ADVERTISEMENT

ಅಂಚಟಗೇರಿ ಮೇಯರ್, ಉಮಾ ಉಪಮೇಯರ್

ಮೂರು ವರ್ಷಗಳ ನಂತರ ಆಡಳಿತ ಮಂಡಳಿ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:49 IST
Last Updated 29 ಮೇ 2022, 4:49 IST
ಹುಬ್ಬಳ್ಳಿ–ಧಾರವಾಡ ನೂತನ ಮೇಯರ್‌ ಈರೇಶ ಅಂಚಟಗೇರಿ ಮತ್ತು ಉಪಮೇಯರ್‌ ಉಮಾ ಮುಕುಂದ ಅವರನ್ನು ಬಿಜೆಪಿ ಮುಖಂಡರು ಅಭಿನಂದಿಸಿದರು. ಶಾಸಕರಾದ ಅಮೃತ ದೇಸಾಯಿ, ಪ್ರದೀಪ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಎಸ್‌.ವಿ. ಸಂಕನೂರ, ಜಗದೀಶ ಶೆಟ್ಟರ್‌, ಅರವಿಂದ ಬೆಲ್ಲದ ಇದ್ದಾರೆ
ಹುಬ್ಬಳ್ಳಿ–ಧಾರವಾಡ ನೂತನ ಮೇಯರ್‌ ಈರೇಶ ಅಂಚಟಗೇರಿ ಮತ್ತು ಉಪಮೇಯರ್‌ ಉಮಾ ಮುಕುಂದ ಅವರನ್ನು ಬಿಜೆಪಿ ಮುಖಂಡರು ಅಭಿನಂದಿಸಿದರು. ಶಾಸಕರಾದ ಅಮೃತ ದೇಸಾಯಿ, ಪ್ರದೀಪ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಎಸ್‌.ವಿ. ಸಂಕನೂರ, ಜಗದೀಶ ಶೆಟ್ಟರ್‌, ಅರವಿಂದ ಬೆಲ್ಲದ ಇದ್ದಾರೆ   

ಹುಬ್ಬಳ್ಳಿ: ಮೂರು ವರ್ಷಗಳಿಂದ ಅಧಿಕಾರಿಗಳ ಆಡಳಿತದಲ್ಲಿದ್ದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಶನಿವಾರದಿಂದ ಜನಪ್ರತಿನಿಧಿಗಳ ತೆಕ್ಕೆಗೆ ಬಂದಿದೆ.ಪಾಲಿಕೆ ಚುನಾಯಿತ ಪ್ರತಿನಿಧಿಗಳಾಗಿ ಒಂಬತ್ತು ತಿಂಗಳ ನಂತರ ಸದಸ್ಯರಿಗೆ ಅಧಿಕಾರ ದೊರಕಿದೆ.

ಶನಿವಾರ ನಡೆದ ಮೇಯರ್‌, ಉಪಮೇಯರ್‌ ಚುನಾವಣೆಯಲ್ಲಿ ಧಾರವಾಡದ ವಾರ್ಡ್‌ ನಂ. 3ರ ಸದಸ್ಯ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಪ್ತ ಈರೇಶ ಅಂಚಟಗೇರಿ 40ನೇ ಮೇಯರ್‌ ಹಾಗೂ ಹುಬ್ಬಳ್ಳಿಯ ವಾರ್ಡ್‌ ನಂ. 44ರ ಉಮಾ ಮುಕುಂದ ಉಪಮೇಯರ್‌ ಆಗಿ ಆಯ್ಕೆಯಾದರು.

ಬಿಜೆಪಿಯ ಈರೇಶ ಅಂಚಟಗೇರಿ 50 ಮತ ಪಡೆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ಮಯೂರ ಮೋರೆ 35 ಮತ ಪಡೆದರು. ಎಐಎಂಐಎಂ ಅಭ್ಯರ್ಥಿ ನಜೀರ್‌ಅಹ್ಮದ್‌ ಹೊನ್ಯಾಳ ಮೂರು ಮತ ಪಡೆದರು.‌ ಉಪಮೇಯರ್‌ ಸ್ಥಾನದ ಬಿಜೆಪಿಯ ಉಮಾ ಮುಕುಂದ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ದೀಪಾ ನೀರಕಟ್ಟಿ ಅವರನ್ನು 16 ಮತಗಳ ಅಂತರದಿಂದ ಸೋಲಿಸಿದರು. ಉಮಾ ಅವರು 51 ಮತಗಳನ್ನು, ದೀಪಾ 35 ಮತಗಳನ್ನು‌ ಪಡೆದರು. ಎಐಎಂಐಎಂ ಅಭ್ಯರ್ಥಿ ವಹಿದಾಖಾನಂ ಕಿತ್ತೂರು ಕೇವಲ ಮೂರು ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್ ಘೋಷಿಸಿದರು

ADVERTISEMENT

ಮೇಯರ್‌, ಉಪಮೇಯರ್‌ ಆಯ್ಕೆ ನಂತರ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಾಲಿಕೆ ಆವರಣದಲ್ಲಿ ಮೇಯರ್‌, ಉಪಮೇಯರ್‌ ಅವರಿಗೆ ಗುಲಾಲು ಎರಚಿ ಶುಭ ಕೋರಿದರು.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಸ್ಥಳಿಯ ಮುಖಂಡರ ಸಹಕಾರ ಮತ್ತು ಬೆಂಬಲದಿಂದ ಸರ್ವಾಮುತದೊಂದಿಗೆ ಮೇಯರ್‌ ಆಗಿ ಆಯ್ಕೆಯಾಗಿದ್ದೇನೆ. ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ದು, ಅವರ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಇಷ್ಟು ದಿನ ಅಧಿಕಾರಿಗಳ ಕೈಲಿ ಪಾಲಿಕೆ ಆಡಳಿತವಿದ್ದರಿಂದ ಜನರ ಸಮಸ್ಯೆ ಪರಿಹಾರದಿಂದ ದೂರವಾಗಿತ್ತು. ಕೂಡಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ’ ಎಂದು ನೂತನ ಮೇಯರ್‌ ಈರೇಶ ಅಂಚಟಗೇರಿ ಹೇಳಿದರು.

‘ಪಾಲಿಕೆಯಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿ ಬರುತ್ತಿವೆ. ಅವುಗಳಿಗೆ ಕಡಿವಾಣ ಹಾಕಿ ಉತ್ತಮ ಆಡಳಿತ ನೀಡಲು ಎಲ್ಲ ಸದಸ್ಯರ ಬೆಂಬಲ ಮತ್ತು ಅಧಿಕಾರಿಗಳ ಸಹಕಾರ ಪಡೆಯುತ್ತೇನೆ. ಧಾರವಾಡದಲ್ಲಿ ಪ್ರತ್ಯೇಕ ಪಾಲಿಕೆ ಸ್ಥಾಪನೆ ಕುರಿತು ಕೂಗು ಕೇಳಿಬರುತ್ತಿದ್ದು, ಆ ಕುರಿತು ಅಲ್ಲಿಯ ಸ್ಥಳೀಯ ಮುಖಂಡರೊಂದಿಗೆ ಹಾಗೂ ಜಿಲ್ಲೆಯ ಮುಖಂಡರೊಂದಿಗೆ ಚರ್ಚಿಸಲಾಗುವುದು’ ಎಂದರು.

ಮಹಾನಗರ ಪಾಲಿಕೆಯ 82 ಚುನಾಯಿತ ಸದಸ್ಯರ ಜೊತೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಜಗದೀಶ ಶೆಟ್ಟರ್, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್ ಮತ ಚಲಾಯಿಸಿದರು.

ಚುನಾವಣಾ ಪ್ರಕ್ರಿಯೆ: ಬೆಳಿಗ್ಗೆ 9.30ರಿಂದ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಈರೇಶ ಅಂಚಟಗೇರಿ, ಕಾಂಗ್ರೆಸ್‌ನಿಂದ ಮಯೂರ ಮೋರೆ, ಎಐಎಂಐಎಂನಿಂದ ನಜೀರ್‌ಅಹ್ಮದ್ ಹೊನ್ಯಾಳ ಉಮೇದುವಾರಿಕೆ ಸಲ್ಲಿಸಿದರೆ, ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಉಮಾ ಮುಕುಂದ, ಕಾಂಗ್ರೆಸ್‌ನಿಂದ ದೀಪಾ ನೀರಲಕಟ್ಟಿ, ಎಐಎಂಐಎಂನಿಂದ ವಹೀದಾಖಾನಂ ಕಿತ್ತೂರ ನಾಮಪತ್ರ ಸಲ್ಲಿಸಿದ್ದರು. ಸದಸ್ಯರ ಕೈ ಎತ್ತಿಸುವ ಮೂಲಕ ಚುನಾವಣೆ ಮಾಡಲಾಯಿತು.

ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಗೀತಾ ಕೌಲಗಿ, ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಚುನಾವಣೆ ಪ್ರಕ್ರಿಯೆ ನಡೆಸಿದರು. ಪಾಲಿಕೆ ಆವರಣದಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.