ADVERTISEMENT

ಕಡಲೆ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 7:26 IST
Last Updated 14 ಜನವರಿ 2018, 7:26 IST
ಅಣ್ಣಿಗೇರಿ ರೈತ ಹೋರಾಟ ಸಮಿತಿಯಿಂದ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಗದಗ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63 ಬಂದ್‌ ಮಾಡಿ ಪ್ರತಿಭಟಿಸುತ್ತಿರುವ ರೈತರು.
ಅಣ್ಣಿಗೇರಿ ರೈತ ಹೋರಾಟ ಸಮಿತಿಯಿಂದ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಗದಗ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63 ಬಂದ್‌ ಮಾಡಿ ಪ್ರತಿಭಟಿಸುತ್ತಿರುವ ರೈತರು.   

ಅಣ್ಣಿಗೇರಿ: ಕಡಲೆ ಬೆಲೆಗೆ ಬೆಂಬಲ ಬೆಲೆ ಘೋಷಿಸಿದೆ. ಆದರೆ ಖರೀದಿ ಕೇಂದ್ರ ಸ್ಥಾಪನೆಗೆ ಹಿಂದೇಟು ಹಾಕುತ್ತಿರುವದನ್ನು ಖಂಡಿಸಿ ಸ್ಥಳೀಯ ರೈತ ಹೋರಾಟ ಸಮಿತಿ ವತಿಯಿಂದ ರೈತರು ಗದಗ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63ರ ಅಂಬಿಗೇರಿ ಕ್ರಾಸ್ ಬಳಿ 2 ಗಂಟೆಗಳ ಕಾಲ ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ಕಡಲೆ ಬೆಳೆಗೆ ಪ್ರತಿ ಕ್ವಿಂಟಲ್‌ಗೆ ₹ 4,440 ಬೆಂಬಲ ಬೆಲೆ ಘೋಷಣೆ ನಿಗದಿ ಮಾಡಲಾಗಿದ್ದು ತಕ್ಷಣವೇ ಸ್ಥಳೀಯ ಎಪಿಎಂಸಿ ಆವರಣದಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ರೈತರು ಆಗ್ರಹಿಸಿದರು.

ಇದಕ್ಕೂ ಮೊದಲು ಸ್ಥಳೀಯ ಶ್ರೀ ಅಮೃತೇಶ್ವರ ದೇವಸ್ಥಾನ ಮುಂಭಾಗದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ಅಂಬಿಗೇರಿ ಕ್ರಾಸ್‌ನಲ್ಲಿ ಹೆದ್ದಾರಿ ಬಂದ್‌ ಮಾಡಿದರು.

ADVERTISEMENT

ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಶಂಕರ ಕಲ್ಲೂರ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಸರಿಯಾದ ಮಳೆಯಿಲ್ಲದೆ ರೈತರು ಬೆಳೆಯಿಲ್ಲದೆ ಕಂಗಾಲಾಗಿದ್ದಾರೆ. ಮುಂಗಾರು ವಿಫಲವಾದ ಬಳಿಕ ಹಿಂಗಾರಿನಲ್ಲಿ ಅಲ್ಪ ಸ್ವಲ್ಪ ಮಳೆಯಿಂದ ರೈತರು ಹಿಂಗಾರು ಬೆಳೆಯಾಗಿ ಕಡಲೆ, ಕುಸಬಿ, ಗೋಧಿ, ಜೋಳ ಬೆಳೆಗಳನ್ನು ಬೆಳೆದಿದ್ದಾರೆ ಆದರೆ ಬೆಳೆಗೆ ಸರಿಯಾದ ಬೆಲೆಯಿಲ್ಲದೇ ರೈತರು ಪರದಾಡುತ್ತಿದ್ದಾರೆ ಎಂದರು.

ಬಿಜೆಪಿ ಮುಖಂಡ ಷಣ್ಮುಖ ಗುರಿಕಾರ ಮಾತನಾಡಿ ಫಸಲ್ ಬಿಮಾ ಬಾಕಿಯಿರುವ ಬೆಳೆ ವಿಮೆಯನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ ನವೀನ ಹುಲ್ಲೂರ ಪ್ರತಿಭಟನಾ ನಿರತ ಸ್ಥಳಕ್ಕೆ ಬಂದು ಮಾತನಾಡಿ ಈಗಾಗಲೇ ಸರ್ಕಾರಕ್ಕೆ ಈ ಭಾಗದ ನವಲಗುಂದ, ಅಣ್ಣಿಗೇರಿ, ಕುಂದಗೋಳ, ಕಲಘಟಗಿ ಸೇರಿದಂತೆ ವಿವಿಧ ಕಡೆ ಕಡಲೆ ಹಾಗೂ ಹಿಂಗಾರು ಬೆಳೆಗಳ ಖರೀದಿ ಕೆಂದ್ರ ಸ್ಥಾಪಿಸಬೇಕೆಂದು ಮನವಿ ಸಲ್ಲಿಸಲಾಗಿದೆ ಹೀಗಾಗಿ ಸದ್ಯದಲ್ಲಿ ಸರ್ಕಾರದಿಂದ ಖರೀದಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಭರವಸೆ ನೀಡುವದರ ಮೂಲಕ ರೈತರ ಧರಣಿಯನ್ನು ಅಂತ್ಯಗೊಳಿಸಿದರು.

ಜ. 18ರೊಳಗೆ ಖರೀದಿ ಕೇಂದ್ರ ಪ್ರಾರಂಭವಾಗದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಹೆದ್ದಾರಿ ಬಂದ್‌ ಹಿನ್ನೆಲೆಯಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು, ಭಗವಂತಪ್ಪ ಪುಟ್ಟಣ್ಣವರ, ಎ.ಪಿ.ಗುರಿಕಾರ, ಶಿವಣ್ಣ ಬಾಳೋಜಿ,ಬಸನಗೌಡ ಕುರಹಟ್ಟಿ. ಪ್ರವೀಣ ನಾವಳ್ಳಿ, ದಾವಲಸಾಬ್ ದರವಾನ, ಎ.ಬಿ.ಕೊಪ್ಪದ. ಚೆನ್ನಬಸಪ್ಪ ಉಳ್ಳೆಗಡ್ಡಿ, ವೀರನಾರಾಯಣ ಬೆಂತೂರ, ಸಕ್ರಪ್ಪ ಯಕ್ಕುಂಡಿ, ಸಕ್ರಪ್ಪ ಪಲ್ಲೇದ, ಈಶ್ವರಪ್ಪ ಹೊಂಬಳ, ಶೇಖಣ್ಣ ಸೊಟಕನಾಳ, ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ, ಸಿಪಿಐ ಪಿ.ಎಂ. ದಿವಾಕರ, ಪಿಎಸ್ಐ ಮಹದೇವ ಯಲಿಗಾರ, ವೈ.ಎಲ್‌. ಶೀಗಿಹಳ್ಳಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.