ADVERTISEMENT

9 ವರ್ಷವಾದರೂ ಸ್ಟೇಷನ್ ಸೇರದ ಬಿಲ್!

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 10:20 IST
Last Updated 27 ಅಕ್ಟೋಬರ್ 2011, 10:20 IST

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗಕ್ಕಾಗಿ ಒಂಬತ್ತು ವರ್ಷಗಳ ಹಿಂದೆ ಮಾಡಿದ ಎಲೆಕ್ಟ್ರಿಕಲ್ ಕಾಮಗಾರಿಯ ಬಿಲ್ ಇನ್ನೂ ಪಾವತಿಯಾಗಿಲ್ಲ ಎಂದು ಧಾರವಾಡ ಮೂಲದ ಮಣಿಯಾರ್ ಎಲೆಕ್ಟ್ರಿಕಲ್ಸ್‌ನ ಮಾಲೀಕ ಆರಿಫ್ ಮಣಿಯಾರ ಆರೋಪಿಸಿದರು.

`2002ರಲ್ಲಿ ಗೋವಾದ ವಾಸ್ಕೋದಲ್ಲಿ ನಿರ್ಮಿಸಿದ ವಾಸ್ಕೋಡಗಾಮ ಸಿಬ್ಬಂದಿ ವಸತಿನಿಲಯದಲ್ಲಿ ಮಾಡಿದ ಎಲೆಕ್ಟ್ರಿಕಲ್ ಕಾಮಗಾರಿಯ (ಕರಾರು ಸಂಖ್ಯೆ-ಎಚ್/ಇ. 05/2002-2003) ಬಿಲ್ ಮೊತ್ತ 97,557 ರೂಪಾಯಿ (ಭದ್ರತಾ ಠೇವಣಿ ಸೇರಿ) ಪಾವತಿಸಲು ಇಲಾಖೆಯ ಅಧಿಕಾರಿಗಳು ಮೀನ-ಮೇಷ ಎಣಿಸುತ್ತಿದ್ದಾರೆ~ ಎಂದು ಅವರು ದೂರಿದರು.

`ಮೊದಮೊದಲು ದೂರವಾಣಿ ಮೂಲಕ ಸಂಪರ್ಕಿಸಿ ಬಿಲ್ ಪಾವತಿಗೆ ಕೋರುತ್ತಿದ್ದೆ. ಯಾವುದೇ ಪ್ರಯೋಜನವಾಗದಿದ್ದಾಗ ಲಿಖಿತ ದೂರು ನೀಡಲು ಆರಂಭಿಸಿದೆ. ಅದೂ ಫಲಿಸದಿದ್ದಾಗ ಗ್ರಾಹಕರ ಪರಿಹಾರ ವೇದಿಕೆಗೆ ತೆರಳಿದೆ. ಅವರು ನ್ಯಾಯಾಲಯಕ್ಕೆ ಹೋಗಬೇಕೆಂದು ಸಲಹೆ ನೀಡಿದರು.
 
ಇಷ್ಟೆಲ್ಲ ಆಗಿಯೂ ಹೋರಾಟವನ್ನು ಬಿಡಲಿಲ್ಲ. ಕಳೆದ ಮಾರ್ಚ್ 18ರಂದು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಹಿರಿಯ ನಿರ್ದೇಶಕರ ಕಚೇರಿ (ಮೇಂಟೆನೆನ್ಸ್)ಯಿಂದ ವಿಭಾಗೀಯ ಹಣಕಾಸು ವ್ಯವಸ್ಥಾಪಕರಿಗೆ ಪತ್ರ  ಬರೆದು ಬಿಲ್ ಪಾವತಿಸುವಂತೆ ಸೂಚಿಸಲಾಗಿದೆ. ಆದರೂ ಹಣ ಬಿಡುಗಡೆಗೆ ಸಂಬಂಧಪಟ್ಟವರು `ಮನಸ್ಸು~ ಮಾಡಲ್ಲ್ಲಿಲ~ ಎಂದು ಆರಿಫ್ ಹೇಳಿದರು.

`ಐದು ಮಂದಿ ಕೆಲಸದವರನ್ನು ಬಳಸಿ ವಸತಿ ಗೃಹದ 11 ಮನೆಗಳಿಗೆ ವೈರಿಂಗ್ ಮಾಡಿದ್ದೆ. ಸಕಾಲದಲ್ಲಿ ಬಿಲ್ ಪಾವತಿಯಾಗದ ಕಾರಣ ಬಹಳ ಕಷ್ಟ ಅನುಭವಿಸಿದ್ದೇನೆ~ ಎಂದು ಅವರು ತಿಳಿಸಿದರು.

ಆರಿಫ್ ಅವರ ಬಿಲ್ ಮೊತ್ತ ಪಾವತಿಗೆ ಸಂಬಂಧಿಸಿ ಮಾಹಿತಿ ಪಡೆಯಲು ವಿಭಾಗೀಯ ರೈಲ್ವೆಯ ಹಿರಿಯ ಎಲೆಕ್ಟ್ರಿಕಲ್ ಎಂಜಿನಿಯರ್ ಅವರನ್ನು ಸಂಪರ್ಕಿಸಲು `ಪ್ರಜಾವಾಣಿ~ 2-3 ದಿನಗಳಿಂದ ಪ್ರಯತ್ನಿಸಿದರೂ ರಾಯದುರ್ಗದಲ್ಲಿ ರೈಲ್ವೆ ಇಲಾಖೆಯ ಮಹತ್ವದ ಸಭೆ ನಡೆಯುತ್ತಿರುವುದರಿಂದ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.