ADVERTISEMENT

ಇಳೆಯ ನೆರಳಿಗೆ ನಾಚಿ ಕೆಂಪಾದ ಚಂದ್ರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 9:11 IST
Last Updated 1 ಫೆಬ್ರುವರಿ 2018, 9:11 IST
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಚಂದ್ರ ಗ್ರಹಣ ವೀಕ್ಷಣೆಗೆ ನೆರೆದಿದ್ದ ಜನ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಚಂದ್ರ ಗ್ರಹಣ ವೀಕ್ಷಣೆಗೆ ನೆರೆದಿದ್ದ ಜನ   

ಧಾರವಾಡ: ಮೋಡವಿಲ್ಲದ ಶುಭ್ರ ಆಕಾಶ. ಒಂದೆಡೆ ಅಸ್ತಂಗತನಾಗುತ್ತಿದ್ದ ಸೂರ್ಯ, ಕತ್ತಲು ಕವಿಯುತ್ತಿದ್ದಂತೆ ಉದಯಿಸಿದ ಚಂದ್ರ, ಇವೆರಡರ ನಡುವೆ ಇಳೆಯ ನೆರಳಿಗೆ ಚಂದ್ರ ನಾಚಿ ಕೆಂಪಾಗಿದ್ದ.

ಖಗ್ರಾಸ ಚಂದ್ರಗ್ರಹಣ ದರ್ಶನಕ್ಕೆ ನಗರದ ಸಾವಿರಾರು ಜನರು ಸಾಕ್ಷಿಯಾದರು. ದೇವಾಲಯಗಳು ಬಾಗಿಲು ಹಾಕಿದ್ದರೆ, ಮೌಢ್ಯವನ್ನು ತೊಡೆದು ಹಾಕುವ ಸಲುವಾಗಿ ಪ್ರಗತಿಪರರರು ಗ್ರಹಣದ ಸಂದರ್ಭದಲ್ಲೇ ಊಟ ಮಾಡುವುದರೊಂದಿಗೆ ಗ್ರಹಣದ ಸೊಬಗನ್ನು ಸವಿದರು.

ಮಬ್ಬಾಗಿ ಉದಯಿಸಿದ ಚಂದ್ರ, ಕ್ರಮೇಣ ಕೆಂಪಾದ. ಮುಳುಗುತ್ತಿದ್ದ ಸೂರ್ಯನ ಬೆಳಕು ಭೂಮಿ ಮೇಲೆ ಬಿದ್ದಿದ್ದರಿಂದ ಅದರ ನೆರಳು ಚಂದ್ರನ ಮೇಲೆ ಪ್ರತಿಫಲಿಸಿ ಶ್ವೇತ ವರ್ಣದ ಚಂದ್ರ ಕೆಂಪಗಾದ. ಕ್ರಮೇಣ ಚಂದ್ರ ಸರಿಯುತ್ತಿದ್ದಂತೆ ಮತ್ತೆ ತನ್ನ ಬಣ್ಣಕ್ಕೆ ಮರಳುವ ಸೊಬಗನ್ನು ಹಲವು ಕಣ್ತುಂಬಿಕೊಂಡರು.

ADVERTISEMENT

ಪ್ರಾದೇಶಿಕ ವಿಜ್ಞಾನ ಕೇಂದ್ರ, ಅಂಜುಮನ್ ಸಂಸ್ಥೆಯ ಆವರಣ, ಕಡಪಾ ಮೈದಾನ ಹೀಗೆ ಎಲ್ಲೆಡೆ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಬರಿಗಣ್ಣಿಗೆ ಕಾಣಿಸುತ್ತಿದ್ದ ಈ ದೃಶ್ಯವನ್ನು ಹಲವರು ಮನೆ ಮೇಲೆ, ಹಾಸ್ಟೆಲ್‌, ಕಚೇರಿ ಇತ್ಯಾದಿ ಕಟ್ಟಡಗಳ ಮೇಲೆ ನಿಂತು ವೀಕ್ಷಿಸಿದರು.

ಚಂದ್ರ ಕೆಂಪಾಗುತ್ತಾನೆ ಎಂದು ತಿಳಿಯುತ್ತಲೇ ಪುಳಕಿತಗೊಂಡೆ. ಅದನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಸಂಜೆ 6ಕ್ಕೆ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಬಂದೆ. ಗ್ರಹಣ ಮುಗಿಯುವವರೆಗೂ ಪ್ರತಿಯೊಂದು ಹಂತವನ್ನೂ ವೀಕ್ಷಿಸಿದೆ. ಪ್ರಜಾವಾಣಿಯಲ್ಲಿ ಬಂದ ವರದಿ ಗ್ರಹಣದ ಸಂಪೂರ್ಣ ಮಾಹಿತಿ ನೀಡಿತು. ಈ ಅದನ್ನು ವೀಕ್ಷಿಸಿ ಅನುಭವಿಸಿದೆ.
ಪ್ರಿಯದರ್ಶಿನಿ ಶೆಟ್ಟರ್‌, ಸ್ನಾತಕೋತ್ತರ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.