ADVERTISEMENT

ಸ್ತನ ಕ್ಯಾನ್ಸರ್‌ ಜಾಗೃತಿಗೆ ‘ಪಿಂಕ್‌ ಬಿಂದಿ’ ಅಭಿಯಾನ

ಎಚ್‌ಸಿಜಿ–ಎನ್‌ಎಂಆರ್‌ ಕ್ಯಾನ್ಸರ್‌ ಕೇರ್‌ ಸೆಂಟರ್‌

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 14:13 IST
Last Updated 2 ನವೆಂಬರ್ 2019, 14:13 IST
ಹುಬ್ಬಳ್ಳಿಯ ಎಚ್‌ಸಿಜಿ–ಎನ್‌ಎಂಆರ್‌ ಕ್ಯಾನ್ಸರ್‌ ಕೇರ್‌ ಸೆಂಟರ್‌ನಲ್ಲಿ ಶನಿವಾರ ನಡೆದ ಸ್ತನ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಜಯಕಿಶನ್‌ ಅಗಿವಾಲ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಎಚ್‌ಸಿಜಿ–ಎನ್‌ಎಂಆರ್‌ ಕ್ಯಾನ್ಸರ್‌ ಕೇರ್‌ ಸೆಂಟರ್‌ನಲ್ಲಿ ಶನಿವಾರ ನಡೆದ ಸ್ತನ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಜಯಕಿಶನ್‌ ಅಗಿವಾಲ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಸ್ತನ ಕ್ಯಾನ್ಸರ್‌ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸಲು ಎಚ್‌ಸಿಜಿ–ಎನ್‌ಎಂಆರ್‌ ಕ್ಯಾನ್ಸರ್‌ ಕೇರ್‌ ಸೆಂಟರ್‌ ವತಿಯಿಂದ ‘ಪಿಂಕ್‌ ಬಿಂದಿ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಕನ್ಸಲ್ಟೆಂಟ್‌ ರೇಡಿಯೇಷನ್‌ ಅಂಕಾಲಜಿ ಡಾ.ಸಂಜಯ ಮಿಶ್ರಾ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಡಿಸೆಂಬರ್‌ ಅಂತ್ಯದೊಳಗಾಗಿ 10 ಸಾವಿರ ಮಹಿಳೆಯರಿಗೆ ವಿಶೇಷ ವಿನ್ಯಾಸದ 30 ಕೆಂಪು ಹಣೆಬೊಟ್ಟುಗಳಿರುವ ಪ್ಯಾಕ್‌ ಅನ್ನು ವಿತರಿಸಲಾಗುವುದು. ಅದರಲ್ಲಿ ಒಂದು ಗುಲಾಬಿ ಹಣೆಬೊಟ್ಟು(ಪಿಂಕ್‌ ಬಿಂದಿ) ಇರಲಿದ್ದು, ಅದನ್ನು ಹಣೆಗೆ ಇಟ್ಟುಕೊಂಡ ದಿನದಂದು ಮಹಿಳೆಯರು ಸ್ತನ ಕ್ಯಾನ್ಸರ್‌ ಬಗ್ಗೆ ಸ್ವಯಂ ಪರೀಕ್ಷೆ ಮಾಡಿಕೊಳ್ಳುವಂತೆ ತಿಳಿಸಲಾಗುವುದು ಎಂದರು.

ಸ್ವಯಂ ಪರೀಕ್ಷೆ ವೇಳೆ ಸ್ತನದ ಆಕಾರದಲ್ಲಿ ಬದಲಾವಣೆ, ಸ್ತನದಲ್ಲಿ ಸಣ್ಣ ಸಣ್ಣ ಗಂಟುಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಕರ್ಪಿಸಬೇಕು. ಸ್ತನ ಕ್ಯಾನ್ಸರ್‌ ಇರುವುದು ಪ್ರಾಥಮಿಕ ಹಂತದಲ್ಲೆ ಕಂಡುಬಂದರೆ ಶೀಘ್ರ ಮತ್ತು ನಿಚ್ಚಿತವಾಗಿ ಗುಣಪಡಿಸಬಹುದಾಗಿದೆ ಎಂದು ಹೇಳಿದರು.

ADVERTISEMENT

ಯಾರಲ್ಲಿ ಕಂಡುಬರುತ್ತದೆ:

ಆಸ್ಪತ್ರೆಯ ಕನ್ಸಲ್ಟೆಂಟ್‌ ಸರ್ಜಿಕಲ್‌ ಅಂಕಾಲಜಿ ಡಾ.ರುದ್ರೇಶ ತಬಾಲಿ ಮಾತನಾಡಿ, ಸ್ತನ ಕ್ಯಾನ್ಸರ್‌ 50 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಕಾಣುವ ಒಂದು ಸಾಮಾನ್ಯ ಕಾಯಿಲೆಯಾಗಿದೆ. ನಗರ ಪ್ರದೇಶಗಳಲ್ಲಿ ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬರಿಗೆ ಈ ಕ್ಯಾನ್ಸರ್‌ ಕಾನಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.

ಅನುವಂಶಿಕವಾಗಿ, ಬಹಳ ತಡವಾಗಿ ಮಕ್ಕಳನ್ನು ಹೆರುವುದು ಅಥವಾ ಸಂತಾನ ಹೀನತೆಯಿಂದ, ಬಹು ಬೇಗನೆ ಋತುಮತಿ ಆಗುವುದರಿಂದ, ಹಾರ್ಮೋನ್‌ ರಿಪ್ಲೆಸ್‌ಮೆಂಟ್‌ ಥೆರಪಿಯನ್ನು ಬಹಳ ವರ್ಷಗಳ ವರೆಗೆ ತೆಗೆದುಕೊಳ್ಳುವುದರಿಂದ, ದೊಡ್ಡ ಆಕಾರದ ಸ್ತನ ಇರುವವರು, ಜೀವನ ಶೈಲಿ, ಋತುಬಂಧವಾದ ಮೇಲೆ ಬರುವ ಬೊಜ್ಜು, ಮಧ್ಯಪಾನದಿಂದಲೂ ಸ್ತನ ಕ್ಯಾನ್ಸರ್‌ ಕಂಡುಬರುತ್ತದೆ ಎಂದು ಹೇಳಿದರು.

ಸ್ತನ ಕ್ಯಾನ್ಸರ್‌ ಲಕ್ಷಣ:

ಸ್ತನ ಕ್ಯಾನ್ಸರ್‌ ಲಕ್ಷಣಗಳ ಕುರಿತು ಮಾಹಿತಿ ನೀಡಿದ ಡಾ.ಜಯಕಿಶನ್‌ ಅಗಿವಾಲ್‌, ಸ್ತನದ ಆಕಾರ ಹಾಗೂ ಅಳತೆಯಲ್ಲಿ ಬದಲಾವಣೆಯಾದರೆ, ಸ್ತನದ ಚರ್ಮ ವರಟಾದರೆ, ಸ್ತನದ ಸುತ್ತಮುತ್ತಲಿನ ಭಾಗದಲ್ಲಿ ಸಣ್ಣ ಕುಳಿಗಳು ಕಂಡುಬಂದರೆ ಅದು ಸ್ತನ ಕ್ಯಾನ್ಸರ್‌ ಲಕ್ಷಣ ಎಂದರು.

ಮೊಲೆಯ ತೊಟ್ಟುಗಳು ಹಿಂದು,ಮುಂದಾದರೆ; ಇಲ್ಲವೇ ಮುದುಡಿಕೊಂಡರೆ, ತೊಟ್ಟಿನಿಂದ ಜಿಗುಟಾದ ದ್ರವ ಅಥವಾ ರಕ್ತದ ವಸರುವಿಕೆ ಕಂಡುಬಂದರೆ, ತೊಟ್ಟಿನ ಸುತ್ತುವರಿದ ಭಾಗದಲ್ಲಿ ಒಂದು ತರಹದ ಮಚ್ಚೆ ಅಥವಾ ಇಸುಬು ಅಥವಾ ಕಜ್ಜಿ ತರಹ ಕಂಡುಬಂದರೆ ಅದು ಸ್ತನ ಕ್ಯಾನ್ಸರ್‌ ಎಂದು ಸುಲಭವಾಗಿ ಗುರುತಿಸಬಹುದಾಗಿದೆ ಎಂದು ಹೇಳಿದರು.

ಸೂಕ್ತ ಚಿಕಿತ್ಸೆ:

ಡಿಜಿಟಲ್‌ ಮ್ಯಾಮ್ಮೊಗ್ರಾಮ್‌, ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌, ಎಂ.ಆರ್‌.ಐ ಸ್ಕ್ಯಾನ್‌ ಮೂಲಕ ಸ್ತನ ಕ್ಯಾನ್ಸರ್‌ ಪತ್ತೆ ಹಚ್ಚಬಹುದಾಗಿದೆ ಎಂದರು.

ಶಸ್ತ್ರಚಿಕಿತ್ಸೆ, ಕಿಮೊಥೆರಪಿ ಹಾಗೂ ರೇಡಿಯೋಥೆರಫಿ ಹಾಗೂ ಹಾರ್ಮೊನ್‌ ಥೆರಪಿ ಮೂಲಕ ಸ್ತನದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಬಹುದಾಗಿದೆ ಎಂದು ತಿಳಿಸಿದರು.

ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಹೊಸಪೇಟೆ, ಕೊಪ್ಪಳ, ದಾವಣಗೆರೆ ಮತ್ತು ಗಂಗಾವತಿಯಲ್ಲಿ ಎಚ್‌ಸಿಜಿ–ಎನ್‌ಎಂಆರ್‌ ಕ್ಯಾನ್ಸರ್‌ ಕೇರ್‌ ಸೆಂಟರ್‌ ಘಟಕಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.

ಎಚ್‌ಸಿಜಿ–ಎನ್‌ಎಂಆರ್‌ ಕ್ಯಾನ್ಸರ್‌ ಕೇರ್‌ ಸೆಂಟರ್‌ನಲ್ಲಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖವಾಗಿರುವ ಪತ್ರಕರ್ತೆ ಕೃಷ್ಣಿ ಶಿರೂರ ಮತ್ತು ಕವಿತಾ ಕಾಕೋಳ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.