ADVERTISEMENT

ಮಹದಾಯಿ ಹೋರಾಟಗಾರರಿಂದ ಹೆದ್ದಾರಿ ತಡೆ

ಮುಕ್ಕಾಲು ತಾಸು ವಾಹನ ಸಂಚಾರ ಸ್ಥಗಿತ; ಪರದಾಡಿದ ಸವಾರರು

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 9:10 IST
Last Updated 4 ಜನವರಿ 2018, 9:10 IST
ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಮಲಪ್ರಭಾ, ಮಹದಾಯಿ, ಕಳಸಾ–ಬಂಡೂರಿ ರೈತ ಹೋರಾಟ ಒಕ್ಕೂಟ ಸಮಿತಿ ಸದಸ್ಯರು ಬುಧವಾರ ಗಬ್ಬೂರು ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು
ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಮಲಪ್ರಭಾ, ಮಹದಾಯಿ, ಕಳಸಾ–ಬಂಡೂರಿ ರೈತ ಹೋರಾಟ ಒಕ್ಕೂಟ ಸಮಿತಿ ಸದಸ್ಯರು ಬುಧವಾರ ಗಬ್ಬೂರು ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು   

ಹುಬ್ಬಳ್ಳಿ: ಮಲಪ್ರಭಾ– ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಮಲಪ್ರಭಾ, ಮಹದಾಯಿ, ಕಳಸಾ–ಬಂಡೂರಿ ರೈತ ಹೋರಾಟ ಒಕ್ಕೂಟ ಸಮಿತಿ ಸದಸ್ಯರು ನಗರದ ಹೊರವಲಯದ ಗಬ್ಬೂರು ಕ್ರಾಸ್‌ನಲ್ಲಿ ಮುಕ್ಕಾಲು ತಾಸು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಜನಪ್ರತಿನಿಧಿಗಳು ಪಕ್ಷ ರಾಜಕಾರಣ ಮರೆತು, ಯೋಜನೆ ಜಾರಿಗೆ ‌ಒಕ್ಕೊರಲಿನಿಂದ ದನಿ ಎತ್ತಬೇಕು ಎಂದು ಒತ್ತಾಯಿಸಿದ ಹೋರಾಟಗಾರರು, ಗೋವಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ, ‘ರೈತರ ಬಗ್ಗೆ ರಾಜಕಾರಣಿಗಳಿಗೆ ಕಾಳಜಿ ಇಲ್ಲದಿರುವುದೇ ಯೋಜನೆ ಜಾರಿ ವಿಳಂಬಕ್ಕೆ ಪ್ರಮುಖ ಕಾರಣ. ಇಲ್ಲದಿದ್ದರೆ, ರೈತರು ಎರಡೂಮುಕ್ಕಾಲು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದರು.

ADVERTISEMENT

‘ರಾಜ್ಯದ ಬಿಜೆಪಿ ಸಂಸದರು, ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಒತ್ತಡ ಹೇರಬೇಕು. ಆ ಮೂಲಕ ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ಮನವೊಲಿಸಿ, ವಿವಾದ ಪರಿಹರಿಸಲು ಮುಂದಾಗಬೇಕು. ಇದಕ್ಕೆ ಇತರ ಪಕ್ಷಗಳ ಸಂಸದರು ಸಹ ಕೈ ಜೋಡಿಸಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ಮುಖಂಡ ಸುಭಾಷಗೌಡ ಪಾಟೀಲ, ‘ಮಹದಾಯಿ ವಿಷಯ ಬಂದರೆ, ಗೋವಾದಲ್ಲಿರುವ ಇಬ್ಬರು ಸಂಸದರು ಎಲ್ಲವನ್ನೂ ಮರೆತು ದೊಡ್ಡ ಮಟ್ಟದಲ್ಲಿ ದನಿ ಎತ್ತುತ್ತಾರೆ. ಆದರೆ, ನಮ್ಮ ಸಂಸದರು ಮಾತ್ರ ಎಲ್ಲೂ ತುಟಿ ಬಿಚ್ಚುವುದಿಲ್ಲ. ಇದು ಹೀಗೆ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ರೈತರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

‘ಕಾವೇರಿ ನದಿ ನೀರಿನ ವಿಷಯ ಬಂದರೆ ಸಕ್ರಿಯರಾಗುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು, ಉತ್ತರ ಕರ್ನಾಟಕದ ನದಿ ನೀರಿನ ಸಮಸ್ಯೆಗಳ ಬಗ್ಗೆಯೂ ದನಿ ಎತ್ತಬೇಕು. ಈ ಭಾಗದ ನದಿ ವಿವಾದ ಹಾಗೂ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಗಮನ ಸೆಳೆಯಬೇಕು’ ಎಂದು ಹೇಳಿದರು.

ಸಮಿತಿಯ ಬಾಬಾಜಾನ್ ಮುಧೋಳ, ಸುರೇಶ ಪಾಟೀಲ, ಹೇಮನಗೌಡ ಬಸವನಗೌಡರ, ಬಸಪ್ಪ ಭೀರಣ್ಣವರ, ಶಿವಪ್ಪ, ಜಂಗಪ್ಪ  ನಿರ್ವಾಣಿ, ಪಾಲಿಕೆ ಸದಸ್ಯ ಅಲ್ತಾಫ ಕಿತ್ತೂರ ಹಾಗೂ ಕರ್ನಾಟಕ ಸಂಗ್ರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಂಜು ಧುಮ್ಮಕನಾಳ ಇದ್ದರು.

ಸಂಚಾರ ಅಸ್ತವ್ಯಸ್ತ: ರಸ್ತೆ ತಡೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ, ಬೈಪಾಸ್ ಸಂಪರ್ಕಿಸುವ ನಗರದ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ, ಸಂಚಾರ ಅಸ್ತವ್ಯಸ್ತವಾಯಿತು. ಬಂಕಾಪುರ ಚೌಕ ಹಾಗೂ ಗಬ್ಬೂರು ಬಳಿ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಅಡ್ಡ ಇಟ್ಟು ಸಂಚಾರ ನಿಯಂತ್ರಿಸಿದರು.

ಪೊಲೀಸರಿಗೆ ಪ್ರತಿಭಟನೆಯ ಮುನ್ಸೂಚನೆ ಸಿಕ್ಕಿದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಬೆಳಿಗ್ಗೆಯಿಂದಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೇಣುಕಾ ಸುಕುಮಾರ್, ಎಸಿಪಿ ಸಕ್ರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

’ಸರ್ವಪಕ್ಷ ಸಭೆ ಕರೆಯಿರಿ’

‘ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟ ನಿಲ್ಲಿಸಿ, ನೀರಿನ ವಿಷಯದಲ್ಲಿ ಒಂದಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯತ್ತ ಬೆರಳು ತೋರಿಸದೆ ಮತ್ತೊಮ್ಮೆ ಸರ್ವಪಕ್ಷಗಳ ಸಭೆ ನಡೆಸಿ ನದಿಗಳ ನೀರು ತರಲು ಕಾರ್ಯತಂತ್ರ ರೂಪಿಸಬೇಕು’ ಎಂದು ಮಲಪ್ರಭಾ, ಮಹದಾಯಿ, ಕಳಸಾ–ಬಂಡೂರಿ ರೈತ ಹೋರಾಟ ಒಕ್ಕೂಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.