ADVERTISEMENT

ಹುಬ್ಬಳ್ಳಿ: ಏಕಸ್‌ ಕಂಪನಿಗೆ 400 ಎಕರೆ ಜಮೀನು

ಧಾರವಾಡದ ಇಟಗಟ್ಟಿ ಗ್ರಾಮದಲ್ಲಿ ಘಟಕ ಸ್ಥಾಪನೆ, ₹3,540 ಕೋಟಿ ಬಂಡವಾಳ ಹೂಡಿಕೆ

ನಾಗರಾಜ್ ಬಿ.ಎನ್‌.
Published 8 ಅಕ್ಟೋಬರ್ 2020, 3:51 IST
Last Updated 8 ಅಕ್ಟೋಬರ್ 2020, 3:51 IST

ಹುಬ್ಬಳ್ಳಿ: ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಪರಿಕಲ್ಪನೆಯಲ್ಲಿ ದೇಶ ಸ್ವಾವಲಂಬಿಯಾಗಲು ಧಾರವಾಡದಲ್ಲಿ ಗೃಹಬಳಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನಾ ಉದ್ಯಮ ಸ್ಥಾಪಿಸಲು ರಾಜ್ಯ ಸರ್ಕಾರ ಬೆಂಗಳೂರು ಮೂಲದ ಏಕಸ್ ಎಸ್‌ಇಝಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಏಕಸ್ ಕಂಪನಿಗೆ, ಎಲೆಕ್ಟ್ರಾನಿಕ್ಸ್ ಮತ್ತು ಬಾಳಿಕೆ ಬರುವ ಸರಕುಗಳ ಘಟಕ ಸ್ಥಾಪಿಸಲು ಧಾರವಾಡದ ಇಟ್ಟಿಗಟ್ಟಿಯಲ್ಲಿ 400 ಎಕರೆ ಜಮೀನು ಮಂಜೂರು ಮಾಡಿದೆ. ಕಂಪನಿ ಈಗಾಗಲೇ ಮೊದಲ‌ ಹಂತದ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದೆ.

ಒಟ್ಟು ₹3,540 ಕೋಟಿ ಬಂಡವಾಳ ಹೂಡಿಕೆ ಮಾಡಲಿರುವ ಕಂಪನಿ, ಪ್ರತ್ಯಕ್ಷ 20 ಸಾವಿರ ಹಾಗೂ ಪರೋಕ್ಷ 10 ಸಾವಿರ ಉದ್ಯೋಗ ಸೃಷ್ಟಿಸಲಿದೆ. ಘಟಕ ಪೂರ್ಣಗೊಂಡ ನಂತರ ಪ್ರತಿ ವರ್ಷ ₹2,000 ಕೋಟಿ ಆದಾಯ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ADVERTISEMENT

ಗೃಹ ಬಳಕೆ ವಸ್ತುಗಳಾದ ರೆಫ್ರಿಜರೇಟರ್, ವಾಶಿಂಗ್ ಮಶಿನ್, ಎಸಿ, ಸ್ಪೀಕರ್, ಹೀಟರ್, ಮಿಕ್ಸರ್, ಗ್ರ್ಯಾಂಡರ್, ಐರನ್ ಬಾಕ್ಸ್, ಓವೆನ್ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳಾದ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಎಂಪಿ3 ಪ್ಲೇಯರ್, ಪ್ರಿಂಟರ್, ಪರ್ಸನಲ್ ಕೇರ್ ಡಿವೈಸಸ್, ಕ್ಯಾಮೆರಾ, ಟೆಲಿವಿಷನ್ ಸೇರಿತಂತೆ ಇನ್ನಿತರ ವಸ್ತುಗಳ ಬಿಡಿ ಭಾಗಗಳನ್ನು ಉತ್ಪಾದಿಸಲಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬೃಹತ್ ಕೈಗಾರಿಕಾ‌‌ ಸಚಿವ ಜಗದೀಶ ಶೆಟ್ಟರ್ ‘ಧಾರವಾಡದಲ್ಲಿ ಎಫ್‌ಎಂಸಿಜಿ (ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕುಗಳು) ಘಟಕ ಸ್ಥಾಪನೆಯಾಗಲಿದೆ. ಆತ್ಮನಿರ್ಭರ್‌ ಭಾರತ ನಿರ್ಮಾಣಕ್ಕೆ ಬದ್ಧವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ರೂಪರೇಷೆ ಸಿದ್ಧಪಡಿಸಲಾಗಿದೆ. 2025ರ ವೇಳೆಗೆ ಐದು ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಗುರಿಯಿದೆ. ಇದರ ಮೊದಲ ಹೆಜ್ಜೆಯಾಗಿ ಏಕಸ್ ಕಂಪನಿ‌ಗೆ ಉದ್ಯಮ ಸ್ಥಾಪಿಸಲು ಧಾರವಾಡದಲ್ಲಿ ಅನುಮತಿ ನೀಡಲಾಗಿದೆ’ ಎಂದು ತಿಳಿಸಿದರು.

‘ಎಫ್ಎಂಸಿಜಿ ಅಡಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ₹25,000 ಕೋಟಿ ವಹಿವಾಟು ನಡೆಯುವ ನಿರೀಕ್ಷೆಯಿದೆ. ಇನ್ನಷ್ಟು ಕಂಪನಿಗಳು ಸಹ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ. ಕೈಗಾರಿಕೆ ಸ್ಥಾಪಿಸುವವರಿಗೆ ಜಿಲ್ಲೆಯಲ್ಲಿ ಸಾಕಷ್ಟು ಜಮೀನು ಸಹ ಇದೆ. ಇದರಿಂದ ಸ್ಥಳೀಯರಿಗೆ ಹೆಚ್ಚು ಉದ್ಯೋಗ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಏಕಸ್‌ ಕಂಪನಿ ಧಾರವಾಡದಲ್ಲಿ ಗೃಹಬಳಕೆ ವಸ್ತುಗಳ ಬಿಡಿಭಾಗಗಳನ್ನು ಉತ್ಪಾದಿಸುವ ಉದ್ಯಮ ಸ್ಥಾಪಿಸಲು ಮುಂದಾಗಿದ್ದು, ಸರ್ಕಾರದಿಂದ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ
ಜಗದೀಶ ಶೆಟ್ಟರ್, ಬೃಹತ್‌ ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.