ADVERTISEMENT

ಸದನದ ಮಾರ್ಗದರ್ಶಕ ಹೊರಟ್ಟಿ: ಸಿದ್ದರಾಮಯ್ಯ

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 4:52 IST
Last Updated 14 ಡಿಸೆಂಬರ್ 2025, 4:52 IST
<div class="paragraphs"><p>ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು. </p></div>

ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.

   

 –ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ‘ಬಸವರಾಜ ಹೊರಟ್ಟಿ ಅವರು ಸಭಾಪತಿಯಾಗಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಎಲ್ಲ ಪಕ್ಷದವರನ್ನು ಸಮಾನವಾಗಿ ಗೌರವದಿಂದ ನೋಡುತ್ತ, ಸದನಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

‘ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಸತತ ಎಂಟು ಬಾರಿ ಗೆದ್ದು 45 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬಸವರಾಜ ಹೊರಟ್ಟಿ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಮ್ಮ ರಾಜಕೀಯ ಅನುಭವದ ಮೂಲಕ ಸದಸ್ಯರಿಗೆ ಸೂಕ್ತ ಮಾಹಿತಿ ನೀಡುತ್ತಿದ್ದಾರೆ. ಸದನದಲ್ಲಿ ಯಾರಿಗೆ ಎಷ್ಟು ಸಮಯ ಮಾತನಾಡಲು ಅವಕಾಶ ನೀಡಬೇಕು ಎನ್ನುವುದನ್ನು ಅರಿತಿರುವ ಅವರು, ಪಕ್ಷಾತೀತವಾಗಿ ಎಲ್ಲರನ್ನೂ ಬೆದರಿಸಿ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮಿಬ್ಬರ ನಡುವೆ ಆತ್ಮೀಯತೆ ಇದ್ದರೂ, ಸಭಾಪತಿ ಸ್ಥಾನಕ್ಕೆ ನ್ಯಾಯ ನೀಡುವಲ್ಲಿ ಎಡವಿಲ್ಲ. ಸ್ನೇಹ ಸಂಬಂಧವಿದೆ ಎಂದು ಉತ್ತೇಜನ ನೀಡುವ ಕೆಲಸವೂ ಮಾಡಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಪಕ್ಷಾತೀತವಾಗಿ ಇಂದು ಹೊರಟ್ಟಿ ಅವರನ್ನು ಸನ್ಮಾನಿಸಿದ್ದೇವೆ. ಅಜಾತಶತ್ರುವಾಗಿರುವ ಅವರು, ಎಲ್ಲ ಪಕ್ಷದವರ ಜೊತೆ ಸ್ನೇಹ, ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹೀಗಿದ್ದಾಗ ಮಾತ್ರ ಇಂಥ ಕಾರ್ಯಕ್ರಮ ನಡೆಸಲು ಸಾಧ್ಯ. ನೇರ, ದಿಟ್ಟ ನುಡಿಯ ರಾಜಕಾರಣಿ ಆಗಿರುವ ಅವರಲ್ಲಿ ಅಧಿಕಾರದ ಮದವಿಲ್ಲ, ಆಡಂಬರವೂ ಇಲ್ಲ. ಪ್ರಜ್ಞಾವಂತರ ವರ್ಗವಾದ ಶಿಕ್ಷಕರ ಮತ ಕ್ಷೇತ್ರದಲ್ಲಿ ಎಂಟು ಬಾರಿ ಗೆದ್ದಿದ್ದಾರೆ ಎಂದರೆ, ಅವರಲ್ಲಿರುವ ಸ್ನೇಹಮಯಿ ಗುಣ ಹಾಗೂ ಮಾಡಿದ ಕೆಲಸವೇ ಕಾರಣ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಹೊರಟ್ಟಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರೆ ಸಾಕು, ಅವರೇ ಎಂಎಲ್‌ಸಿ ಎನ್ನುವುದು ಪಕ್ಕಾ ಆಗಿ ಬಿಡುತ್ತದೆ. 45 ವರ್ಷಗಳವರೆಗೆ ವಿಧಾನಪರಿಷತ್‌ನಲ್ಲಿ ಕೆಲಸ ನಿರ್ವಹಿಸಿ ರಾಜಕೀಯದಲ್ಲಿ ಲಿಮ್ಕಾ ದಾಖಲೆ ಮಾಡಿದ್ದಾರೆ. ಶೀಘ್ರ ಕೋಪಿ, ದೀರ್ಘ ದ್ವೇಷಿಯಲ್ಲದ ವ್ಯಕ್ತಿತ್ವ ಅವರದ್ದಾಗಿದ್ದು, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅವರು ಸಭಾಪತಿಯಾಗಿ  ಮುಂದುವರಿಯುತ್ತಾರೆ ಎನ್ನುವ ಆಶಯ ನಮ್ಮದು’ ಎಂದರು.

‘ಹೊರಟ್ಟಿ ಅವರ ಯಶಸ್ಸಿನ ಗುಟ್ಟು ಸ್ವಾಭಿಮಾನ. ಅದನ್ನು ಅವರು ಎಂದೂ ಬಿಟ್ಟುಕೊಟ್ಟಿಲ್ಲ. ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಅವರು ಎಲ್ಲ ಮುಖ್ಯಮಂತ್ರಿಗಳ ಜೊತೆಯೂ ಜಗಳವಾಡಿದ್ದಾರೆ. ಹಾಗೆಯೇ ಅಷ್ಟೇ ಸ್ನೇಹದಿಂದಲೂ ಇದ್ದಾರೆ. ಅವರು ಸಭಾಪತಿಯಾಗಲು ಈ ಹಿಂದೆ ವಿರೋಧಪಕ್ಷದಲ್ಲಿದ್ದ ಸಿದ್ದರಾಮಯ್ಯ ಅವರ ಸಹಕಾರವೂ ಇತ್ತು. ಸ್ನೇಹದ ಎದುರು ರಾಜಕಾರಣ ಗೌಣವಾಗುತ್ತದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ‘ನಲವತೈದು ವರ್ಷ ವಿಧಾನ ಪರಿಷತ್ತಿನಲ್ಲಿ ಕರ್ತವ್ಯ ನಿರ್ವಹಿಸಿರುವ ಹೊರಟ್ಟಿ ಅವರು, ಅಲ್ಲಿ ಐವತ್ತು ವರ್ಷ ಪೂರ್ಣಗೊಳಿಸಬೇಕು ಎನ್ನುವುದು ನಮ್ಮ ಆಶಯ. ಶಿಕ್ಷಕರಿಗೆ ವಿಶೇಷ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತಂದು ಅವರ ಕಣ್ಮಣಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಗೆಲುವು ಸಾಧಿಸಬೇಕು’ ಎಂದು ಹೇಳಿದರು.

ಕೆಎಲ್‌ಇ ನಿರ್ದೇಶಕ, ಅಭಿನಂದನಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಅವರು ಬಿನ್ನವತ್ತಳೆ ಓದಿ, ಹೊರಟ್ಟಿ ಅವರಿಗೆ ಸಮರ್ಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಪುಷ್ಪವೃಷ್ಟಿ ಮಾಡಿ ಸನ್ಮಾನಿಸಿದರು. ಅಡವಿ ಸಿದ್ದೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಮೇಯರ್‌ ಜ್ಯೋತಿ ಪಾಟೀಲ, ವಿಧಾನಸಭೆ ಮುಖ್ಯ ಸಚೇತಕ ಸಲೀಂ ಅಹ್ಮದ್, ಕೆಎಲ್‌ಇ ನಿರ್ದೇಶಕ, ಅಭಿನಂದನಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಎಫ್.ಎಚ್. ಜಕ್ಕಪ್ಪನವರ, ಎಸ್.ವಿ. ಸಂಕನೂರ, ಉಪ ಮೇಯರ್ ಸಂತೋಷ ಚವ್ಹಾಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಅಭಿನಂದನಾ ಸಮಿತಿ ಗೌರವ ಕಾರ್ಯದರ್ಶಿ ರಾಜಣ್ಣ ಕೊರವಿ, ಪ್ರೊ.‌ಕೆ.ಎಸ್. ಶರ್ಮಾ, ಲಿಂಗರಾಜ ಪಾಟೀಲ, ಮೋಹನ ಲಿಂಬಿಕಾಯಿ, ಶಿವು ಮೆಣಸಿನಕಾಯಿ ಸೇರಿದಂತೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಪೂರ್ವ ಬಸವರಾಜ ಹೊರಟ್ಟಿ ಅವರನ್ನು ಲ್ಯಾಮಿಂಗ್ಟನ್ ಶಾಲೆ ಆವರಣದಿಂದ ನೆಹರೂ ಮೈದಾನದವರೆಗೆ ಶಿಕ್ಷಕರು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಕರೆದುಕೊಂಡು ಬಂದರು.

ಹೊರಟ್ಟಿ ಅವರ ರಾಜಕೀಯ ಸಾಧನೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಮುಂದಿನ ಬಾರಿ ಅವರು ಚುನಾವಣೆಗೆ ಸ್ಫರ್ಧಿಸಿ ಮತ್ತೊಂದು ಸಾಧನೆ ಮಾಡಲಿ
ಸಿದ್ದರಾಮಯ್ಯ ಮುಖ್ಯಮಂತ್ರಿ
ಗ್ರಾಮೀಣ ಭಾಗದ ಸಾಮಾನ್ಯ ವ್ಯಕ್ತಿ ಹೊರಟ್ಟಿ ಅವರು ಇಷ್ಟು ದೊಡ್ಡ ಸ್ಥಾನಕ್ಕೆ ಬರುತ್ತಾರೆ ಎಂದರೆ ಅವರಲ್ಲಿರುವ ಶಿಸ್ತುಬದ್ಧ ಬದುಕು. ಉತ್ತಮ ರಾಜಕೀಯ ವ್ಯಕ್ತಿತ್ವವುಳ್ಳ ಹೊರಟ್ಟಿ ಎಲ್ಲರಿಗೂ ಮಾದರಿ
ಯು.ಟಿ. ಖಾದರ್‌ ಸಭಾಧ್ಯಕ್ಷ ವಿಧಾನಸಭೆ
ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ನಿಮ್ಮೆಲ್ಲರ ಋಣ ಹೇಗೆ ತೀರಿಸಬೇಕೆಂದು ತಿಳಿಯುತ್ತಿಲ್ಲ.‌ ಯಾರಿಗೂ ದ್ರೋಹ ಬಗೆಯದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಪ್ರಮಾಣ ಮಾಡುತ್ತೇನೆ
ಬಸವರಾಜ ಹೊರಟ್ಟಿ ಸಭಾಪತಿ ವಿಧಾನ ಪರಿಷತ್‌
ಸಾಮಾನ್ಯ ಕುಟುಂಬದಿಂದ ಬಂದು ದಿಗ್ಗಜ ನಾಯಕರಾಗಿ ಬೆಳೆದ ಬಸವರಾಜ ಹೊರಟ್ಟಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಶಿಕ್ಷಕರಿಗೆ ಅವರೊಬ್ಬ ಮಹಾನ್‌ ನಾಯಕ
ಎಚ್.ಕೆ. ಪಾಟೀಲ ಸಚಿವ

ಸ್ನೇಹ ರಾಜಕಾರಣ ಬೇರೆ: ಸಿದ್ದರಾಮಯ್ಯ

‘ಮುಂಬರುವ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಅವರು ನಮ್ಮ ಪಕ್ಷವಲ್ಲದೆ ಬೇರೆ ಪಕ್ಷದಿಂದ ಸ್ಪರ್ಧಿಸಿದರೆ ಅವರ ವಿರುದ್ಧ ಪ್ರಚಾರ ನಡೆಸುವೆ. ವೈಯಕ್ತಿಕವಾಗಿ ಅವರ ಗೆಲುವಿಗೆ ಹಾರೈಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಹೊರಟ್ಟಿ ಅವರು ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ವಿಧಾನ ಪರಿಷತ್‌ ಸದಸ್ಯರಾಗಿ ಸಭಾಪತಿ ಆಗಿದ್ದಾರೆ. ಅವರ ಮೇಲೆ ಶಿಕ್ಷಕರಿಗೆ ಪ್ರೀತಿ–ವಿಶ್ವಾಸ ಇದ್ದ ಕಾರಣಕ್ಕೆ ಎಂಟು ಬಾರಿ ನಿರಂತರವಾಗಿ ಆಯ್ಕೆಯಾಗಿದ್ದು. ಅವರು ಮತ್ತೊಮ್ಮೆ ವಿಧಾನ ಪರಿಷತ್‌ ಸದಸ್ಯರಾಗಲಿ ಎಂದು ನಾನು ವೈಯಕ್ತಿಕವಾಗಿ ಹಾರೈಸುವೆ. ಆದರೆ ರಾಜಕಾರಣವೇ ಬೇರೆ ಸ್ನೇಹವೇ ಬೇರೆ’ ಎಂದರು.

‘ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತಕ್ಕೆ ಒಂದು ಮತ ಮಾತ್ರ ಕಡಿಮೆಯಿದೆ. ಮುಂದಿನ ಚುನಾವಣೆಯಲ್ಲಿ ಅದು ಸಿಗಬಹುದು ಎಂದುಕೊಂಡಿದ್ದೇನೆ. ಅಲ್ಲಿವರೆಗೆ ಹೊರಟ್ಟಿ ಅವರೇ ಸಭಾಪತಿಯಾಗಿ ಮುಂದುವರಿಯುತ್ತಾರೆ. ಸಭಾಪತಿಯಾಗಿ ಅವರು ನಿರ್ವಹಿಸುತ್ತಿರುವ ಕಾರ್ಯವೈಖರಿಗೆ ಎಲ್ಲ ಸದಸ್ಯರು ಖುಷಿಯಾಗಿದ್ದಾರೆ.‌ ಸರ್ಕಾರಕ್ಕೆ ಮುಜಗರ ಮಾಡುವ ಕೆಲಸವನ್ನು ಅವರು ಎಂದಿಗೂ ಮಾಡಿಲ್ಲ. ನಮ್ಮ ಪಕ್ಷದವರೇ ಸಭಾಪತಿಯಾಗಿದ್ದಾರೆ ಎನ್ನುವ ಭಾವ ನಮ್ಮಲ್ಲಿದೆ’ ಎಂದರು.

Cut-off box - ಅಪರೂಪದ ವ್ಯಕ್ತಿ ಹೊರಟ್ಟಿ: ಶೆಟ್ಟರ್‌ ‘ಸಭಾಪತಿ ಹೊರಟ್ಟಿ ಅವರನ್ನು ಪಕ್ಷಾತೀತವಾಗಿ ಸನ್ಮಾನಿಸುತ್ತಿರುವ ಈ ಕಾರ್ಯಕ್ರಮ ವಿಶೇಷವಾಗಿದೆ. ತಮ್ಮ ವೈಯಕ್ತಿಕ ಪ್ರಭಾವದಿಂದ ಅವರು ಶಿಕ್ಷಕರ ಮತಕ್ಷೇದಿಂದ ಆಯ್ಕೆಯಾಗಿ ಅವರ ಸೇವೆ ಮಾಡುತ್ತಿದ್ದಾರೆ. ಶಿಕ್ಷಕರ ಸಂಘಟನೆ ಮಾಡುತ್ತ ಪ್ರಾಯೋಗಿಕವಾಗಿ ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸ ಶ್ಲಾಘನೀಯ. ಉತ್ತರ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಪ್ರೌಢಶಾಲೆಗಳನ್ನು ಮಂಜೂರಿ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು ಹೊರಟ್ಟಿ ಅವರ ಕೆಲಸಕ್ಕೆ ಹಿಡಿದ ಕನ್ನಡಿ. ಚುನಾವಣೆಯಲ್ಲಿ ಎದುರಾಳಿಯಾಗಿದ್ದರೂ ಚುನಾವಣೆ ನಂತರ ಕೂಡಿ ಕೆಲಸ ಮಾಡುವ ಅಪರೂಪದ ವ್ಯಕ್ತಿತ್ವ ಅವರದ್ದಾಗಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.