ಹುಬ್ಬಳ್ಳಿ: ಶೈಕ್ಷಣಿಕ ಶಿಸ್ತು ಕಾಪಾಡುವ ಹಾಗೂ ಬೋಧನೆಯ ಗುಣಮಟ್ಟ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ರೂಪಿಸಿರುವ `ಮಿಂಚಿನ ಸಂಚಾರ' ತಂಡದ ಕಾರ್ಯವೈಖರಿ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಸಂಚಲನೆಗೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಕಾರ್ಯೋನ್ಮುಖವಾದ ಕಳೆದ 10 ದಿನಗಳ ಅಂತರದಲ್ಲಿಯೇ ಕರ್ತವ್ಯ ಲೋಪದ ಕಾರಣಕ್ಕೆ 16 ಶಿಕ್ಷಕರು ಅಮಾನತುಗೊಂಡಿದ್ದಾರೆ. ಮೂವರು ಪ್ರೌಢಶಾಲಾ ಮುಖ್ಯ ಶಿಕ್ಷಕರು ಸೇರಿದಂತೆ ಒಂಬತ್ತು ಮಂದಿಗೆ ನೋಟಿಸ್ ನೀಡಲಾಗಿದೆ.
ದಿಢೀರನೆ ಶಾಲೆಗೆ ಭೇಟಿ ನೀಡಿ ತಪಾಸಣೆ ನಡೆಸಿ ತಪ್ಪುಗಳು ಕಂಡುಬಂದಲ್ಲಿ ಸ್ಥಳದಲ್ಲಿಯೇ ಕ್ರಮಕ್ಕೆ ಶಿಫಾರಸು ಮಾಡುವ `ಮಿಂಚಿನ ಸಂಚಾರ' ದ ಕೆಲಸಕ್ಕೆ ಶಿಕ್ಷಕರ ಸಂಘದಿಂದ ವಿರೋಧ ವ್ಯಕ್ತವಾದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಅದನ್ನು ಗಂಭೀರವಾಗಿ ಪರಿಗಣಿಸದೆ ಕಾರ್ಯಾಚರಣೆ ಮುಂದುವರೆಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸ್ಥಾನ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಕೇಳಿಬಂದ ದೂರುಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಜಿಲ್ಲಾ ಉಪನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ.
ಶಾಲೆಗಳ ಸಾಧನೆಯ ಸೂಚ್ಯಂಕವನ್ನು ಮತ್ತೆ ಏರು ಮುಖಕ್ಕೆ ತಿರುಗಿಸಲು `ಮಿಂಚಿನ ಸಂಚಾರ' ಆರಂಭಿಕ ಹೆಜ್ಜೆಯಾಗಿದೆ. ವೃತ್ತಿಯನ್ನು ಗಂಭೀರವಾಗಿ ಪರಿಗಣಿಸದೆ, ಶಾಲಾ ಸಮಯದಲ್ಲಿ ಬೇರೆ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ಶಿಕ್ಷಕರಿಗೆ `ಮಿಂಚಿನ ಸಂಚಾರ'ದ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ. ಇಲಾಖೆಯ ಅಣತಿಯಂತೆ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತಾರೆ.
ಏನಿದು ಮಿಂಚಿನ ಸಂಚಾರ: ಆಯಾ ಜಿಲ್ಲೆಯ ಉಪನಿರ್ದೇಶಕರ ನೇತೃತ್ವದಲ್ಲಿ 40 ಅಧಿಕಾರಿಗಳು ಆರು ತಂಡಗಳಾಗಿ `ಮಿಂಚಿನ ಸಂಚಾರ' ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಶಾಲಾ ಆಡಳಿತಕ್ಕೆ ಅಥವಾ ಶಿಕ್ಷಕರಿಗೆ ಯಾವುದೇ ಸುಳಿವು ನೀಡದೆ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ಮಾಡಲಾಗುತ್ತಿದೆ.
ಕ್ಲಸ್ಟರ್, ತಾಲ್ಲೂಕು ಮಟ್ಟದಲ್ಲಿ ಕಾರ್ಯಾಚರಣೆ ನಡೆಸುವ ತಂಡ ನಿಗದಿತ ದಿನ ಯಾವ ಭಾಗದಲ್ಲಿ ಸಂಚರಿಸಲಿದೆ ಎಂಬ ಮಾಹಿತಿ ಕೇವಲ ಇಲಾಖೆಯ ಉಪನಿರ್ದೇಶಕರಿಗೆ ಮಾತ್ರ ತಿಳಿದಿರುತ್ತದೆ. ತಂಡದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯೆಟ್) ಪ್ರಾಂಶುಪಾಲರು, ಅಕ್ಷರ ದಾಸೋಹ, ಸರ್ವಶಿಕ್ಷಣ ಅಭಿಯಾನದ ಅಧಿಕಾರಿಗಳು, ಸಮೂಹ ಸಂಪನ್ಮೂಲ ಕೇಂದ್ರಗಳ ಮುಖ್ಯಸ್ಥರು, ಬಿಇಒಗಳು ಹಾಗೂ ಆಯ್ದ ಶಾಲೆಗಳ ಮುಖ್ಯೋಪಾಧ್ಯಾಯರು ಇದ್ದಾರೆ.
ಅನುದಾನಿತ ಶಾಲೆಗಳಿಗೂ ಬಿಸಿ: ಅನುದಾನಿತ ಶಾಲೆಗಳ ಶಿಕ್ಷಕರು, ಸಿಬ್ಬಂದಿಯ ಮೇಲೆ ನೇರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲದ ಕಾರಣ ಕರ್ತವ್ಯಲೋಪ ಕಂಡುಬಂದ ಮೂರು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಇಲಾಖೆಯಿಂದ ನೊಟೀಸ್ ಕೊಡಲಾಗಿದೆ.
`ಜಿಲ್ಲೆಯಲ್ಲಿ ಶೇ 85ರಷ್ಟು ಶಿಕ್ಷಕರು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಶೇ15ರಷ್ಟು ಮಂದಿಗೆ ಕೆಲಸದ ಮಹತ್ವ ತಿಳಿದಿಲ್ಲ.
ಇನ್ನೊಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ಎದುರಿಸಿ ಮಕ್ಕಳನ್ನು ಉತ್ತಮ ಫಲಿತಾಂಶಕ್ಕಾಗಿ ಸನ್ನದ್ಧಗೊಳಿಸಬೇಕಿದೆ. ಕೆಲವರ ಲೋಪದಿಂದಾಗಿ ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಉದಾಸೀನ ಭಾವನೆ ಬೆಳೆಯುತ್ತದೆ. ಅದನ್ನು ತಡೆಯಲು ಇಲಾಖೆಯಿಂದ ಇಂತಹ ಕ್ರಮ ಅನಿವಾರ್ಯ' ಎಂದು ಡಾ.ವರ್ಧನ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.