ನವಲಗುಂದ: ‘ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕು ಆಡಳಿತ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶಗಳ ನಾಗರಿಕರ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಪರಿಹರಿಸಲು ಯತ್ನಿಸಲಾಗುತ್ತಿದೆ’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಇಬ್ರಾಹಿಂಪುರ ಗ್ರಾಮದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ‘ಕಂದಾಯ ಅದಾಲತ್’ ಸಾರ್ವಜನಿಕರ ಕುಂದುಕೊರತೆ ನಿವಾರಣಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಗ್ರಾಮೀಣ ಪ್ರದೇಶದ ರೈತರು, ವೃದ್ಧರು ತಮ್ಮ ಕೆಲಸಗಳಿಗಾಗಿ ತಾಲ್ಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದೆ. ಕಂದಾಯ ಇಲಾಖೆಯ ಯೋಜನೆಗಳನ್ನು ತಿಳಿಸುವ ಜತೆಗೆ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲಾಗುತ್ತದೆ’ ಎಂದರು.
ರೈತ ಕಟುಂಬಗಳಿಗೆ ಉತಾರ, ವಿಧವಾ ವೇತನ ಪ್ರಮಾಣಪತ್ರ ವಿತರಿಸಲಾಯಿತು. ನಂತರ ಅಂಬೇಡ್ಕರ್ ಓಣಿಗೆ ತೆರಳಿ ವಿವಿಧ ಕಾಮಗಾರಿಗಳನ್ನು ಶಾಸಕರು ಪರಿಶೀಲಿಸಿದರು.
ಅಣ್ಣಿಗೇರಿ ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ಕಂದಾಯ ನಿರೀಕ್ಷಕ ರಿಷಿ ಸಾರಂಗಿ, ನಬೀಸಾಬ ನದಾಫ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲವ್ವ ಜೋಗಿ, ಉಪಾಧ್ಯಕ್ಷ ಆನಂದ ಕೆಂಚಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.