, ಅಂಥವರಿಗೆ ಇಲಾಖೆಯ ಕೇಂದ್ರ ಕಚೇರಿ ದೆಹಲಿಯಿಂದ ನೋಟಿಸ್‌ ಜಾರಿಯಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಆದಾಯ ತೆರಿಗೆ ವಂಚನೆಯಾದವರ ವಿರುದ್ಧ ಕಾನೂನುರೀತ್ಯಾ ಕ್ರಮ ತೆಗೆದು­ಕೊಳ್ಳುವುದು ಅನಿವಾರ್ಯವಾಗುತ್ತದೆ. ತೆರಿಗೆ ವಂಚಕರ ಸಮೀಕ್ಷೆ ಸುಲಭ, ಆದರೆ ಅಂಥವರನ್ನು ಪತ್ತೆ ಮಾಡುವುದು ನೋವಿನ ಸಂಗತಿ. ಹೀಗಾಗಿ ಇಲಾಖೆಯ ಕ್ರಮ ತೆಗೆದುಕೊಳ್ಳುವುದಕ್ಕೆ ಮುನ್ನವೇ ತಾವಾಗಿಯೇ ಪಾವತಿಸಲು ಮುಂದಾಗಬೇಕು’ ಎಂದು ಉದ್ಯಮಿಗಳಿಗೆ ಅವರು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಆದಾಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಪಿ.ಸಿ. ಚಡಗಾ, ‘ಸರ್ಚ್‌ ವಾರಂಟ್‌ ಇಲ್ಲದೆ ಆದಾಯ ತೆರಿಗೆ ಅಧಿಕಾರಿಗಳಿಗೆ ದಾಳಿ ನಡೆಸುವ ಅಧಿಕಾರ ಇಲ್ಲ. ಹೀಗಾಗಿ ಯಾರೇ ಬಂದು ಆದಾಯ ತೆರಿಗೆ ಪಾವತಿಸ ಕಾರಣಕ್ಕೆ ದಾಖಲೆಗಳನ್ನು ಕೊಡುವಂತೆ ಕೇಳಿದರೆ ಅಥವಾ ಬೆದರಿಸಿದರೆ ಸರ್ಚ್‌ ವಾರಂಟ್‌ ತೋರಿಸುವಂತೆ ಉದ್ಯಮಿಗಳು ಕೇಳಬೇಕು’ ಎಂದರು.

‘ದೇಶದಲ್ಲಿ ಸಂಗ್ರಹವಾಗುವ ಒಟ್ಟು ₨ 7.50 ಲಕ್ಷ ಕೋಟಿ ಆದಾಯ ತೆರಿಗೆಯಲ್ಲಿ ಶೇಕಡಾ 40ರಿಂದ 45ರಷ್ಟು ಟಿಡಿಎಸ್‌ನಿಂದ ಸಂಗ್ರಹ­ವಾಗುತ್ತದೆ. ಟಿಡಿಎಸ್‌ ಪಾವತಿಗೆ ಸಂಬಂಧಿಸಿದ ರಿಟರ್ನ್‌ ಅರ್ಜಿಯನ್ನು ಸಮರ್ಪಕವಾಗಿ ಭರ್ತಿ ಮಾಡುವುದು ಅತೀ ಅಗತ್ಯ. ಟಿಡಿಎಸ್‌ ಪಾವತಿಸದಿರುವುದು ಕ್ರಿಮಿನಲ್‌ ಅಪರಾಧ’ ಎಂದು ತೆರಿಗೆ ಇಲಾಕೆಯ ಉಪ ಆಯುಕ್ತ ಕೆ.ಆರ್‌. ನಾರಾಯಣ ಹೇಳಿದರು.

ಕೆಸಿಸಿಐ ಅಧ್ಯಕ್ಷ ವಸಂತಾ ಲದ್ವಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ರಮೇಶ ಎ. ಪಾಟೀಲ, ಕೆ.ಡಿ. ಕೋಟೆಕಾರ್‌, ಗೌರವ ಕಾರ್ಯದರ್ಶಿ ಸಿದ್ದೇಶ್ವರ ಜಿ. ಕಮ್ಮಾರ್‌, ಜಂಟಿ ಗೌರವ ಕಾರ್ಯದರ್ಶಿಗಳಾದ ಅಜ್ಜಂಪುರ ಶೆಟ್ರು, ಶಂಭುಲಿಂಗಪ್ಪ, ಸುನಿಲ್‌ ರೈ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.