ADVERTISEMENT

ಮತ್ತೊಮ್ಮೆ ಮನವಿ, ಮೂರು ದಿನಗಳ ಗಡುವು...

ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ; ವಿವಿಧ ಸಂಘಟನೆಗಳ ಸಮಿತಿ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 14:46 IST
Last Updated 15 ಆಗಸ್ಟ್ 2022, 14:46 IST
ಹುಬ್ಬಳ್ಳಿ ಮೂರುಸಾವಿರ ಮಠದ ಸಭಾಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು
ಹುಬ್ಬಳ್ಳಿ ಮೂರುಸಾವಿರ ಮಠದ ಸಭಾಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು   

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಪ್ರಸ್ತುತ ವರ್ಷ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಒಪ್ಪಿಗೆ ನೀಡುವಂತೆ ವಿವಿಧ ರೀತಿಯಲ್ಲಿ ಒತ್ತಡ ಹೇರುವ ಹಾಗೂ ಪಾಲಿಕೆ ಆಯುಕ್ತರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿ, ಅದರ ಪ್ರತಿಯನ್ನು ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿ ಮೂರು ದಿನ ಗಡುವು ನೀಡುವುದು. ನಂತರ ಹೋರಾಟದ ಕುರಿತು ಅಂತಿಮ ರೂಪರೇಷೆ ಸಿದ್ಧಪಡಿಸುವುದು...

ನಗರದ ಮೂರುಸಾವಿರಮಠದ ಸಭಾಭವನದಲ್ಲಿ ಸೋಮವಾರ ನಡೆದ ವಿವಿಧ ಹಿಂದೂಪರ ಸಂಘಟನೆ ಮತ್ತು ಗಣೇಶೋತ್ಸವ ಸಮಿತಿ ಸಭೆಯಲ್ಲಿ ತೆಗೆದುಕೊಂಡ ಒಮ್ಮತದ ನಿರ್ಣಯಗಳು ಇವು. ಗಜಾನನ ಉತ್ಸವ ಸಮಿತಿ, ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ, ರಾಣಿ ಚನ್ನಮ್ಮ ಗಜಾನನೋತ್ಸವ ಸಮಿತಿ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು, ಸಂಘಟನೆಯನ್ನು ಬಲಿಷ್ಠಗೊಳಿಸಿ, ಒಗ್ಗಟ್ಟಾಗಿ ಹೋರಾಡಬೇಕು. ಎಷ್ಟೇ ಕಷ್ಟ ಎದುರಾದರೂ ಇಟ್ಟ ಹೆಜ್ಜೆ ಹಿಂದೆ ಇಡಬಾರದು. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದೇ ನಮ್ಮ ಅಂತಿಮ ಧ್ಯೇಯವಾಗಿರಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.

ರಾಣಿ ಚನ್ನಮ್ಮ ಗಜಾನನೋತ್ಸವ ಸಮಿತಿಯ ಮುಖ್ಯಸ್ಥ ಹನುಮಂತ ನಿರಂಜನ, ‘ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡುವಂತೆ ಈಗಾಗಲೇ ಪಾಲಿಕೆ ಆಯುಕ್ತರಿಗೆ ಮನವಿ ನೀಡಲಾಗಿದೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಸ್ಲಿಂ ಸಮುದಾಯದವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದಾದರೆ, ನಮಗೆ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಯಾಕೆ ಅವಕಾಶವಿಲ್ಲ. ಪಾಲಿಕೆ ದ್ವಂದ್ವನೀತಿ ಅನುಸರಿಸುವುದು ಬಿಡಬೇಕು’ ಎಂದರು.

ADVERTISEMENT

‘ರಾಣಿ ಚನ್ನಮ್ಮ ಗಜಾನನೋತ್ಸವ ಸಮಿತಿ ರಚನೆಯಾಗಿದ್ದು, ಹೋರಾಟದ ಮನೋಭಾವದ ವ್ಯಕ್ತಿಗಳು ಸೇರಿಕೊಳ್ಳಬಹುದು. ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ನಾವು ಮುಂದಾಗುತ್ತಿಲ್ಲ. ವಿವಾದ ಬೇಡ ಎನ್ನುವುದಾದರೆ ಮುಸ್ಲಿಮರು ನಮ್ಮ ಜೊತೆ ಸೇರಿ, ಸೌಹಾರ್ದಕ್ಕೆ ನಾಂದಿಯಾಗಲಿ. ಗಣೇಶ ಉತ್ಸವ ಆಚರಿಸಲು ಅವಕಾಶ ನೀಡಿ ಎಂದು ಪಾಲಿಕೆ ಆಯುಕ್ತರಿಗೆ ಅವರಾಗಿಯೇ ಪ್ರಸ್ತಾವ ಸಲ್ಲಿಸಲಿ. ಅವರ ಈ ನಡೆ ರಾಜ್ಯಕ್ಕೆ ಮಾದರಿಯಾಗಲಿ. ನಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಭಾವಿಸಿದರೆ, ಮುಂದಿನ ಯಾವುದೇ ಹೋರಾಟಕ್ಕೂ ನಾವು ಸಿದ್ಧ’ ಎಂದು ಎಚ್ಚರಿಸಿದರು.

ಮುಖಂಡ ಆನಂದ ಸಂಶೀಕರ, ‘ಹುಬ್ಬಳ್ಳಿ–ಧಾರವಾಡ ಜನತೆ ಸೇರಿಕೊಂಡು ಒಗ್ಗಟ್ಟು ಪ್ರದರ್ಶಿಸಬೇಕು. ಪಾಲಿಕೆ ಅಧಿಕಾರಿಗಳಿಗೆ, ಸ್ಥಳೀಯ ಜನಪ್ರತಿನಿಧೀಗಳಿಗೆ ಹಾಗೂ ಸಚಿವರುಗಳಿಗೆ ಒತ್ತಡ ಹೇರುವ ಕಾರ್ಯ ನಡೆಯಬೇಕು’ ಎಂದರು.

‘ನಾವ್ಯಾರು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಅದಕ್ಕೆ ಪಾಲಿಕೆ ಆಯುಕ್ತರು ಸಹ ಅವಕಾಶ ನೀಡದೆ ಗಣೇಶ ಉತಸ್ವ ಆಚರಿಸಲು ಅನುಮತಿ ನೀಡಬೇಕು’ ಎಂದು ಹಿಂದೂ ಕಾರ್ಯಕರ್ತ ಸಂತೋಷ ಕಟಾರೆ ಒತ್ತಾಯಿಸಿದರು. ಹಿಂದೂ ಕಾರ್ಯಕರ್ತರಾದ ವಿಶ್ವನಾಥ ಕುಲಕರ್ಣಿ, ಅಪ್ಪಸಾಹೇಬ್ ಕಟ್ಟಿ, ಅಭಿಷೇಕ, ಸಾಗರ ಪವಾರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ: ಕಟಾರೆ

‘ಈದ್ಗಾ ಮೈದಾನಕ್ಕೆ ಮುಸ್ಲಿಮರಿಗೆ ಇರುವಷ್ಟೇ ಅಧಿಕಾರ ಹಿಂದೂಗಳಿಗೂ ಇದೆ. ಕೆಲವರು ಈ ಮೈದಾನವನ್ನು ರಾಜಕೀಯ ಹೋರಾಟಕ್ಕೆ ಬಳಕೆ ಮಾಡಿಕೊಂಡರು. ಈಗ ನಮ್ಮ ಮನೆಯಲ್ಲಿ ನಾವೇ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ. ಪಕ್ಷಾತೀತವಾಗಿ ಹೋರಾಟ ನಡೆಸಬೇಕು. ಗಣೇಶಮೂರ್ತಿ ಪ್ರತಿಷ್ಠಾಪಿಸುವವರೆಗೂ ನಾವು ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ. ಹೋರಾಟದ ರೂಪರೇಷೆ ಸಿದ್ಧಪಡಿಸಬೇಕು. ಕಾರ್ಯಕರ್ತರ ಪಡೆ ಮತ್ತಷ್ಟು ದೊಡ್ಡದಾಗಬೇಕು. ಕಾನೂನಿನ ಚೌಕಟ್ಟಿನಲ್ಲಿ ಹೋರಾಡಿದರೆ ಭಯಪಡುವ ಅಗತ್ಯವಿಲ್ಲ’ ಎಂದು ಹಿಂದೂಸ್ತಾನ ಜನತಾ ಪಾರ್ಟಿ ಮುಖಂಡ ರಾಘವೇಂದ್ರ ಕಟಾರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.