ಹುಬ್ಬಳ್ಳಿ: ಸದೃಢ ದೇಹ ಹೊಂದುವುದು ಎಲ್ಲರ ಬಯಕೆ. ಅಂತಹ ಸದೃಢ ಮೈಕಟ್ಟಿನೊಂದಿಗೆ ದೇಹದಾರ್ಢ್ಯ (ಬಾಡಿ ಬಿಲ್ಡಿಂಗ್) ಸ್ಪರ್ಧೆಯಲ್ಲಿ ಅಮನ್ ರಫಿಕ್ ಶೇಖ್ ಮಿಂಚುತ್ತಿದ್ದಾರೆ.
ಕಾರವಾರದ ಅಮನ್, ಅಲ್ಲಿನ ಸದಾಶಿವಗಡದ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿ.
ಕೇರಳದ ಕಾಲಾಡಿಯ ಶ್ರೀಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ವರ್ಷ ಮಾರ್ಚ್‌ನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದ ಬೆಸ್ಟ್ ಫಿಸಿಕ್ ಚಾಂಪಿಯನ್‌ಷಿಪ್‌ನಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಅವರು, ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ಸ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
85 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು, ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಕ್ರೀಡಾಪಟು. ಯಾವುದೇ ತರಬೇತಿ ಇಲ್ಲದೆ ಸ್ವಅಭ್ಯಾಸದ ಮೂಲಕ ಸಾಧಿಸಿದ್ದು ವಿಶೇಷ.
ಕರ್ನಾಟಕ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್‌ನಿಂದ ಗೋಕರ್ಣದಲ್ಲಿ ಪ್ರಸಕ್ತ ವರ್ಷ ಮಾರ್ಚ್‌ನಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯ 80 ಕೆಜಿ ವಿಭಾಗದಲ್ಲಿ ಪ್ರಥಮ, ಫೆಡರೇಷನ್ ಕಪ್ ಆಯ್ಕೆಗಾಗಿ ಧಾರವಾಡದಲ್ಲಿ ಫೆಬ್ರುವರಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಸೇರಿದಂತೆ ಹಲವು ಚಾಂಪಿಯನ್‌ಷಿಪ್‌ಗಳಲ್ಲಿ ಅವರು ಪದಕ ಗೆದ್ದಿದ್ಧಾರೆ.
‘ಪ್ರಾಥಮಿಕ ಶಾಲೆಯಲ್ಲಿದ್ದಾಗ ಕಬಡ್ಡಿ, ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಎಸ್‌ಎಸ್‌ಎಲ್‌ಸಿಯಲ್ಲಿದ್ದಾಗ ಮೊದಲ ಬಾರಿಗೆ ಜಿಲ್ಲಾ ಮಟ್ಟದ ದೇಹಾರ್ಢ್ಯ ಸ್ಪರ್ದೆಯಲ್ಲಿ ಭಾಗವಹಿಸಿದೆ. ಖ್ಯಾತ ದೇಹದಾರ್ಢ್ಯ ಪಟು ಅರ್ನಾಲ್ಡ್ ನನಗೆ ಪ್ರೇರಣೆ’ ಎನ್ನುತ್ತಾರೆ ಅಮನ್.
‘ಪ್ರತಿ ದಿನ ಮೂರ್ನಾಲ್ಕು ಗಂಟೆ ಅಭ್ಯಾಸ ಮಾಡುತ್ತೇನೆ. ಫಿಟ್‌ನೆಸ್‌ಗಾಗಿ ಡಯಟ್, ಪೌಷ್ಟಿಕ ಆಹಾರ ಸೇವಿಸುವುದು ಮುಖ್ಯ. ಇದಕ್ಕಾಗಿ ಪ್ರತಿ ತಿಂಗಳು ₹30 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ’ ಎನ್ನುತ್ತಾರೆ ಅವರು.
‘ನನ್ನ ತಾಯಿ ಬ್ಯೂಟಿ ಪಾರ್ಲರ್ ನಡೆಸುತ್ತಾರೆ. ಅದರಿಂದ ಬರುವ ಆದಾಯದಲ್ಲೇ ನಮ್ಮ ಮನೆ ನಡೆಯಬೇಕು. ಅದರ ನಡುವೆ ನನ್ನ ಓದು, ಕ್ರಿಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮುಂದೆ ಇದೇ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿ, ಉದ್ಯೋಗ ಪಡೆದು ಅವರಿಗೆ ನೆರವಾಗಬೇಕು ಎಂಬುದು ನನ್ನ ಬಯಕೆ’ ಎಂದರು.
ಮುಂಬರುವ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲಬೇಕು ಎಂಬುದು ನನ್ನ ಗುರಿ. ಅದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದೇನೆಅಮನ್ ರಫಿಕ್ ಶೇಖ್ ದೇಹದಾರ್ಢ್ಯ ಪಟು
ಅಮನ್ ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿ ವಿ.ವಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆಶ್ರೀಪಾಲ ಕುರಕುರಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.