ADVERTISEMENT

ರಾತ್ರಿಯಿಡೀ ಸುರಿದ ಮಳೆ; ಮನೆ ಕುಸಿತ, ವೃದ್ಧ ದಂಪತಿಗೆ ಗಾಯ

ಅಂಗಡಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 19:39 IST
Last Updated 6 ಅಕ್ಟೋಬರ್ 2019, 19:39 IST
ಬೈರಿದೇವರಕೊಪ್ಪದ ಅಗಸಿ ಓಣಿಯಲ್ಲಿ ಮಳೆಗೆ ಕುಸಿದಿರುವ ಮನೆ
ಬೈರಿದೇವರಕೊಪ್ಪದ ಅಗಸಿ ಓಣಿಯಲ್ಲಿ ಮಳೆಗೆ ಕುಸಿದಿರುವ ಮನೆ   

ಹುಬ್ಬಳ್ಳಿ: ನಗರದಲ್ಲಿ ಭಾನುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಬೈರಿದೇವರಕೊಪ್ಪದ ಅಗಸಿ ಓಣಿಯಲ್ಲಿ ಮನೆಯೊಂದು ಕುಸಿದಿದ್ದು, ವೃದ್ಧ ದಂಪತಿ ಗಾಯಗೊಂಡಿದ್ದಾರೆ. ಸಂಗಪ್ಪ ಕೇದಾರಿ ಹಾಗೂ ಸಂಗವ್ವ ಕೇದಾರಿ ಗಾಯಗೊಂಡವರು. ಇಬ್ಬರ ಭುಜ ಹಾಗೂ ಕಾಲುಗಳಿಗೆ ಗಾಯವಾಗಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ನಮ್ಮದು ಅವಿಭಕ್ತ ಕುಟುಂಬವಾಗಿದ್ದು, ಮಕ್ಕಳು ಸೇರಿದಂತೆ ಒಟ್ಟು 18 ಮಂದಿ ಇದ್ದೇವೆ. ರಾತ್ರಿ 8.30ರ ಸುಮಾರಿಗೆ ಎಲ್ಲರೂ ಒಳಗಡೆ ಊಟ ಮಾಡುತ್ತಿದ್ದೆವು. ತಂದೆ–ತಾಯಿ ಮಾತ್ರ ಪಡಸಾಲೆಯಲ್ಲಿ ಕುಳಿತಿದ್ದರು. ಆಗ ಒಮ್ಮೆಲೆ ಕೋಣೆಯ ಚಾವಣಿ ಕುಸಿಯಿತು’ ಎಂದು ಸಂಗಪ್ಪ ಅವರ ಪುತ್ರ ಮಹಾದೇವ ಕೇದಾರ ತಿಳಿಸಿದರು.

‘ಇಬ್ಬರೂ ಅವಶೇಷಗಳಡಿ ಸಿಲುಕಿ ನೆರವಿಗೆ ಕೂಗಿಕೊಳ್ಳುತ್ತಿದ್ದರು. ತಕ್ಷಣ ಮನೆಯವರೆಲ್ಲರೂ ಓಡಿ ಹೋಗಿ ಮಣ್ಣಿನ ಅವಶೇಷಗಳಡಿಯಿಂದ ಇಬ್ಬರನ್ನೂ ಮೇಲಕ್ಕೆತ್ತಿದೆವು. ನಂತರ ಕಿಮ್ಸ್‌ಗೆ ಆಸ್ಪತ್ರೆಗೆ ದಾಖಲಿಸಿದೆವು’ ಎಂದು ಹೇಳಿದರು.

ADVERTISEMENT

ಹಿಂದೆಯೂ ಕುಸಿದಿತ್ತು:‘ಆಗಸ್ಟ್‌ನಲ್ಲಿ ಸುರಿದ ಮಳೆಗೆ ಮನೆ ಭಾಗಶಃ ಕುಸಿದಿತ್ತು. ಆಗ ಮನೆ ಮಾಲೀಕರಿಗೆ ಪರಿಹಾರ ನೀಡಲಾಗಿತ್ತು. ಆದರೆ, ಮನೆಯನ್ನು ದುರಸ್ತಿ ಮಾಡಿಕೊಳ್ಳದೆ ವಾಸಿಸುತ್ತಿದ್ದರು. ಹಾಗಾಗಿ ರಾತ್ರಿ ಸುರಿದ ಮಳೆಗೆ ಮನೆ ಮತ್ತಷ್ಟು ಕುಸಿದಿದೆ’ ಎಂದು ತಹಶೀಲ್ದಾರ್ ಶಶಿಧರ ಮಾಡ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಮತ್ತೆರಡು ಮನೆ ಕುಸಿತ:ಮಳೆ ಅಬ್ಬರಕ್ಕೆ ಹಳೇ ಹುಬ್ಬಳ್ಳಿಯ ಕೃಷ್ಣಾಪುರ ಓಣಿಯ ಮಡಿವಾಳಪ್ಪ ಕಮ್ಮಾರ ಹಾಗೂ ಚಂದ್ರಶೇಖರ ಪಾಟೀಲ ಅವರ ಮನೆಗಳು ಕುಸಿದಿವೆ. ಕೇಶ್ವಾಪುರದಲ್ಲಿ ರಿಯಾಜ್ ಹಾಗೂ ಮಂಜುನಾಥ ಜಗನ್ನಾಥಸಾ ಕಬಾಡಿ ಅವರ ಮನೆಗಳು ಕೂಡ ನೆಲಕ್ಕುರುಳಿವೆ. ಮನೆ ಕುಸಿದ ಸ್ಥಳಗಳಿಗೆ ತಹಶೀಲ್ದಾರ್ ಶಶಿಧರ ಮಾಡ್ಯಾಳ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.