ADVERTISEMENT

ಪ್ರತಿಭಟನೆ ಮುಂದುವರಿಸಲು ವಕೀಲರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 10:02 IST
Last Updated 9 ಫೆಬ್ರುವರಿ 2018, 10:02 IST

ಧಾರವಾಡ: ರಾಜ್ಯದ ಹೈಕೋರ್ಟ್‌ಗಳಲ್ಲಿ ಕೊರತೆ ಇರುವ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಧಾರವಾಡ ಹೈಕೋರ್ಟ್‌ ವ್ಯಾಪ್ತಿಯ ವಕೀಲರನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿ ಹೈಕೋರ್ಟ್‌ ವಕೀಲರ ಸಂಘದ ಸದಸ್ಯರು ಗುರುವಾರವೂ ಪ್ರತಿಭಟನೆ ಮುಂದುವರಿಸಿದರು.

ನ್ಯಾಯಮೂರ್ತಿಗಳ ನೇಮಕ ಮಾಡಬೇಕು ಎಂದು ಬೆಂಗಳೂರಿನ ಪ್ರಧಾನ ಪೀಠದಲ್ಲೂ ವಕೀಲರು ಪ್ರತಿಭಟನೆ ನಡೆಸಿದ್ದರು. ಐದು ಜನರ ಹೆಸರನ್ನು ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ಹಿಂಪಡೆದಿದ್ದಾರೆ.

ಶಿಫಾರಸುಗೊಂಡಿರುವ ಹೆಸರುಗಳ ಪೈಕಿ ಧಾರವಾಡ ಹೈಕೋರ್ಟ್‌ ವ್ಯಾಪ್ತಿ ವಕೀಲರನ್ನು ಪರಿಗಣಿಸಿಲ್ಲ ಎಂದು ಇಲ್ಲಿನ ವಕೀಲರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ. ‘ಸಂಘದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು’ ಎಂದು ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಆರ್.ಡಿ. ದೇಸಾಯಿ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ. 

ADVERTISEMENT

‘ಈ ಭಾಗದಲ್ಲೂ ಪ್ರತಿಭಾವಂತ ವಕೀಲರಿದ್ದು, ಪ್ರತಿ ಸಂದರ್ಭದಲ್ಲೂ ಇಲ್ಲಿನ ವಕೀಲರನ್ನು ಅಲಕ್ಷಿಸಲಾಗುತ್ತಿದೆ. ಮುಖ್ಯ ನ್ಯಾಯಮೂರ್ತಿಗಳು, ಕೊಲಿಜಿಯಂ ಮತ್ತು ಇತರ ನೇಮಕಾತಿ ಅಧಿಕಾರ ಹೊಂದಿರುವವರ ಗಮನ ಸೆಳೆಯಲು ಪ್ರತಿಭಟನೆ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದರೆ, ಪ್ರತಿಭಟನೆಯನ್ನು ಈ ಭಾಗದ ಎಲ್ಲ  ನ್ಯಾಯಾಲಯಗಳಿಗೂ ವಿಸ್ತರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.