ADVERTISEMENT

‘ನಾಟಕ ಪ್ರದರ್ಶನಕ್ಕೆ ಅನುಮತಿ ನೀಡಿ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:00 IST
Last Updated 19 ಅಕ್ಟೋಬರ್ 2020, 16:00 IST
ನಾಟಕ ಕಂಪನಿಗಳ ಮಾಲೀಕರು, ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹುಬ್ಬಳ್ಳಿಯ ಕೆ.ಬಿ.ಆರ್‌. ಡ್ರಾಮಾ ಕಂಪನಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಚಿಂದೋಡಿ ಶ್ರೀಕಂಠೇಶ ಮಾತನಾಡಿದರು
ನಾಟಕ ಕಂಪನಿಗಳ ಮಾಲೀಕರು, ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹುಬ್ಬಳ್ಳಿಯ ಕೆ.ಬಿ.ಆರ್‌. ಡ್ರಾಮಾ ಕಂಪನಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಚಿಂದೋಡಿ ಶ್ರೀಕಂಠೇಶ ಮಾತನಾಡಿದರು   

‌ಹುಬ್ಬಳ್ಳಿ: ಕೋವಿಡ್‌–19 ಅನ್‌ಲಾಕ್‌ ನಂತರ ಎಲ್ಲ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಆದ್ದರಿಂದ, ನಾಟಕಗಳ ಪ್ರದರ್ಶನಕ್ಕೂ ಅನುಮತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘ ಆಗ್ರಹಿಸಿದೆ.

ಕೈಗಾರಿಕೆಗಳು, ಗಾರ್ಮೆಂಟ್ಸ್, ಸಾರಿಗೆ, ರೈಲು, ಹೋಟೆಲ್‌, ಮಾಲ್‌ಗಳು ಸೇರಿದಂತೆ ಎಲ್ಲವೂ ತೆರೆದಿವೆ. ಕೋವಿಡ್‌–19ನಿಂದಾಗಿ ನಾಟಕ ಕಂಪನಿಗಳ ಮಾಲೀಕರು ಹಾಗೂ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದೂ ಸದಸ್ಯರು ದೂರಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಚಿಂದೋಡಿ ಶಂಭುಲಿಂಗಪ್ಪ, ‘ವೃತ್ತಿ ರಂಗಭೂಮಿ ಪುನಶ್ಚೇತನಕ್ಕೆಂದು 1995ರಿಂದ ರಾಜ್ಯ ಸರ್ಕಾರ ಅನುದಾನ ನೀಡುತ್ತಾ ಬಂದಿದೆ. ಕೋವಿಡ್‍ನಿಂದ ಅನೇಕ ನಾಟಕ ಕಂಪನಿಗಳ ಮಾಲೀಕರು, ಕಲಾವಿದರು ಬೀದಿಗೆ ಬಂದಿದ್ದಾರೆ. ಸಾರ್ವಜನಿಕರು ನೀಡುವ ಆಹಾರದ ಕಿಟ್‍ ಮತ್ತು ಸಹಾಯಧನ ಪಡೆದರೂ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ಕಂಪನಿಗಳ ಮಾಲೀಕರು ಹೆಚ್ಚಿನ ಸಹಾಯಧನವನ್ನು ಕೇಳುತ್ತಿಲ್ಲ. ಪ್ರತಿ ವರ್ಷ ಬಿಡುಗಡೆ ಮಾಡುವ ಅನುದಾನವನ್ನು ಮೂರು ತಿಂಗಳು ಮೊದಲೇ ಬಿಡುಗಡೆ ಮಾಡುವಂತೆ ಸಚಿವ ಸಿ.ಟಿ. ರವಿ ಅವರಿಗೆ ನಿಯೋಗಮನವಿ ಮಾಡಿತ್ತು. ಎರಡು ತಿಂಗಳು ಕಳೆದರೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ’ ಎಂದು ದೂರಿದರು.

‘ಸರ್ಕಾರದ ಯೋಜನೆಯಂತೆ ವೈದ್ಯಕೀಯ ನೆರವು ಪಡೆಯುವ ಅರ್ಹತೆ ಹೊಂದಿದ ಕಲಾವಿದರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ, ರತ್ನಮ್ಮ ಚಿಕ್ಕಮಠ, ಮಂಜುನಾಥ ಜಾಲಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.