ಹುಬ್ಬಳ್ಳಿ: ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕುಕ್ಕುಟ ಉದ್ಯಮ ನಲುಗಿದೆ. ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ ಒಂದೂ ಪ್ರಕರಣ ವರದಿಯಾಗಿಲ್ಲ. ಆದಾಗ್ಯೂ, ಜನ ಆತಂಕಕ್ಕೆ ಒಳಗಾಗಿದ್ದಾರೆ. ಪರಿಣಾಮವಾಗಿ, ಕೋಳಿ ಮಾಂಸ ಹಾಗೂ ಕೋಳಿ ಮೊಟ್ಟೆ ಮಾರಾಟ ತೀವ್ರ ಕುಸಿತ ಕಂಡಿದೆ. ಅಂದಾಜು ಶೇ 30ರಷ್ಟು ಕುಸಿತ ಉಂಟಾಗಿದೆ.
ಬಳ್ಳಾರಿ ಹಾಗೂ ಅದರ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶ/ ತೆಲಂಗಾಣ ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಇದರ ಪರಿಣಾಮವಾಗಿ ಸಾವಿರಾರು ಕೋಳಿಗಳನ್ನು ಕೊಲ್ಲಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಸದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಅವಳಿ ನಗರದ ಮಾಂಸಪ್ರಿಯರು ಮುಂಜಾಗ್ರತೆಯಾಗಿ ಕೋಳಿಮಾಂಸ ಸೇವಿಸುವುದನ್ನು ತಾತ್ಕಾಲಿಕವಾಗಿ ತ್ಯಜಿಸಿದ್ದಾರೆ. ಇದರ ಪರಿಣಾಮವಾಗಿ 3–4 ದಿನಗಳಲ್ಲಿ ಕೋಳಿಮಾಂಸ ಮಾರಾಟದಲ್ಲಿ ಕುಸಿತ ಕಂಡಿದೆ. ಕೋಳಿ ಮಾಂಸದ ದರ ಕೂಡ ಕುಸಿತವಾಗಿದೆ.
ಜಿಲ್ಲೆಯಲ್ಲಿ ಅಂದಾಜು 200 ಕೋಳಿ ಫಾರಂಗಳಿವೆ. ಮುಂಚೆ ಪ್ರತಿದಿನ ಅಂದಾಜು 30ಸಾವಿರ ಕೋಳಿ (ಅಂದಾಜು ಪ್ರತಿ ಕೋಳಿಯ ತೂಕ 2.5ಕೆ.ಜಿ) ಮಾರಾಟವಾಗುತ್ತಿತ್ತು. ಈ ಸಂಖ್ಯೆ ಈಗ 15ಸಾವಿರ ಕೂಡ ದಾಟುತ್ತಿಲ್ಲ. ಕಳೆದ ವಾರ ಅಂಗಡಿಯಲ್ಲಿ ಕೋಳಿಮಾಂಸದ ದರ ₹ 220ರಿಂದ ₹ 240 ಇದ್ದದ್ದು, ಈಗ ₹ 170–180ಕ್ಕೆ ಕುಸಿದಿದೆ. ಹೋಲ್‌ಸೆಲ್ ಮಾರುಕಟ್ಟೆಯಲ್ಲಿ ಇದ್ದ ₹ 140 ದರವು ಈಗ ₹ 60ಕ್ಕೆ ಕುಸಿದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕುಸಿಯುವ ಲಕ್ಷಣಗಳಿವೆ ಎಂದು ಕೋಳಿ ವ್ಯಾಪಾರಸ್ಥರು ಹೇಳುತ್ತಾರೆ.
‘ನೆರೆಯ ಬೆಳಗಾವಿ ಜಿಲ್ಲೆ ಹಾಗೂ ದಕ್ಷಿಣ ಮಹಾರಾಷ್ಟ್ರದಿಂದ ಜೀವಂತ ಕೋಳಿ ತರಲಾಗುತ್ತದೆ. ಜಿಲ್ಲೆಯಲ್ಲಿ ಮಾರಾಟವಾಗುವ ಶೇ 60ರಷ್ಟು ಕೋಳಿಗಳು ಅಲ್ಲಿಂದಲೇ ಪೂರೈಕೆಯಾಗುತ್ತವೆ. ಸುರಕ್ಷಾ ಕ್ರಮ ಅನುಸರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಕೋಳಿ ಫಾರಂಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಒಂದೂ ಹಕ್ಕಿ ಜ್ವರ ಪ್ರಕರಣ ವರದಿಯಾಗಿಲ್ಲ. ಆದರೆ, ಜನರು ಆತಂಕಗೊಂಡಿದ್ದರಿಂದ ಕೋಳಿ ಮಾಂಸ ಮಾರಾಟ ಕುಸಿದಿದೆ’ ಎಂದು ಆಶಾ ಫೀಡ್ಸ್‌ನ ಮಾಲೀಕ ಅರ್ಷದ್ ಮುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಕೋಳಿಮಾಂಸ ಮಾರಾಟ ಕುಸಿತ ಕಾಣುತ್ತದೆ. ಈಗ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಮಾರಾಟದಲ್ಲಿ ಇನ್ನಷ್ಟು ಕುಸಿತ ಕಂಡಿದೆ. ಕೋಳಿಮೊಟ್ಟೆ ಅಂದಾಜು ಶೇ 25ರಷ್ಟು ಕುಸಿತ ಕಂಡಿದ್ದು ಅಷ್ಟಾಗಿ ಪರಿಣಾಮವಾಗಿಲ್ಲ’ ಎಂದು ಹೇಳಿದರು.
ಕೋಳಿ ಫಾರಂ ವೀಕ್ಷಣೆಗೆ 16 ತಂಡ ರಚನೆ
ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಧಾರವಾಡ ಜಿಲ್ಲೆಯಲ್ಲಿ 16 ತ್ವರಿತ ಸ್ಪಂದನಾ ತಂಡಗಳನ್ನು (ಕ್ವಿಕ್ ರಿಸ್ಪಾನ್ಸ್ ಟೀಂ) ಪಶುವೈದ್ಯಕೀಯ ಇಲಾಖೆ ರಚಿಸಿದೆ. ಈ ತಂಡಗಳು ಜಿಲ್ಲೆಯಲ್ಲಿರುವ ಎಲ್ಲ ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲಿದೆ. ‘ಕೇಂದ್ರಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳು ಕಾರ್ಮಿಕರು ಕೈಗೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಿದೆ. ಹಾಗೊಂದು ವೇಳೆ ಹಕ್ಕಿ ಜ್ವರ ಕಂಡುಬಂದರೆ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಸೋಂಕಿತ ಕೋಳಿಗಳನ್ನು ಆಳವಾದ ಗುಂಡಿ ತೋಡಿ ಮಣ್ಣಿನಲ್ಲಿ ಹೂತು ಹಾಕಬೇಕು. ಸೋಂಕಿತ ಪ್ರದೇಶದ 1 ಕಿ.ಮೀ ವ್ಯಾಪ್ತಿಯೊಳಗಿನ ಎಲ್ಲ ಕೋಳಿಗಳನ್ನು ಕೊಲ್ಲಲಾಗುವುದು. ಸೋಂಕು ಹರಡದಂತೆ ತಡೆಗಟ್ಟಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ರವಿ ಸಾಲಿಗೌಡರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.