ADVERTISEMENT

ಸೋತ ಕ್ಷೇತ್ರಗಳಲ್ಲಿ ಪ್ರಚಾರ ಚುರುಕು

ಸೀರೆ, ಸಲೂನ್‌ ಕಿಟ್‌ ಹಂಚಿಕೆ – ಸ್ಥಳೀಯವಾಗಿ ಮತದಾರರ ಸಮೀಕ್ಷೆ ನಡೆಸುತ್ತಿರುವ ಪಕ್ಷಗಳು

ಗುರು ಪಿ.ಎಸ್‌
Published 4 ಜನವರಿ 2018, 9:07 IST
Last Updated 4 ಜನವರಿ 2018, 9:07 IST

ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ನಾಲ್ಕು ತಿಂಗಳಿರುವಂತೆಯೇ, ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಪ್ರಮುಖವಾಗಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮತದಾರರನ್ನು ತಲುಪಲು ಸಿದ್ಧತೆ ಆರಂಭಿಸಿವೆ.

ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಸೆಂಟ್ರಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೆಚ್ಚು ಚುರುಕಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿವೆ.

ಬೂತ್‌ಮಟ್ಟದಲ್ಲಿ ಸಂಘಟನೆ: ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದ ಮೂಲಕ ಬೂತ್‌ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದೆ. ‘ಬೂತ್‌ ಮಟ್ಟದಲ್ಲಿ ಮತ್ತು ಬ್ಲಾಕ್‌ನಲ್ಲಿ ಸಮಿತಿ ರಚನೆ ಮಾಡಲಾಗುತ್ತಿದೆ. ಅಲ್ಲದೆ, ಒಂದೊಂದು ವಾರ್ಡ್‌ಗೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗುತ್ತಿದೆ’ ಎಂದು ಮಹಿಳಾ ಕಾಂಗ್ರೆಸ್‌ನ ರಾಜ್ಯಘಟಕದ ಉಪಾಧ್ಯಕ್ಷೆ ದೇವಕಿ ಯೋಗಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರತಿ ಬೂತ್‌ನಲ್ಲಿ ಮಹಿಳಾ ಕಾಂಗ್ರೆಸ್‌ನಿಂದಲೇ 13 ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಆ ಬೂತ್‌ನಲ್ಲಿರುವವರ ಮತದಾರರ ಚೀಟಿ ಸಂಗ್ರಹಿಸಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣ ಬಳಕೆ: ಯುವಕರನ್ನು ಸೆಳೆಯಲು ಮೂರು ಪಕ್ಷಗಳೂ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿವೆ. ಕಾಂಗ್ರೆಸ್‌ನಿಂದ ‘ಸೋಷಿಯಲ್‌ ಮೀಡಿಯಾ ಕಮಿಟಿ’ ರಚನೆ ಮಾಡಲಾಗಿದೆ. ಬಿಜೆಪಿ, ಜೆಡಿಎಸ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲವಾಗಿದ್ದು, ಪಕ್ಷದ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡುವುದರ ಜೊತೆಗೆ, ಪ್ರತಿಸ್ಪರ್ಧಿಗಳ ವೈಫಲ್ಯವನ್ನು ಎತ್ತಿ ತೋರಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು, ಮುಖಂಡರು ಮಾಡುತ್ತಿದ್ದಾರೆ.

’ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಾವು ಮಾಡಿದ ಕೆಲಸಕ್ಕೆ ಅಂಕಗಳನ್ನು ನೀಡಿ ಎಂದು ಕೇಳಿಕೊಳ್ಳುತ್ತಿದ್ದೇವೆ’ ಎಂದು ದೇವಕಿ ಹೇಳುತ್ತಾರೆ.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ನಾಗರಾಜ ಛಬ್ಬಿ ಹಾಗೂ ಡಾ. ಮಹೇಶ ನಾಲವಾಡ ಅವರ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದ್ದು, ಇಬ್ಬರೂ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಹಾಕುವ ಜೊತೆಗೆ, ನಾಗರಿಕ ಸೇವಾ ಕೇಂದ್ರ ತೆರೆಯುವ ಮೂಲಕ ತುರುಸಿನ ಪ್ರಚಾರ ಕೈಗೊಂಡಿದ್ದಾರೆ.

ಗುಪ್ತ ಸಭೆ: ನಿರಂತರವಾಗಿ ಗುಪ್ತಸಭೆಗಳನ್ನು ಮಾಡುವ ಮೂಲಕ ಪಕ್ಷ ಸಂಘಟಿಸುವ ಕಾರ್ಯದಲ್ಲಿ ಬಿಜೆಪಿ ನಿರತವಾಗಿದೆ.

‘ಬೂತ್‌ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಕೇಂದ್ರಸರ್ಕಾರದ ಸಾಧನೆಗಳನ್ನು, ರಾಜ್ಯಸರ್ಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುತ್ತಿದ್ದೇವೆ’ ಎಂದು ಹೇಳುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌, ಪೂರ್ವ ಹಾಗೂ ಪಶ್ಚಿಮ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 7.80 ಲಕ್ಷ ಮತದಾರರಿದ್ದಾರೆ. ಈ ಪೈಕಿ, ಎರಡು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಉಳಿದ, ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

‘ಪಿಂಚಣಿ ಹಣ ಬಿಡುಗಡೆಗಾಗಿ ವರ್ಷಪೂರ್ತಿ ಪ್ರತಿಭಟನೆ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಭರವಸೆ ನೀಡಿ ಹತ್ತು ದಿನಗಳಾದರೂ ಇನ್ನೂ ಹಣ ಬಿಡುಗಡೆಯಾಗಲಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಕಲಬುರ್ಗಿ ಹೇಳಿದರು.

ಸೀರೆ, ಕಿಟ್‌ ವಿತರಣೆ: ಶತಾಯ–ಗತಾಯ ಗೆಲ್ಲಲೇಬೇಕು ಎಂದು ನಿರ್ಧರಿಸಿರುವ ರಾಜಕೀಯ ಪಕ್ಷಗಳ ಮುಖಂಡರು, ಈಗಿನಿಂದಲೇ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಪಕ್ಷದ ಮುಖಂಡರೊಬ್ಬರು ಈಗಾಗಲೇ, 60 ಸಾವಿರಕ್ಕೂ ಹೆಚ್ಚು ಸೀರೆ ಹಂಚಿದ್ದಾರೆ. ಅದೇ ರೀತಿ, ಸಲೂನ್‌ ಕಿಟ್‌ ವಿತರಣೆ ಮಾಡುತ್ತಿದ್ದಾರೆ.  ಟೀಕೆಗೆ ಪ್ರತಿಟೀಕೆ, ಪ್ರತಿಭಟನೆಗೆ ಪ್ರತಿ ಹೋರಾಟ ಮಾಡುವ ಮೂಲಕ ಎಲ್ಲ ಪಕ್ಷಗಳು ಸುದ್ದಿಯಲ್ಲಿರಲು ಗಮನ ಕೇಂದ್ರೀಕರಿಸಿವೆ.

‘ಮನೆ ಮನೆಗೆ ಕುಮಾರಣ್ಣ’ ಇಂದಿನಿಂದ

‘ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮದ ಮೂಲಕ ಚುನಾವಣಾ ಪ್ರಚಾರವನ್ನು ಚುರುಕುಗೊಳಿಸಲು ಜೆಡಿಎಸ್‌ ನಿರ್ಧರಿಸಿದೆ.

ಹುಬ್ಬಳ್ಳಿಯ ಲಿಂಗರಾಜನಗರದ ಸಮುದಾಯ ಭವನದಲ್ಲಿ ಗುರುವಾರ (ಜ.4) ಬೆಳಿಗ್ಗೆ 11ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಜೆಡಿಎಸ್‌ನ ಸುರೇಶಗೌಡ ತಿಳಿಸಿದರು.

19 ವಾರ್ಡ್‌ಗಳ ಪ್ರತಿ ಮನೆಗೂ ಹೋಗುತ್ತೇವೆ. ಅಲ್ಲಿನ ಬಡಾವಣೆಯ ಮುಖಂಡರು ಹಾಗೂ ಮಹಿಳಾ ಸಂಘಟನೆಯ ಸದಸ್ಯರನ್ನು ಭೇಟಿ ಮಾಡಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.