ADVERTISEMENT

ಗಣೇಶೋತ್ಸವ ಕಣ್ಗಾವಲಿಗೆ 164 ಸಿಸಿಟಿವಿ ಕ್ಯಾಮೆರಾ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 2:11 IST
Last Updated 31 ಆಗಸ್ಟ್ 2019, 2:11 IST
   

ಹುಬ್ಬಳ್ಳಿ: ಅವಳಿ ನಗರದಲ್ಲಿ ಗಣೇಶನ ಹಬ್ಬಕ್ಕೆ ಭದ್ರತೆ ಒದಗಿಸುವ ದೃಷ್ಟಿಯಿಂದ ಪೊಲೀಸ್‌ ಇಲಾಖೆಯು ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯ್ದ 164 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮುಂದಾಗಿದೆ.

ಶಾಂತಿಯುತ ಗಣೇಶನ ಹಬ್ಬಕ್ಕೆ ಪೂರಕ ವಾತಾವರಣ ನಿರ್ಮಿಸಿಕೊಡಲು ಹುಬ್ಬಳ್ಳಿಯ 110 ಹಾಗೂ ಧಾರವಾಡದ 64 ಸ್ಥಳಗಳನ್ನು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಎಂದು ಈಗಾಗಲೇ ಗುರುತಿಸಿರುವ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದ್ದಾರೆ.

ಪ್ರಮುಖ ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್‌ಗಳಲ್ಲಿ ಹಾಗೂ ಗಣೇಶನ ದರ್ಶನಕ್ಕೆ ಸಾರ್ವಜನಿಕರು ಹೆಚ್ಚು ಬರುವ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಅಲ್ಲದೆ, ಚನ್ನಮ್ಮ ವೃತ್ತ, ದುರ್ಗದ ಬೈಲ್‌, ದಾಜೀಬಾನ ಪೇಟೆ, ಧಾರವಾಡದ ಜುಬಿಲಿ ವೃತ್ತ, ಕೋರ್ಟ್‌ ವೃತ್ತ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.

ADVERTISEMENT

‘ಪೊಲೀಸ್‌ ಇಲಾಖೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲು ಪಾಲಿಕೆಗೆ ಪ್ರಸ್ತಾವ ಸಲ್ಲಿಸಿತ್ತು. ಆ ಪ್ರಕಾರ ಕ್ಯಾಮೆರಾ ಪೂರೈಸುತ್ತಿದ್ದೇವೆ. ಭಾನುವಾರ ಬೆಳಿಗ್ಗೆಯಿಂದ ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಯಲಿದೆ. ಹಬ್ಬದ ನಂತರ ತೆರವುಗೊಳಿಸಲಾಗುತ್ತದೆ’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಪ್ರಜಾವಾಣಿ‘ಗೆ ತಿಳಿಸಿದರು.

ಬಾವಿಗಳು ಸ್ವಚ್ಛ:

ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ನಗರದ ಕಪಿಲಾ ಬಾವಿ, ಹೊಸೂರು ಬಾವಿ ಹಾಗೂ ಇಂದಿರಾಗಾಜಿನ ಮನೆ ಹಿಂಭಾಗದಲ್ಲಿರುವ ಬಾವಿಗಳನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದೆ. ಈ ಬಾವಿಗಳಿಗೆ ನೀರು ಹಾಗೂ ಸುತ್ತ ಬೆಳಕಿನ ವ್ಯವಸ್ಥೆ ಮಾಡಬೇಕಿದೆ ಎಂದರು.

‘ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ಅವಳಿ ನಗರಕ್ಕೆ ಆರು ಟ್ಯಾಂಕರ್‌ ವ್ಯವಸ್ಥೆ ಮಾಡಿದೆ. ಆಯ್ದ ವಾರ್ಡ್‌ಗಳ ಪ್ರಮುಖ ಸ್ಥಳಗಳಲ್ಲಿ ಅವುಗಳನ್ನು ಇಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.