ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜು ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಎಬಿವಿಪಿ ನೇತೃತ್ವದಲ್ಲಿ ಹುಬ್ಬಳ್ಳಿ–ಧಾರವಾಡ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿದ ವಿದ್ಯಾರ್ಥಿಗಳು, ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಉಗ್ರವಾದದ ವಿರುದ್ಧ ಘೋಷಣೆ ಕೂಗಿದರು.
‘ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅಲ್ಲಿನ ಪ್ರತ್ಯೇಕವಾದ ಮನಸ್ಥಿತಿ ಬದಲಾಯಿಸಲು ಹಾಗೂ ಜನರ ಜೀವನ ಉತ್ತಮಪಡಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಆದರೂ, ಭಯೋತ್ಪಾದಕರು, ಪ್ರತ್ಯೇಕವಾದಿಗಳು, ನುಸುಳುಕೋರರ ಹಾವಳಿ ಕೊನೆಯಾಗಿಲ್ಲ’ ಎಂದು ಪ್ರತಿಭಟನಕಾರರು ಹೇಳಿದರು.
‘ಜಮ್ಮು– ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಹಾಗೂ ಭಾರತದ ಏಕತೆಗೆ ಉಗ್ರಗಾಮಿಗಳು ಸವಾಲೊಡ್ಡುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರವು ಉಗ್ರವಾದ ಹತ್ತಿಕ್ಕಲು ಕಠಿಣ ಕ್ರಮ ಕೈಗೊಂಡು, ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಬೇಕಿದೆ’ ಎಂದು ಆಗ್ರಹಿಸಿದರು.
ಎಬಿವಿಪಿ ಕೇಂದ್ರೀಯ ಕಾರ್ಯ ಸಮಿತಿ ಸದಸ್ಯ ಮಣಿಕಂಠ ಕಳಸ, ಜಿಲ್ಲಾ ಸಂಚಾಲಕ ವಿಜಯ್ ಕಲ್ಲೂರು, ನಗರ ಕಾರ್ಯದರ್ಶಿ ಸಿದ್ಧಾರ್ಥ್ ಕೋರಿ, ದಾನೇಶ್ ಕಿತ್ತೂರು, ನಾಗದತ್ತ ವಡೆಯರ್, ವಿಕ್ರಮ್ ಗಳಂಡೆ, ಶಶಿ ರೋನಿಮಟ್, ರಕ್ಷಿತ, ಸಂಜನಾ ಹಿರೇಮಠ, ತಿಲಕ್, ಮನೋಜ್ ಸೊಬಗಿನ, ರಾಜೇಶ್, ಮಲ್ಲಿಕಾರ್ಜುನ, ಅನ್ಮೋಲ್, ಮೌನೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.