ADVERTISEMENT

ಅಮರಗೋಳ | ಗಿಜಿಗುಡುವ ಮಾರುಕಟ್ಟೆ: ಲಕ್ಷಾಂತರ ವಹಿವಾಟು

ಎಲ್‌.ಮಂಜುನಾಥ
Published 9 ಜೂನ್ 2025, 6:38 IST
Last Updated 9 ಜೂನ್ 2025, 6:38 IST
ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ರೈತರು, ಗ್ರಾಹಕರಿಂದ ತುಂಬಿತ್ತು
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ರೈತರು, ಗ್ರಾಹಕರಿಂದ ತುಂಬಿತ್ತು –ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಜಗಜ್ಯೋತಿ ಬಸವೇಶ್ವರ ಮಾರುಕಟ್ಟೆಯ ಸಗಟು ತರಕಾರಿ ಮಾರಾಟ ವಿಭಾಗವು ಸೋಮವಾರ ಹೊರುತುಪಡಿಸಿ ನಿತ್ಯ ನಸುಕಿನ 3 ಗಂಟೆಗೆ ತೆರೆದುಕೊಳ್ಳುತ್ತದೆ. ಅಪಾರ ಸಂಖ್ಯೆಯಲ್ಲಿ ರೈತರು ವಾಹನಗಳಲ್ಲಿ ಲೋಡುಗಟ್ಟಲೇ ಸೊಪ್ಪು, ತರಕಾರಿಯನ್ನು ಹೊತ್ತು ಇಲ್ಲಿಗೆ ಬರುತ್ತಾರೆ. 

ಮಹಾರಾಷ್ಟ್ರದ ಪುಣೆಯಿಂದ ಅಲ್ಲದೇ ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ, ಕುಂದಗೋಳದಿಂದ ರೈತರು ಬರುತ್ತಾರೆ. ಬೆಳಗಾವಿ, ಸವದತ್ತಿ, ಘಟಪ್ರಭ, ಗೋಕಾಕ್‌, ಬಾಗಲಕೋಟೆ, ವಿಜಯಪುರ, ಹಾವೇರಿ, ಉತ್ತರ ಕನ್ನಡ, ಕೋಲಾರ ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕೃಷಿಕರು ಬರುತ್ತಾರೆ. ದಲ್ಲಾಳಿಗಳ ಜೊತೆ ಚೌಕಾಶಿ ನಡೆಸಿ, ನಿಗದಿತ ದರಕ್ಕೆ ಉತ್ಪನ್ನಗಳನ್ನು ಮಾರುತ್ತಾರೆ.

ಟೊಮೆಟೊ, ಹಸಿ ಮೆಣಸಿನಕಾಯಿ, ಕ್ಯಾರೇಟ್‌, ಬೀನ್ಸ್‌, ಎಲೆ ಕೋಸು, ಸೀಮೆ ಬದನೆಕಾಯಿ, ಬದನೆಕಾಯಿ, ಜವಳಿಕಾಯಿ, ಸೌತೆಕಾಯಿ, ನೀರು ಸೌತೆಕಾಯಿ, ಆಲೂಗಡ್ಡೆ, ಮೂಲಂಗಿ, ಬಗೆ ಬಗೆಯ ಸೊಪ್ಪು, ಈರುಳ್ಳಿ, ಹೀರೇಕಾಯಿ, ಡಬ್ಬಿ ಮೆಣಸಿನಕಾಯಿ, ನುಗ್ಗೆಕಾಯಿ, ಬೀಟ್ರೂಟ್, ಬೆಂಡೆಕಾಯಿ... ಹೀಗೆ ಹತ್ತಾರು ಬಗೆಯ ತರಕಾರಿಗಳ ಹರಾಜು‌‌ ಹಾಗೂ ಸಗಟು ವ್ಯಾಪಾರ ಪ್ರಕ್ರಿಯೆಯು ನಿತ್ಯ ಬೆಳಿಗ್ಗೆ 6 ರಿಂದ 10ರವರೆಗೆ ಇರುತ್ತದೆ.

ADVERTISEMENT

ಸಗಟು, ಚಿಲ್ಲರೆ ವ್ಯಾಪಾರಿಗಳ ದಂಡು: 

ಮುಂಜಾನೆ ಆರಂಭವಾಗುವ ಇಲ್ಲಿನ ಮಾರುಕಟ್ಟೆಯಲ್ಲಿ ಸಗಟು ದರದಲ್ಲಿ ತರಕಾರಿ ಖರೀದಿಸಲು ನಗರ ಸೇರಿ ಸುತ್ತಮುತ್ತಲಿನ ಜಿಲ್ಲೆಗಳ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ಇಲ್ಲಿಗೆ ಲಗ್ಗೆಯಿಟ್ಟು, ಸಗಟು ದರದಲ್ಲಿ ತರಕಾರಿ ಖರೀದಿಸಿ, ಆಟೊ, ಟಂಟಂ ವಾಹ‌ನಗಳಲ್ಲಿ ತುಂಬಿಕೊಂಡು ನಗರ, ಬಡಾವಣೆ ಪ್ರದೇಶಗಳಲ್ಲಿ ಮಾರಲು ತೆರಳುತ್ತಾರೆ.

ಟೊಮೆಟೊ, ಹಸಿಮೆಣಸಿನಕಾಯಿ, ಕ್ಯಾರೆಟ್‌, ಸೌತೆಕಾಯಿ, ಬದನೆಕಾಯಿ, ಜವಳಿಕಾಯಿ ಸೇರಿ ಕೆಲ ತರಕಾರಿಗಳನ್ನು ಇಲ್ಲಿ 3 ರಿಂದ 10 ಕೆಜಿಯವರೆಗೆ ಪ್ಲಾಸ್ಟಿಕ್‌ ಡಬ್ಬಿಗಳಲ್ಲಿ ತುಂಬಿ ಸಗಟು ದರದಲ್ಲಿ ಮಾರುತ್ತಾರೆ.  ಇದು ಚಿಲ್ಲರೆ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ. ಗ್ರಾಹಕರು ಕನಿಷ್ಠ 2 ಕೆಜಿ ತರಕಾರಿ ಖರೀದಿಸಬೇಕು. ಪ್ರತಿ ತರಕಾರಿಯು ಗುಣಮಟ್ಟದ ಆದಾರದ ಮೇಲೆ ಅದರ ಬೆಲೆಯನ್ನು ನಿಗದಿ ಪಡಿಸಲಾಗುತ್ತದೆ.

ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ತರಕಾರಿ ಮಾರಾಟ –ಪ್ರಜಾವಾಣಿ ಚಿತ್ರ: ಗುರು ಹಬೀಬ

ನಿತ್ಯ ₹20 ಲಕ್ಷಕ್ಕೂ ಹೆಚ್ಚು ವಹಿವಾಟು:

‘ಇಲ್ಲಿನ ಎಪಿಎಂಸಿಗೆ ನಿತ್ಯ ಧಾರವಾಡ ಜಿಲ್ಲೆಯ ಕಲಘಟಗಿ, ನೂಲ್ವಿ, ಮಿಶ್ರಿಕೋಟೆ, ನವಲೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಲು ಇಲ್ಲಿಗೆ ಬರುತ್ತಾರೆ. ರೈತರು, ದಲ್ಲಾಳಿಗಳು, ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು ಸೇರಿ ನಿತ್ಯ ಬೆಳಿಗ್ಗೆ 6ರಿಂದ 10ರವರೆಗಿನ ಅವಧಿಯಲ್ಲಿ 5 ಸಾವಿರಕ್ಕೂ ಹೆಚ್ಚು ಜನರಿಂದ ತರಕಾರಿ ಮಾರುಕಟ್ಟೆ ತುಂಬಿರುತ್ತದೆ. ಈ ಸಮಯದಲ್ಲಿ ಅಂದಾಜು ₹20ಲಕ್ಷ ವಹಿವಾಟು ನಡೆಯುತ್ತದೆ. ಉತ್ತಮ ಬೆಲೆ ಬಂದರೆ, ರೈತರಿಗೆ ಹಾಗೂ ನಮಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಎಪಿಎಂಸಿಯ ತರಕಾರಿ ಸಗಟು ವ್ಯಾಪಾರಿ ಇಮ್ತಿಯಾಜ್‌ ಸವಣೂರು. 

‘ಎಪಿಎಂಸಿಯ ಮತ್ತೊಂದು ಬದಿಯಲ್ಲಿ ಒಣಮೆಣಸಿನಕಾಯಿ, ವಿವಿಧ ತಳಿಯ ಮಾವಿನ ಹಣ್ಣುಗಳ ವ್ಯಾಪಾರವೂ ನಡೆಯುತ್ತಿದೆ. ಸೀಸನ್‌ ಪ್ರಕಾರ ತರಕಾರಿ ಹಾಗೂ ಹಣ್ಣುಗಳ ವ್ಯಾಪಾರವೂ ಇಲ್ಲಿ ಜೋರಾಗಿ ನಡೆಯುತ್ತದೆ. ಇಲ್ಲಿಂದ ಬೇರೆ ಬೇರೆ ಜಿಲ್ಲೆಗಳಿಗೂ ರವಾನೆಯಾಗುತ್ತದೆ’ ಎನ್ನುತ್ತಾರೆ ಅವರು. 

ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರು ತರಕಾರಿ ಖರೀದಿಸಿ ಆಟೊದಲ್ಲಿ ಹಾಕುತ್ತಿರುವುದು

ಉತ್ತಮ ಲಾಭ:  

ಕೋಲಾರದಿಂದ ನಿತ್ಯ 3–4 ಲಾರಿಗಳಲ್ಲಿ ಟೊಮೆಟೊ ಬರುತ್ತದೆ. ಇಲ್ಲಿಂದ ಸ್ಥಳೀಯ ವ್ಯಾಪಾರಿಗಳು ಬೇರೆ ಜಿಲ್ಲೆಗಳಿಗೂ ಕಳುಹಿಸುತ್ತಾರೆ. ಶನಿವಾರ ಬಕ್ರಿದ್‌ ಹಬ್ಬ ಇರುವ ಕಾರಣ ಟೊಮೆಟೊ ಸೇರಿದಂತೆ ಇತರೆ ತರಕಾರಿ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಶುಕ್ರವಾರದ ಸಗಟು ಮಾರುಕಟ್ಟೆಯ ಪ್ರಕಾರ 3ಕೆಜಿಯ ಟೊಮೆಟೊ ಡಬ್ಬಿಗೆ ₹60ರಿಂದ ₹80ರ ತನಕ ಮಾರಾಟವಾಗಿದೆ. ಚಿಲ್ಲರೆ ವ್ಯಾಪಾರಿಗಳು ಇನ್ನೂ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಾರೆ. ಪೂಣೆಯಿಂದ ಬರುವ ಈರುಳ್ಳಿಯು ಗಾತ್ರ ಹಾಗೂ ಗುಣಮಟ್ಟದ ಆಧಾರದ ಮೇಲೆ 10ಕೆಜಿಗೆ ₹160ರಿಂದ ₹250ರ ತನಕ ಮಾರಾಟವಾಗಿದೆ. ಸೊಪ್ಪಿನ ಬೆಲೆಯು ದುಬಾರಿಯಾಗಿದ್ದು, ಕೊತ್ತೊಂಬರಿ, ಪಾಲಕ್, ಮೆಂತೆ ಸೊಪ್ಪು ಒಂದು ಕಟ್ಟಿಗೆ ₹10ಕ್ಕೆ ಮಾರಾಟವಾಗಿವೆ. ನುಗ್ಗೆಕಾಯಿ ಕೆಜಿಗೆ ₹150ಕ್ಕೆ ಮಾರಾಟವಾಗಿದೆ. ವಾರದಿಂದ ಬೀನ್ಸ್‌ ಹಾಗೂ ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದೆ. 10ಕೆಜಿ ಬೀನ್ಸ್‌ ₹1,200ರಿಂದ ₹1,500ರ ತನಕ ಸಗಟು ದರದಲ್ಲಿ ಮಾರಾಟವಾಗುತ್ತಿದೆ. ಕೋಲಾರದ ಟೊಮೆಟೊಗೆ ಬೇಡಿಕೆಯಿದ್ದು, 24ಕೆಜಿ ಬಾಕ್ಸ್‌ ₹400ರಿಂದ ₹500 ತನಕ ಮಾರಾಟವಾಗಿದೆ. ತರಕಾರಿ ದರವು ನಿತ್ಯ ಬದಲಾವಣೆಯಾಗುತ್ತಲೇ ಇರುತ್ತದೆ. ಸ್ಥಳೀಯ ಚಿಲ್ಲರೆ ವ್ಯಾಪಾರಿಗಳು ನಮ್ಮಲ್ಲಿ ಸಗಟು ದರದಲ್ಲಿ ಖರೀದಿಸಿ, ಚಿಲ್ಲರೆಯಾಗಿ ಮಾರಾಟ ಮಾಡಿ, ಉತ್ತಮ ಲಾಭ ಪಡೆಯುತ್ತಾರೆ’ ಎನ್ನುತ್ತಾರೆ ಅವರು. 

ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ವೃದ್ಧರೊಬ್ಬರು ತರಕಾರಿಯನ್ನು ಗಾಡಿಯಲ್ಲಿ ಹಾಕಿಕೊಂಡು ಹೋಗಿದ್ದು ಕಂಡು ಬಂದಿತು   

ಮಹಿಳೆಯೊಬ್ಬರು ವಾಹನದಲ್ಲಿ ತರಕಾರಿಯನ್ನು ತೆಗೆದುಕೊಂಡು ಹೋಗುವಾಗ ಕಂಡಿದ್ದು ಹೀಗೆ.... –

ತರಕಾರಿ ಹರಾಜು ಸಗಟು ವ್ಯಾಪಾರದ ಪ್ರಕ್ರಿಯೆ ಮುಗಿದ ನಂತರ ಸಂಬಂಧಿಸಿದ ರೈತರಿಗೆ ಅರ್ಧ ಹಣವನ್ನು ಕೊಡುತ್ತೇವೆ. ಉಳಿದ ಹಣವನ್ನು ಮತ್ತೊಂದು ದಿನ ಕೊಡುತ್ತೇವೆ. ಇದು ಹೀಗೆಯೇ ನಡೆಯುತ್ತದೆ ‌
ಇಮ್ತಿಯಾಜ್‌ ಸವಣೂರು ತರಕಾರಿ ಸಗಟು ವ್ಯಾಪಾರಿ ಎಪಿಎಂಸಿ
ಗೋಕಾಕ್‌ನ ಮಮದಾಪುರ ಗ್ರಾಮದಿಂದ ಬೀಟ್ರೂಟ್ ತರುತ್ತೇವೆ. ದಲ್ಲಾಳಿಗಳು ಹೋಲ್‌ಸೆಲ್‌ನಲ್ಲಿ ಖರೀದಿಸುತ್ತಾರೆ. ಲಾಭ ಅಷ್ಟಕಷ್ಟೆ. 6 ಕ್ವಿಂಟಾಲ್‌ ಬೀಟ್ರೊಟ್‌ ಮಾರಾಟ ಮಾಡಿದೆ. ₹5 ಸಾವಿರ ಕೊಟ್ಟಿದ್ದಾರೆ. 
ಶಂಕರ್‌ ರೈತ ಗೋಕಾಕ್‌. 
ಎಪಿಎಂಸಿಯ ತರಕಾರಿ ವಿಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಮುಖ್ಯ ರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಲ್ಲ. ನೀರಿನ ಟ್ಯಾಂಕ್‌ ಇದೆ. ಆದರೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಪೋಲಿಸ್‌ ಠಾಣೆಯನ್ನು ಆರಂಭಿಸಬೇಕು. 
ವಿಶ್ವನಾಥ ತರಕಾರಿ ವ್ಯಾಪಾರಿ. ಎಪಿಎಂಸಿ
‘ಲಕ್ಷಾಂತರ ವಹಿವಾಟು: ಅಭಿವೃದ್ಧಿ ಆಗಬೇಕಿದೆ’
‘ಕಳೆದ ಎರಡು ವರ್ಷಗಳಿಂದ ಅಮರಗೋಳದ ಎಪಿಎಂಸಿ ಅಧ್ಯಕ್ಷ ಸ್ಥಾನ ಖಾಲಿಯಿದ್ದು ಇದುವರೆಗೆ ಚುನಾವಣೆ ನಡೆದಿಲ್ಲ. ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಎಪಿಎಂಸಿಯ ನಿತ್ಯ ಲಕ್ಷಾಂತರ ವಹಿವಾಟು ನಡೆಯುತ್ತದೆ. ಇನ್ನೂ ಕೆಲ ಅಭಿವೃದ್ಧಿ ಕಾರ್ಯ ಆಗಬೇಕಿದೆ. ಮುಖ್ಯ ರಸ್ತೆ ಸೇರಿದಂತೆ ಜನದಟ್ಟಣೆಯ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪೊಲೀಸ್‌ ಸ್ಟೇಷನ್‌ ಆರಂಭಿಸಬೇಕು ಎಂಬ ಬೇಡಿಕೆಯೂ ಇದೆ. ಆದರೆ ಇದ್ಯಾವುದೂ ಆಗಿಲ್ಲ’ ಎನ್ನುತ್ತಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ ಕಿರೇಸೂರ. 
ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ: ಶ್ರೀಧರ್‌ ಮನ್ನೂರು
‘ಅಮರಗೋಳದ ಎಪಿಎಂಸಿಯಲ್ಲಿ ನಿತ್ಯ 30ಕ್ಕೂ ಹೆಚ್ಚು ಟನ್‌ ತರಕಾರಿ ಮಾರಾಟವಾಗುವ ಮೂಲಕ ಅಂದಾಜು ₹25 ಲಕ್ಷ ವಹಿವಾಟು ನಡೆಯುತ್ತದೆ. ರೈತರಿಗೆ ಹಾಗೂ ಹಮಾಲರಿಗಾಗಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕಿದೆ. ಪೊಲೀಸ್‌ ಠಾಣೆ ಕಟ್ಟಡ ನಿರ್ಮಾಣಕ್ಕಾಗಿ ಸಮಿತಿಯಿಂದ ಜಾಗ ನೀಡಲಾಗಿದೆ. ‍‍‍ಪೊಲೀಸ್‌ ಇಲಾಖೆಯವರು ಕಟ್ಟಡ ನಿರ್ಮಿಸಬೇಕು. ಎಪಿಎಂಸಿ ಪ್ರಾಂಗಣವು 434.04 ಎಕರೆ ವಿಸ್ತೀರ್ಣ ಹೊಂದಿದ್ದು ಈಗಾಗಲೇ ಪ್ರಾಂಗಣದ 3 ಗೇಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮಾರುಕಟ್ಟೆ ಪ್ರಾಂಗಣದ ವಿವಿಧ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ’ ಎನ್ನುತ್ತಾರೆ ಅಮರಗೋಳದ ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ಶ್ರೀಧರ್‌ ಮನ್ನೂರು.  ‘ಎಪಿಎಂಸಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸುವುದು ಸರ್ಕಾರದ ನಿರ್ಣಯ. ಮಾರುಕಟ್ಟೆ ಪ್ರಾಂಗಣದಲ್ಲಿ ರೈತಭವನ ಶುದ್ಧ ಕುಡಿಯುವ ನೀರಿನ ಘಟಕ ಶೌಚಾಲಯ ವ್ಯವಸ್ಥೆ ಹಮಾಲರಿಗೆ ವಸತಿ ಸೌಲಭ್ಯ ಸೇರಿದಂತೆ ಕೆಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಲು ಕ್ರಮವಹಿಸಲಾಗಿದೆ’ ಎನ್ನುತ್ತಾರೆ ಅವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.