ADVERTISEMENT

ಹುಬ್ಬಳ್ಳಿ: ಕ್ರೈಸ್ತರ ಮನೆಯೇ ಆಚರಣೆಯ ಆಲಯ

ಕೊರೊನಾ ಸೋಂಕು ಹಿನ್ನೆಲೆ: ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ

ರಾಮಕೃಷ್ಣ ಸಿದ್ರಪಾಲ
Published 9 ಏಪ್ರಿಲ್ 2020, 19:45 IST
Last Updated 9 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಕ್ರೈಸ್ತರ ಪವಿತ್ರ ಆಚರಣೆಯಾಗಿರುವ ಗುಡ್‌ ಫ್ರೈಡೆ (ಶುಭ ಶುಕ್ರವಾರ) ಈ ಬಾರಿ ಏ.10ರಂದು ಚರ್ಚ್‌ಗಳಲ್ಲಿ ನಡೆಯುತ್ತಿಲ್ಲ. ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಚರ್ಚ್‌ಗಳ ಬಾಗಿಲು ತೆರೆದರೆ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ. ಹೀಗಾಗಿ, ಯಾವುದೇ ಚರ್ಚ್‌ಗಳ ಬಾಗಿಲು ತೆರೆಯುವುದಿಲ್ಲ. ಪ್ರತಿಯೊಬ್ಬ ಕ್ರೈಸ್ತರ ಮನೆಯೇ ಆಚರಣೆಯ ಆಲಯವಾಗಲಿದೆ.

‘ಈಸ್ಟರ್ ಹಬ್ಬಕ್ಕೂ ಮುಂಚೆ ಬರುವ ‘ಗುಡ್ ಫ್ರೈಡೆ’ ಕ್ರೈಸ್ತರಿಗೆ ಬಹಳ ಮುಖ್ಯವಾದದ್ದು. ಹಿಂದಿನಿಂದಲೂ ಪಾಪಪ್ರಾಯಶ್ಚಿತ್ತಕ್ಕಾಗಿ ಒಂದು ಪ್ರಾಣಿಯನ್ನು ಬಲಿ ಕೊಡುವ ಪದ್ಧತಿ ಇಸ್ರೇಲ್ ಜನಾಂಗದಲ್ಲಿ ರೂಢಿಯಲ್ಲಿತ್ತು. ಆದರೆ ಮಾನವನ ಪಾಪಗಳಿಗೆ ಕೇವಲ ಒಂದು ಪ್ರಾಣಿಯ ರಕ್ತ ಮಾತ್ರ ಸಾಲದು. ಅದಕ್ಕೆ ಪರಿಶುದ್ಧವಾದ ರಕ್ತ ಸುರಿಯಬೇಕಿತ್ತು. ಅದು ದೇವರ ಚಿತ್ತ. ಹೀಗಾಗಿ ಅದನ್ನು ನೆರವೇರಿಸಲೆಂದೇ ಯೇಸು ಭೂಮಿಗೆ ಮನುಷ್ಯನಾಗಿ ಬಂದ ಎನ್ನುವ ನಂಬಿಕೆಯಿದೆ.’

‘ದೇವರ ಚಿತ್ತವನ್ನು ನೆರವೇರಿಸಲೆಂದೇ ತನ್ನ ಪರಿಶುದ್ಧವಾದ ರಕ್ತವನ್ನು ಕಲ್ವಾರಿ ಶಿಲುಬೆಯಲ್ಲಿ ಸುರಿಸಿ ತನ್ನನ್ನು ಮರಣಕ್ಕೆ ಒಪ್ಪಿಸಿದ. ಅಂದು ನಡೆದ ಈ ಕಾರ್ಯದಿಂದ ಮನು‍ಷ್ಯ ಪಾಪದಿಂದ ವಿಮೋಚನೆ ಹೊಂದಿದ್ದಾನೆ. ಅಂದರೆ ಯಾರ್ಯಾರು ಯೇಸು ಮಾಡಿದ ಈ ವಿಶೇಷ ಕಾರ್ಯವನ್ನು ನಂಬುತ್ತಾರೋ ಅವರೆಲ್ಲರೂ ಪಾಪಗಳಿಂದ ವಿಮೋಚನೆಗೊಂಡು ದೇವರಿಗೆ ಮಕ್ಕಳಾಗುವ ಅಧಿಕಾರವನ್ನು ಯೇಸುಕ್ರಿಸ್ತ ಕೊಟ್ಟಿದ್ದಾನೆ.

ADVERTISEMENT

ನಿಜವಾಗಿ ಆತನು ಶಿಲುಬೆಗೆ ಏರಿಸಿದ್ದರಿಂದಲೇ ಮನುಷ್ಯರ ಪಾಪವಿಮೋಚನೆಯಾಯಿತು. ಹೀಗಾಗಿ ಈ ದಿನವನ್ನು ಗುಡ್ ಫ್ರೈಡೆ (ಶುಭ ಶುಕ್ರವಾರ) ಎನ್ನಲಾಗಿದೆ’ ಎಂದು ಇದರ ವಿಶೇಷತೆಯನ್ನು ವಿವರಿಸಿದವರು ಹುಬ್ಬಳ್ಳಿ ರೈಲ್ವೆ ಕಾಲೊನಿಯ ಸೇಂಟ್‌ ಅಂಡ್ರೂಸ್‌ ಇಂಗ್ಲಿಷ್‌ ಚರ್ಚ್‌ನ ರೆವರೆಂಡ್‌ ಫಾದರ್‌ ಡಾ. ಮರ್ಫಿ ವಿಲಿಯಂ ಸೋನ್ಸ್.

ಪ್ರಾರ್ಥನೆ, ಪಠಣ, ಧ್ಯಾನ ...
ಶುಭ ಶುಕ್ರವಾರದ ನಿಮಿತ್ತ ಕ್ರೈಸ್ತರ ಮನೆಗಳಲ್ಲಿ ಬೆಳಗಿನಿಂದಲೇ ಸಡಗರ ಸಹಜ. ಬೆಳಿಗ್ಗೆ 8.30ಕ್ಕೆ ವಿಶೇಷ ಪ್ರಾರ್ಥನೆ. ಏಸು ಕ್ರಿಸ್ತ ಶಿಲುಬೆಗೆ ಏರಿ ಮರಣ ಹೊಂದಿದ ಸನ್ನಿವೇಶ ಸ್ಮರಿಸಿಕೊಂಡು ಮನೆಯ ಸದಸ್ಯರು ಸೇರಿ ಧ್ಯಾನ ಮಾಡುತ್ತಾರೆ. ಹಾಡು ಹಾಡಿ ಬೈಬಲ್‌ ಪಠಣ ಮಾಡುವರು.

ದೇಶದ ಒಳಿತಿಗೋಸ್ಕರ, ವಿಶೇಷವಾಗಿ ಕೊರೊನಾ ಸೋಂಕು ಹರಡದಿರಲಿ, ಒಂದು ವೇಳೆ ಸೋಂಕು ಕಾಣಿಸಿಕೊಂಡವರಿದ್ದಲ್ಲಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡಲಿದ್ದಾರೆ.

ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಸಪ್ತವಾಕ್ಯಗಳ ಧ್ಯಾನ–ಏಸುಕ್ರಿಸ್ತ ಶಿಲುಬೆಗೇರಿದ ಸಂದರ್ಭದಲ್ಲಿ ಆಡಿದ ಮಾತು ಪಠಣ, ಧ್ಯಾನ ನಡೆಯುತ್ತದೆ. ಕೆಲವು ಕುಟುಂಬಗಳಲ್ಲಿ ಹಿರಿಯರು ಪ್ರವಚನ ಮಾಡುವರು.

‘ಯಾವತ್ತಿಗೂ ಚರ್ಚ್ ಬಂದ್‌ ಮಾಡಿದ ಉದಾಹರಣೆಯಿಲ್ಲ. ಒಂದು ವೇಳೆ ಚರ್ಚ್ ತೆರೆದಿರುತ್ತಿದ್ದರೆ ಸಾಮೂಹಿಕ ಪ್ರಾರ್ಥನೆ, ಪ್ರವಚನ ಇವೆಲ್ಲ ಅಲ್ಲಿ ನಡೆಯುತ್ತಿದ್ದವು. ಸದ್ಯಕ್ಕೆ ಸಾರ್ವಜನಿಕರ ಒಳಿತಾಗಿ ಕ್ರೈಸ್ತರು ತಮ್ಮ ಮನೆಗಳಲ್ಲಿ ಕುಟುಂಬ ಸಮೇತರಾಗಿ ಆಚರಿಸುವರು’ ಎನ್ನುತ್ತಾರೆ ಕಾರವಾರ ರಸ್ತೆಯ ಮೈಯರ್‌ ಮೆಮೊರಿಯಲ್ ಚರ್ಚ್ ರೆ. ಫಾದರ್‌ ಜಿ.ಪ್ರಕಾಶ್‌.

*
‘ಬಿಷಪ್ ಸೂಚನೆಯಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ರೈಸ್ತರು ಅವರವರ ಮನೆಯಲ್ಲಿದ್ದುಕೊಂಡೇ ಪಾಲ್ಗೊಳ್ಳುವರು’
–ರೆ.ಫಾ. ಕ್ರಿಸ್ತಾನಂದ, ಮೈಯರ್‌ ಮೆಮೊರಿಯಲ್ ಚರ್ಚ್, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.