ADVERTISEMENT

‘ಕುಡಿಯುವ ನೀರಿನ ಸಮಸ್ಯೆ; ತಕ್ಷಣ ಸ್ಪಂದಿಸಿ’

ತಾಲ್ಲೂಕಮಟ್ಟದ ವಿವಿದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:53 IST
Last Updated 9 ಮೇ 2025, 14:53 IST
ಅಳ್ನಾವರ ತಾಲ್ಲೂಕು ನೋಡಲ್ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿವಿದ ಇಲಾಖೆಗಳ ತಾಲ್ಲೂಕುಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಅಳ್ನಾವರ ತಾಲ್ಲೂಕು ನೋಡಲ್ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿವಿದ ಇಲಾಖೆಗಳ ತಾಲ್ಲೂಕುಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಅಳ್ನಾವರ: ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು  ಸರಬರಾಜು ಮಾಡಬೇಕು. ಸಮಸ್ಯೆ ಎದುರಾದರೆ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಕೊಳವೆಬಾವಿಗಳನ್ನು
ಗುರುತಿಸಬೇಕು ಎಂದು ತಾಲ್ಲೂಕು ನೋಡಲ್ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಗುರುವಾರ ನಡೆದ ತಾಲ್ಲೂಕುಮಟ್ಟದ ವಿವಿದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ವರ್ಷ ತೊಂದರೆಯಾದ ಗ್ರಾಮಗಳಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಜಾನುವಾರುಗಳಿಗೆ ನೀರು ಹಾಗೂ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ADVERTISEMENT

ಕಡಬಗಟ್ಟಿ ಗ್ರಾಮದಲ್ಲಿ ನೀರಿನ ಸಮಸ್ಯೆ ನೀಗಿಸಲು ಹೊಸದಾಗಿ ಕೊರೆದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಪರಿವರ್ತಕ ಅಳವಡಿಸಬೇಕು ಎಂದು ಪಿಡಿಒ ಆನಂದ ಪಾಟೀಲ ತಿಳಿಸಿದರು.

ತಾಲ್ಲೂಕಿನಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಜಾನುವಾರುಗಳಿದ್ದು, ಸದ್ಯ ಮೇವಿನ ಸಂಗ್ರಹ ಸಮರ್ಪಕವಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ವಿದ್ಯುತ್ ಸರಬರಾಜು, ಜಾತಿ ಗಣತಿ ಪ್ರಗತಿ, ಸರ್ಕಾರಿ ಆಸ್ಪತ್ರೆ ಸೇವೆ ಸೇರಿದಂತೆ ವಿವಿದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಗೆ ಗೈರಾದ ಹಾಗೂ ಕಿರಿಯ ಅಧಿಕಾರಿಗಳನ್ನು ಕಳುಹಿಸಿದವರಿಗೆ ಕಾರಣ ಕೇಳಿ ನೋಟಿಸ್ ನೀಡಲು ತಿಳಿಸಲಾಯಿತು.

ಟಿಎಚ್‍ಒ ಡಾ. ತನುಜಾ ಮಾತನಾಡಿ, ಆರು ವರ್ಷಗಳಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರ ಸೇವೆ ದೊರೆತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದರು.

ಮುಂದಿನ ಸಭೆಗೆ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಖುದ್ದಾಗಿ ಹಾಜರಿರಬೇಕು. ಸರ್ಕಾರಿ ಸೇವೆಗಾಗಿ ಸಾರ್ವಜನಿಕರು ಅಲೆದಾಡಬಾರದು. ಜನರಿಗೆ ಮೂಲಸೌಕರ್ಯ ಒದಗಿಸಲು ಸದಾ ಸಿದ್ಧವಾಗಿರಬೇಕು ಎಂದು ಅಧಿಕಾರಿಗಳಿಗೆ ಈಶ್ವರ ಉಳ್ಳಾಗಡ್ಡಿ ಸೂಚಿಸಿದರು.

ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ ತುರ್ಕಾಣಿ, ಹಳಿಯಾಳ ಬಸ್ ಡಿಪೊ ವ್ಯವಸ್ಥಾಪಕ ಆರ್.ಎಸ್.ರೂಗಿ, ನೀರಾವರಿ ಇಲಾಖೆ  ಎಂಜಿನಿಯರ್‌ ರವಿಚಂದ್ರ ಪಾಟೀಲ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮಗದುಮ್ ಇದ್ದರು.

ಭೇಟಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿದ ಈಶ್ವರ ಉಳ್ಳಾಗಡ್ಡಿ, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಮತ್ತು ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.