ADVERTISEMENT

128 ವರ್ಷದ ಮುಸ್ಲಿಂ ಧರ್ಮಗುರು ನಿಧನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:46 IST
Last Updated 8 ಡಿಸೆಂಬರ್ 2012, 6:46 IST

ಧಾರವಾಡ: ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಕಳೆದ 85 ವರ್ಷಗಳಿಂದ ನೆಲೆಸಿದ್ದ ಇಸ್ಲಾಂ ಧರ್ಮಗುರು ಸಯ್ಯದ್ ಮಹಮ್ಮದ್  ಕಾಸೀಮ್‌ಶಾಹ್  ಖಾದ್ರಿ ಶುಕ್ರವಾರ ನಿಧನ ಹೊಂದಿದರು. ಅವರಿಗೆ 128 ವರ್ಷವಾಗಿತ್ತು ಎಂದು ಗ್ರಾಮಸ್ಥರು ಹಾಗೂ ಜಮಾತ್ ಮುಖಂಡರು ಅಂದಾಜಿಸಿದ್ದಾರೆ.

ಮೂಲತಃ ತಮಿಳುನಾಡಿನ ಚಿದಂಬರಂನವರಾಗಿದ್ದ ಇವರು ಬ್ರಹ್ಮಚಾರಿಗಳಾಗಿದ್ದರು. ರಾಜ್ಯದ ಗುಲ್ಬರ್ಗ, ವಿಜಾಪುರ, ರಾಮದುರ್ಗ, ಹಿರೇಕುಂಬಿಯಲ್ಲಿ ನೆಲೆಸಿ ಆ ಬಳಿಕ ಅಮ್ಮಿನಬಾವಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ಇಲ್ಲಿಗೆ ಬಂದಾಗಲೇ 85 ವರ್ಷವಾಗಿತ್ತು ಎಂದು ಜಮಾತ್‌ನ ಮುತವಲ್ಲಿ ಗೌಸ್‌ಸಾಬ್ ಹುಬ್ಬಳ್ಳಿ  `ಪ್ರಜಾವಾಣಿ'ಗೆ ತಿಳಿಸಿದರು.

ಸದಾ ಎಲೆಮರೆ ಕಾಯಿಯಾಗಿಯೇ ಬದುಕು ಸಾಗಿಸಿದ ಕಾಸಿಂ ಅವರ ತಂದೆ-ತಾಯಿಗಳ ಬಗ್ಗೆ ಯಾವುದೇ ದಾಖಲೆ-ಮಾಹಿತಿ ಲಭ್ಯವಿಲ್ಲ. ದಿನಕ್ಕೆ ಐದು ಬಾರಿ ನಮಾಜ್‌ನಲ್ಲಿ ತಮ್ಮನ್ನೇ ಮರೆಯುತ್ತಿದ್ದರು. ಹಾಗೆಯೇ ಧ್ಯಾನದಲ್ಲಿ ಮೈಮರೆತಾಗ ಊಟ-ನೀರು-ನಿದ್ರೆಯನ್ನೂ ತ್ಯಜಿಸುತ್ತಿದ್ದರು. ಹೀಗಾಗಿ ಅವರು ದೀರ್ಘಾಯುಷ್ಯ ಹೊಂದಿದ್ದರು. ಸಿದ್ಧಿಪುರುಷರಾಗಿದ್ದ ಇವರಲ್ಲಿ ಒಂದು ಅವ್ಯಕ್ತ ಶಕ್ತಿಯು ಮನೆ ಮಾಡಿತ್ತೆಂದೂ ಜಮಾತ್‌ನ ಸದಸ್ಯ ಹಸನ್‌ಸಾಬ್ ನರಗುಂದ ಅಭಿಪ್ರಾಯಪಟ್ಟಿದ್ದಾರೆ.ಪಾರ್ಥಿವ ಶರೀರವನ್ನು ಅಮ್ಮಿನಬಾವಿಯ ಜಾಮಿಯಾ ಮುಸ್ಲಿಂ ಜಮಾತ್ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿದೆ.

ಅಂತ್ಯಕ್ರಿಯೆ: ಶನಿವಾರ ಮುಂಜಾನೆ10ಕ್ಕೆ ಮಸೀದಿಯ ಆವರಣದಲ್ಲಿಯೇ ಅಂತ್ಯಕ್ರಿಯೆ ನೆರವೇರಲಿದೆ. ರಾಮದುರ್ಗದ ಶಿಷ್ಯರು ಪಾರ್ಥಿವ ಶರೀರವನ್ನು ತಮಗೆ ಒಪ್ಪಿಸುವಂತೆ ಬಂದಿದ್ದರು. ಆದರೆ ಗ್ರಾಮಸ್ಥರು ಅಮ್ಮಿನಬಾವಿಯಲ್ಲೇ ಅಂತ್ಯಕ್ರಿಯೆ ಮಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.