ADVERTISEMENT

ದೀಪದ ಹಬ್ಬಕ್ಕೆ ಸಜ್ಜಾದ ಹೂಬಳ್ಳಿ

ಮಾರುಕಟ್ಟೆಯಲ್ಲಿ ಹೆಚ್ಚಿದ ಹಬ್ಬದ ಸಾಮಗ್ರಿ ಖರೀದಿಯ ಭರಾಟೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 16:56 IST
Last Updated 2 ನವೆಂಬರ್ 2021, 16:56 IST
ದೀಪಾವಳಿ ಹಬ್ಬದ ಅಂಗವಾಗಿ ಹುಬ್ಬಳ್ಳಿ ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ಮಂಗಳವಾರ ಹೆಚ್ಚಿನ ಜನಸಂದಣಿ ಕಂಡುಬಂತು
ದೀಪಾವಳಿ ಹಬ್ಬದ ಅಂಗವಾಗಿ ಹುಬ್ಬಳ್ಳಿ ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ಮಂಗಳವಾರ ಹೆಚ್ಚಿನ ಜನಸಂದಣಿ ಕಂಡುಬಂತು   

ಹುಬ್ಬಳ್ಳಿ: ಮೂರು ದಿನಗಗಳ ಬೆಳಕಿನ ಹಬ್ಬ ದೀಪಾವಳಿಗೆ ವಾಣಿಜ್ಯ ನಗರಿ ಸಜ್ಜಾಗಿದ್ದು, ಮಂಗಳವಾರ ನಗರದ ಮಾರುಕಟ್ಟೆ ಪ್ರದೇಶಗಳು ಗ್ರಾಹಕರಿಂದ ತುಂಬಿ ತುಳುಕಿದವು. ಕೋವಿಡ್‌ನಿಂದಾಗಿ ಎರಡು ವರ್ಷ ಸರಳವಾಗಿ ಹಬ್ಬ ಆಚರಿಸಿದ್ದ ಜನ, ಇದೀಗ ಸೋಂಕಿನ ಎಚ್ಚರಿಕೆಯ ಜೊತೆಗೆ ಹಬ್ಬ ಆಚರಿಸಲು ಸಜ್ಜಾಗಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಮಾರುಕಟ್ಟೆಗೆ ಬಂದು ಹಬ್ಬಕ್ಕೆ ಅಗತ್ಯವಿರುವ ಫಲ, ಪುಷ್ಪ, ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸಿದರು. ಕೆಲವರು ಬಟ್ಟೆ ಖರೀದಿಸಿದರೆ, ಮತ್ತೆ ಕೆಲವರು ಚಿನ್ನಾಭರಣ ಖರೀದಿಸಿ ಹಬ್ಬಕ್ಕೆ ಮುನ್ನುಡಿ ಬರೆದರು.

ದುರ್ಗದ ಬೈಲ್‌, ಜನತಾ ಬಜಾರ್, ಸರಾಫಗಟ್ಟಿ, ದಾಜೀಬಾನ ಪೇಟೆ ಸುತ್ತಮುತ್ತಲಿನ ಮಾರುಕಟ್ಟೆ ಪ್ರದೇಶ ಸಂಜೆಯಿಂದ ಜನಜಂಗುಳಿಯಿಂದ ಕೂಡಿತ್ತು. ತರಕಾರಿ, ಹೂ, ಹಣ್ಣುಗಳ ವ್ಯಾಪಾರದ ಜೊತೆ ಬಾಳೆ, ಕಬ್ಬು, ಮಾವಿನ ತಳಿರಿನ ವ್ಯಾಪಾರವೂ ಭರ್ಜರಿಯಾಗಿ ನಡೆಯಿತು. ವೈವಿಧ್ಯಮಯ ವಿದ್ಯುತ್‌ ದೀಪಾಲಂಕೃತ ಸಾಮಗ್ರಿಗಳನ್ನು ಖರೀದಿಸಲು ಎಲೆಕ್ಟ್ರಾನಿಕ್‌ ಮಳಿಗೆಗೆ ಜನ ಮುಗಿ ಬಿದ್ದಿದ್ದರು. ಕೊಪ್ಪಿಕರ ರಸ್ತೆ, ಮರಾಠ ಗಲ್ಲಿ, ಮೂರು ಸಾವಿರ ಮಠ ರಸ್ತೆಯಲ್ಲಿನ ಬಟ್ಟೆ ಮಳಿಗೆಗಳಲ್ಲೂ ವ್ಯಾಪಾರ ಜೋರಾಗಿತ್ತು.

ಕಣ್ಮನ ಸೆಳೆಯುವ ವಿವಿಧ ಮಾದರಿಯ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬೃಂದಾವನ, ಲ್ಯಾಂಪ್, ಸಾಂಪ್ರದಾಯಿಕ ಹಣತೆ, ಪಿಂಗಾಣಿ ಹಣತೆ, ಮಣ್ಣಿನ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ₹3 ರಿಂದ ₹30ವರೆಗಿನ ಹಣತೆಗಳು ಮಾರುಕಟ್ಟೆಗೆ ಬಂದಿವೆ. ಚಿತ್ತಾಕರ್ಷಕವಾಗದ ಆಕಾಶ ಬುಟ್ಟಿಗಳು ಗ್ರಾಹಕರ ಸೆಳೆಯುತ್ತಿವೆ.

ADVERTISEMENT

ಹಬ್ಬದ ವಿಶೇಷ ಫಲ–ಪುಷ್ಪಗಳಾದ ಮಹಾಲಿಂಗ ಬಳ್ಳಿ, ಉತ್ರಾಣಿ ಕಡ್ಡಿ, ಶಿಂಡ್ಲೆಕಾಯಿ, ಅಡಕೆ, ಸಿಂಗಾರ, ಬಾಳೆ ಸಸಿ, ಕಬ್ಬು, ಬೂದಗುಂಬಳವನ್ನು ಮಂದಿ ಖರೀದಿಸಿದರು. ಚನ್ನಮ್ಮ ವೃತ್ತ, ಈದ್ಗಾ ಮೈದಾನ, ಕೊಪ್ಪಿಕರ ರಸ್ತೆ, ವಿದ್ಯಾನಗರ, ಹೊಸೂರು, ಗೋಕುಲ ರಸ್ತೆಯ ಬದಿಯಲ್ಲಿ ವಾಹನಗಳಿಗೆ ಕಟ್ಟುವ ಬಣ್ಣ ಬಣ್ಣದ ದಂಡಿ, ಅಲಂಕಾರಿಕ ಪ್ಲಾಸ್ಟಿಕ್‌ ಹಾರಗಳ ವ್ಯಾಪಾರ ಗಮನ ಸೆಳೆಯಿತು.

ಬೆಲೆ ಏರಿಕೆ ಬಿಸಿ:

ಹಬ್ಬಕ್ಕೆ ಈ ಬಾರಿ ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ. ಸೇಬು ಒಂದು ಕೆ.ಜಿಗೆ ₹120–₹140, ದ್ರಾಕ್ಷಿ ₹200–₹250, ಕಿತ್ತಳೆ ₹100, ದಾಳಿಂಬೆ ₹150–₹200 ಆಗಿತ್ತು. ಸೇವಂತಿ ಹೂ ಮಾರಿಗೆ ₹70–₹100, ಚೆಂಡು ಹೂ ₹80, ಬಿಳಿ ಸೇವಂತಿ ₹100 ಆಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಎಲ್ಲಾ ಸಾಮಗ್ರಿಗಳ ಬೆಲೆಯು ಹೆಚ್ಚಾಗಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪರಿಸರ ಸಂರಕ್ಷಣಾಧಿಕಾರಿ ಕಚೇರಿಯ ಅಧಿಕಾರಿಗಳು ನಗರದ ಪಟಾಕಿ ಅಂಗಡಿಗಳಿಗೆ ಭೇಟಿ ನೀಡಿ ಹಸಿರು ಪಟಾಕಿಗಳ ಕುರಿತು ಮಾಹಿತಿ ಪಡೆದರು. 125 ಡೆಸಿಬಲ್‌ಗಿಂತ ಕಡಿಮೆ ಶಬ್ದ ಹೊರಸೂಸುವ ಪಟಾಕಿ ಹಾಗೂ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು ಎಂದು ವ್ಯಾಪಾರಸ್ಥರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.