ADVERTISEMENT

ಹುಬ್ಬಳ್ಳಿ: ಸ್ವಾಭಿಮಾನ ಇದ್ದಾಗ ಸಾಧನೆ ಸಾಧ್ಯ: ವೀರಸೋಮೇಶ್ವರ ಸ್ವಾಮೀಜಿ

ಕೋಚಲಾಪುರಮಠ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಂಭಾಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 5:32 IST
Last Updated 3 ಫೆಬ್ರುವರಿ 2023, 5:32 IST
ಹುಬ್ಬಳ್ಳಿ ಹೊರವಲಯದ ತಾರಿಹಾಳದ ವಿ.ಕೆ. ಫಾರ್ಮ್‌ನಲ್ಲಿ ಗುರುವಾರ ನಡೆದ ವೀರಯ್ಯ ವೀರಬಸಯ್ಯ ಕೋಚಲಾಪುರಮಠ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಗದ್ದುಗೆ ಪ್ರತಿಷ್ಠಾಪನೆ ಸಮಾರಂಭದಲ್ಲಿ ವೀರಯ್ಯ ಅವರ ಕುರಿತ ‘ಚಂದ್ರಗಿರಿ ಚಿತ್ಕಳೆ’ ಸ್ಮರಣ ಗ್ರಂಥವನ್ನು ಗಣ್ಯರು ಬಿಡುಗಡೆ ಮಾಡಿದರು
ಹುಬ್ಬಳ್ಳಿ ಹೊರವಲಯದ ತಾರಿಹಾಳದ ವಿ.ಕೆ. ಫಾರ್ಮ್‌ನಲ್ಲಿ ಗುರುವಾರ ನಡೆದ ವೀರಯ್ಯ ವೀರಬಸಯ್ಯ ಕೋಚಲಾಪುರಮಠ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಗದ್ದುಗೆ ಪ್ರತಿಷ್ಠಾಪನೆ ಸಮಾರಂಭದಲ್ಲಿ ವೀರಯ್ಯ ಅವರ ಕುರಿತ ‘ಚಂದ್ರಗಿರಿ ಚಿತ್ಕಳೆ’ ಸ್ಮರಣ ಗ್ರಂಥವನ್ನು ಗಣ್ಯರು ಬಿಡುಗಡೆ ಮಾಡಿದರು   

ಹುಬ್ಬಳ್ಳಿ: ‘ಜೀವನದಲ್ಲಿ ಗುರಿ ತಲುಪಲು ಪ್ರತಿಯೊಬ್ಬರಿಗೂ ಶ್ರೇಷ್ಠ ಗುರುವಿನ ಅಗತ್ಯವಿದೆ. ಸ್ವಾಭಿಮಾನ ಇಲ್ಲದಿರುವುದರಿಂದ ಮನುಷ್ಯ ಅನೇಕ‌ ಸಂಕಷ್ಟಗಳನ್ನು ಎದುರಿಸುತ್ತಿದ್ದಾನೆ.‌ ಸ್ವಾಭಿಮಾನ ಇದ್ದಾಗ ಸಾಧನೆ ಸಾಧ್ಯ. ತನ್ನತನ ಎನ್ನುವುದು ಮನುಷ್ಯನನ್ನು ಸದಾ ಚಲನಶೀಲವಾಗಿಡುತ್ತದೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ‌‌ ಪೀಠದ ಪ್ರಸನ್ನರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ತಾರಿಹಾಳದ ವಿ.ಕೆ. ಫಾರ್ಮ್‌ನಲ್ಲಿ ಗುರುವಾರ ನಡೆದ ವೀರಯ್ಯ ವೀರಬಸಯ್ಯ ಕೋಚಲಾಪುರಮಠ ಅವರ ಪ್ರಥಮ ಪುಣ್ಯಸ್ಮರಣೆ, ಸ್ಮರಣ ಗ್ರಂಥ ಹಾಗೂ ಗದ್ದುಗೆ ಪ್ರತಿಷ್ಠಾ‍ಪನೆ ಸಮಾರಂಭದಲ್ಲಿ ಆಶೀರ್ವಚನ ನೀಡಿ, ‘ಬಡತನದಲ್ಲಿ ಬೆಳೆದ ವೀರಯ್ಯ ಅವರು, ತಮ್ಮ ಬದುಕಿನ ಜತೆಗೆ ಸುತ್ತಮುತ್ತಲಿನವರ ಬದುಕನ್ನು ಸಹ ಉಜ್ವಲಗೊಳಿಸಿದರು’ ಎಂದರು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ‘ಸಮಾಜಮುಖಿ ಕೆಲಸಗಳನ್ನು ಮಾಡಿದವರು ಮಾತ್ರ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂಬುದನ್ನು ವೀರಯ್ಯಅವರು ತೋರಿಸಿದ್ದಾರೆ. ಅವರ‌ ಕಾರ್ಯಗಳು ನಮ್ಮೆಲ್ಲರಿಗೂ ಆದರ್ಶವಾಗಿವೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ವೀರಣ್ಣ ಅಡಗತ್ತಿ, ಡಾ. ಜಿ.ಬಿ. ಕಲಕೋಟಿ ಹಾಗೂ ಡಾ. ಬಿ.ಎಸ್. ಮಾಳವಾಡ ಅವರು ವೀರಯ್ಯ ಅವರ ಕುರಿತು ಸಂಪಾದಿಸಿರುವ ‘ಚಂದ್ರಗಿರಿ ಚಿತ್ಕಳೆ’ ಸ್ಮರಣ ಗ್ರಂಥವನ್ನು ಸಂಸದ ಪಿ.ಸಿ.ಗದ್ದಿಗೌಡರ ಬಿಡುಗಡೆ ಮಾಡಿದರು.

ಗ್ರಂಥ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಎಸ್. ಕೌಜಲಗಿ ಮಾತನಾಡಿದರು.

ಸೂಡಿಯ ಜುಕ್ತಿ ಹಿರೇಮಠದ ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಮತ್ತು ಧಾರವಾಡ ಹಾಲು ಉತ್ಪಾದಕರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ನೀಲಕಂಠ‌ ಅಸೂಟಿ‌ ಮಾತನಾಡಿದರು.

ವೀರಯ್ಯ ವೀರಬಸಯ್ಯ ಕೋಚಲಾಪುರಮಠ ಸಂಸ್ಮರಣ ಸಮಿತಿಯ ಡಾ. ಎನ್.ಎ. ಚರಂತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಜಿ.ಬಿ. ಕಲಕೋಟಿ ಸ್ವಾಗತಿಸಿದರು. ವೀರಣ್ಣ ಅಡಗತ್ತಿ ಅಧ್ಯಕ್ಷತೆ ವಹಿಸಿದ್ದರು. ಡಾ. ಜಯದೇವಿ ಜಂಗಮಶೆಟ್ಟಿ, ಗದಿಗೆಯ್ಯ ಹಿರೇಮಠ, ಮಲ್ಲನಗೌಡ ಪಾಟೀಲ, ಸಿದ್ದಪ್ಪ ಹರಿವಾಳ, ಪುಷ್ಪಾ ಕೋಚಲಾಪುರಮಠ, ರಾಚಯ್ಯ ವಾರಿಕಲ್‍ಮಠ, ಸುಮಾ ವಾರಿಕಲ್‍ಮಠ ಹಾಗೂ ವೀರಯ್ಯ ಅವರ ಕುಟುಂಬದವರು ಇದ್ದರು.

ಆರೋಗ್ಯ ತಪಾಸಣೆ

ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಉದ್ಘಾಟಿಸಿದರು. ಮಹೇಂದ್ರ ಸಿಂಘಿ, ಗೌತಮ ಗುಲೇಚಾ, ಡಾ.ಎಂ.ಜಿ. ಹಿರೇಮಠ, ಡಾ.ವೈ.ಎಫ್. ಹಂಜಿ ಹಾಗೂ ವಿಜಯ ಶೆಟ್ಟರ ನೇತೃತ್ವದಲ್ಲಿ ನೇತ್ರ ತಪಾಸಣೆ ಮತ್ತು ಕೃತಕ ಕಾಲು ಜೋಡಣಾ ತಪಾಸಣಾ ಶಿಬಿರ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.