ಕಲಘಟಗಿ: ತಾಲ್ಲೂಕಿನಲ್ಲಿ ವಿವಿಧ ಬೆಳೆಗೆ ಯೂರಿಯಾ ರಸಗೊಬ್ಬರ ಸಮರ್ಪಕವಾಗಿ ಸಿಗದೇ ಪ್ರತಿ ವರ್ಷ ರೈತರು ಸಮಸ್ಯೆ ಎದುರಿಸುತ್ತಿದ್ದರು. ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮುಂಜಾಗ್ರತ ಕ್ರಮ ವಹಿಸುತ್ತಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದರು.
ತಾಲ್ಲೂಕಿನಲ್ಲಿ ರೈತರು ಪ್ರಸಕ್ತ ಸಾಲಿನಲ್ಲಿ ಮುಂಗಾರು ಬಿತ್ತನೆ ಮಾಡಿದ ಬೆಳೆವಾರು ಭತ್ತ 2081 ಹೆಕ್ಟೇರ್, ಗೋವಿನ ಜೋಳ 18.034, ಸೋಯಾಬಿನ್ 9607, ಕಬ್ಬು 4696 ಹಾಗೂ ವಿವಿಧ ಅಕಡಿ ಕಾಳಿನ ದವಸ ಧಾನ್ಯ ಸೇರಿ 35.141 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಬಿತ್ತನೆ ಮಾಡಿದ ಗೋವಿನ ಜೋಳ ಹಾಗೂ ಕಬ್ಬು, ಭತ್ತದ ಬೆಳೆಗೆ ಯೂರಿಯಾ ರಸಗೊಬ್ಬರ ಬೇಕು ಎಂದು ರೈತರು ದಿನನಿತ್ಯ ರಸಗೊಬ್ಬರ ಮಳಿಗೆ, ಅಂಗಡಿ, ಸೊಸೈಟಿ ಮುಂದೆ ಬಂದು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ತಾಲ್ಲೂಕಿನಲ್ಲಿ ಕಬ್ಬು ಹಾಗೂ ಮೆಕ್ಕೆಜೋಳ ಬೆಳೆ ಹೆಚ್ಚಿಗೆ ಇರುವುದರಿಂದ ರೈತರಿಗೆ ಯೂರಿಯಾ ಕೊರತೆಯಾಗುತ್ತಿದೆ. ಅಧಿಕಾರಿಗಳು ಸೊಸೈಟಿಗಳಿಗೆ ರೈತರ ಬೇಡಿಕೆಯಂತೆ ರಸಗೊಬ್ಬರ ಒದಗಿಸಬೇಕು ಎಂದು ರೈತರ ಒತ್ತಾಯವಾಗಿದೆ.
ಯೂರಿಯಾ ರಸಗೊಬ್ಬರ ಮಾಹಿತಿ: ತಬಕದಹೊನ್ನಳ್ಳಿ- 10.35, ದೇವಿಕೊಪ್ಪ- 10.35, ಸಂಗಮೇಶ್ವರ 15.30 ಟನ್, ಸಂಗಮೇಶ್ವರ ಸೊಸೈಟಿಗೆ 30.60 ಟನ್, ಕಲಘಟಗಿಯ ತಾಲ್ಲೂಕು ಒಕ್ಕುಲುತನ ಹುಟ್ಟುವಳಿ ಮಾರಾಟ ಸೊಸೈಟಿ 15.30 ಟನ್, ಹುಲಕೊಪ್ಪ ಸೊಸೈಟಿಗೆ 17.10 ಹಾಗೂ ಇನ್ನುಳಿದ ಖಾಸಗಿ ಮಳಿಗೆಯಲ್ಲಿ 24 ಟನ್ ರಸಗೊಬ್ಬರ ಪೂರೈಕೆಯಾಗಿದೆ ಎಂದು ಕೃಷಿ ಇಲಾಖೆಯಿಂದ ಮಾಹಿತಿ ದೊರೆಯಿತು.
‘ಖಾಸಗಿ ಗೊಬ್ಬರ ಮಳಿಗೆಯ ಕೆಲವು ಕಡೆ ಗೊಬ್ಬರ ಇದ್ದರೂ ಹೆಚ್ಚಿನ ಬೆಲೆಯ ಲಿಂಕ್ ಗೊಬ್ಬರ ನೀಡಲು ಮುಂದಾಗಿ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅಧಿಕಾರಿಗಳು ರಸಗೊಬ್ಬರ ಕೊರತೆಯಿಲ್ಲ ಎನ್ನುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕ ಪಂಚಾಯಿತಿ ಉಪ್ಪಾಧ್ಯಕ್ಷ ಚಂದ್ರಗೌಡ ಪಾಟೀಲ್ ತಿಳಿಸಿದರು.
ಕೃಷಿ ತಜ್ಞರ ಸಲಹೆಯಂತೆ ಯೂರಿಯಾ ಜೊತೆಗೆ ಪೋಷಕಾಂಶವುಳ್ಳ ಪೋಟ್ಯಾಶ್-ರಂಜಕ ಸಂಯುಕ್ತ ಗೊಬ್ಬರ ಬಳಕೆ ಮಾಡುವುದರಿಂದ ಇಳುವರಿ ಪ್ರಮಾಣ ಹೆಚ್ಚುತ್ತದೆ. ಲಿಂಕ್ ಗೊಬ್ಬರ ಖರೀದಿಗೆ ಒತ್ತಾಯ ಮಾಡಿಲ್ಲ. ರೈತರು ಗೊಂದಲ ಆಗಬಾರದು. ಹೆಚ್ಚಿನ ಗೊಬ್ಬರ ಬೇಡಿಕೆಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಪ್ರತಿಕ್ರಿಯೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.